ಹೊಸನಗರ: ವರಾಹಿ, ಚಕ್ರಾ, ಸಾವೆಹಕ್ಕಲು ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವಿದ್ಯುತ್ ನಿಗಮದ ಮಾಸ್ತಿಕಟ್ಟೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
4 ದಶಕಗಳಿಂದ ನನೆಗುದಿಯಲ್ಲಿರುವ ಮುಳುಗಡೆ ಸಂತಸ್ತರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಜನಪ್ರತಿನಿಧಿ ಗಳು ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಅ ಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಭೂಮಿ, ಮನೆ ಮುಳುಗಡೆಯಾದ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ನೀಡಬೇಕು ಎಂಬ ಹೈಕೋರ್ಟ್ ಆದೇಶವನ್ನು ವಿದ್ಯುತ್ ನಿಗಮವು ಸಂಪೂರ್ಣವಾಗಿ ಪಾಲಿಸಿಲ್ಲ ಎಂದು ಆರೋಪಿಸಿದರು.
ಮುಳುಗಡೆಯಾದ ಭೂಮಿಗೆ ಪರ್ಯಾಯವಾಗಿ ಜಮೀನು ವಿತರಿಸಬೇಕು. ಹಿನ್ನೀರಿನ ಮೇಲುಗಡೆ ಕೃಷಿ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ವಾರಾಹಿ ವಿದ್ಯುತ್ ಯೋಜನೆಯಲ್ಲಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದ ರೈತರ ಮೇಲೆ ಕರ್ನಾಟಕ ವಿದ್ಯುತ್ ನಿಗಮವು ಹಾಕಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಪ್ರವೇಶ ನಿರಾಕರಣೆ: ವಿದ್ಯುತ್ ಯೋಜನೆಗಾಗಿ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರ ನ್ಯಾಯವಾದ ಪ್ರತಿಭಟನೆಗೆ ಯೋಜನಾ ಪ್ರದೇಶದಲ್ಲಿ ಪ್ರವೇಶ ನಿರಾಕರಣೆ ಮಾಡಿದ ಕಾರಣ ಸುಡು ಬಿಸಿಲಿನಲ್ಲಿ ರಸ್ತೆಯ ಪಕ್ಕದಲ್ಲಿ ಧರಣಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಸಂತ್ರಸ್ತರು ದೂರಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸ್ಥಳಕ್ಕೆ ಭೇಟಿ ನೀಡಿ, ಕಳೆದ 25 ವರ್ಷಗಳಿಂದ ಸಮಸ್ಯೆ ಬಗೆ ಹರಿಸದ ಶಾಸಕ ಕಿಮ್ಮನೆ ರತ್ನಾಕರ ಹಾಗೂ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಉಳುಕೊಪ್ಪ ಭಾಸ್ಕರ,
ರೈತ ಸಂಘದ ಅಧ್ಯಕ್ಷ ರವೀಂದ್ರ, ಪಚ್ಚಪ್ಪ, ಜಯಶೀಲಪ್ಪ ಗೌಡ ಮತ್ತಿತರರು ಇದ್ದರು.