Advertisement

ಪ್ರವಾಹ ಬಂದ್ರೂ ಬೆಂಬಿಡದ ಬರ

11:39 AM Oct 30, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಬಂದರೆ ಪ್ರವಾಹ, ಮಳೆ ಬರದಿದ್ದರೆ ಬರ ಎಂಬುದು ಪಾರಂಪರಿಕ ಎಂಬಂತಾಗಿದೆ. ರಾಜ್ಯ ಸರ್ಕಾರ ಪ್ರಸಕ್ತ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ ಜಿಲ್ಲೆಯ ಮೂರು ತಾಲೂಕು ಸ್ಥಾನ ಪಡೆದಿವೆ.

Advertisement

ಹೌದು, ಜಿಲ್ಲೆಯ ಹಳೆಯ ತಾಲೂಕು 6(ಹೊಸ ತಾಲೂಕು 3 ಹಾಗೂ ತೇರದಾಳ-1) ರಲ್ಲಿ ಜಿಲ್ಲೆಯ ಬಾದಾಮಿ, ಜಮಖಂಡಿ ಹಾಗೂ ಬೀಳಗಿ ತಾಲೂಕುಗಳನ್ನು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಎದುರಿಸಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಯಾವ ತಾಲೂಕಿನಲ್ಲೂ ಮಳೆ ಬಂದಿಲ್ಲ. ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ತೇವಾಂಶ ಕೊರತೆಯಿಂದ ಒಣಗಿ ಹೋಗಿವೆ. ಹೀಗಾಗಿ ಮುಂಗಾರು ಹಂಗಾಮಿಗೆ ಜಿಲ್ಲೆಯ ಅಷ್ಟೂ ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಬೇಕಿತ್ತು ಎಂಬ ಅಸಮಾಧಾನ ಮತ್ತೂಂದೆಡೆ ಕೇಳಿ ಬಂದಿದೆ.

ನಿಯಮಗಳೇನು ?: ಕೇಂದ್ರ ಸರ್ಕಾರದ 2016ರ ಬರ ಕೈಪಿಡಿ ಹಾಗೂ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ಬರ ಎಂದು ಘೋಷಣೆಗೆ ಕೆಲವು ಕಡ್ಡಾಯ ಮಾನದಂಡ ರೂಪಿಸಿದೆ. ವಾಡಿಕೆಗಿಂತ ಶೇ. 60 ಕಡಿಮೆ ಮಳೆಯಾದಲ್ಲಿ ಅಥವಾ ಸತತ ಮೂರುವಾರಗಳ ಕಾಲ ಮಳೆಯೇ ಆಗದಿದ್ದರೆ, ಅಧಿಕ ಶುಷ್ಕ ವಾತಾವರಣ, ತೇವಾಂಶ ಕೊರತೆ, ಬೆಳೆ ಬಿತ್ತನೆ ಪ್ರದೇಶ, ಅಂತರ್‌ ಜಲ ಕುಸಿತ ಮುಂತಾದ ಅಂಶ ಪರಿಗಣಿಸಿ, ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತಿದೆ. ಈ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ, ಅ.28ರಂದು ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಈ ತಾಲೂಕುಗಳಲ್ಲಿ ಜಿಲ್ಲೆಯ ಜಮಖಂಡಿ, ಬೀಳಗಿ ಹಾಗೂ ಬಾದಾಮಿ ತಾಲೂಕು ಪರಿಗಣಿಸಲಾಗಿದೆ.

ಬೆಳೆ ಪರಿಹಾರಕ್ಕೆ ಅನುಕೂಲ: ಜಿಲ್ಲೆಯಲ್ಲಿ ಸದ್ಯ ಮುಂಗಾರು ಹಂಗಾಮು ಪೂರ್ಣಗೊಂಡು ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಂಗಾರು ಹಂಗಾಮಿನ ಬರ ಘೋಷಣೆಯಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆಯೇ ಎಂಬ ಪ್ರಶ್ನೆ ಒಂದೆಡೆ ಕಾಡುತ್ತಿದೆ. ಬರ ಘೋಷಣೆಯ ಮುಖ್ಯ ಉದ್ದೇಶ, ಬಿತ್ತನೆ ಮಾಡಿದ ಬೆಳೆ ಬಾರದಿದ್ದಲ್ಲಿ ಆ ಬೆಳೆಗೆ ಪರಿಹಾರ ನೀಡುವ ಜತೆಗೆ ಭೂರಹಿತ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉದ್ಯೋಗ ಖಾತ್ರಿಯಡಿ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದೆ. ಆದರೆ, ಮುಂಗಾರು ಹಂಗಾಮು ಮುಗಿದು, ಹಾಳಾದ ಬೆಳೆ ಈಗ ಎಲ್ಲಿಂದ ತೋರಿಸುವುದು ಎಂಬುದು ರೈತರ ಪ್ರಶ್ನೆ.

ಎಲ್ಲೆಲ್ಲಿ ಮಳೆ ಕೊರತೆ: ಕಳೆದ ಆಗಸ್ಟ್‌ನಿಂದ ಜಿಲ್ಲೆಯಲ್ಲಿ ಪ್ರವಾಹ ಎದುರಾಗಿದೆ. ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿದ ಪರಿಣಾಮ 198 ಗ್ರಾಮಗಳು ಬಾಧಿತಗೊಂಡರೆ, 242 ಗ್ರಾಮಗಳ ಬೆಳೆ ಹಾನಿಯಾಗಿತ್ತು. ಪ್ರವಾಹದಿಂದ ಜಿಲ್ಲೆಯ ಜನರು ನಲುಗಿದ್ದರೆ ಇನ್ನು ಕಳೆದ ವಾರದ ತೀವ್ರ ಮಳೆಯಿಂದ 109 ಗ್ರಾಮಗಳ ಜನರು ತೊಂದರೆ ಅನುಭವಿಸಿದ್ದರು. ಇವೆಲ್ಲದರ ಮಧ್ಯೆ ಸರ್ಕಾರ, ಜಿಲ್ಲೆಯ ಮೂರು ತಾಲೂಕುಗಳನ್ನು ಮುಂಗಾರು ಹಂಗಾಮಿಗೆ ಬರವೆಂದು ಘೋಷಿಸಿದೆ.

Advertisement

ಜಿಲ್ಲಾಡಳಿತದ ಅಂಕಿ-ಅಂಶಗಳ ಪ್ರಕಾರ, 2019ರ ಜನವರಿಯಿಂದ ಮೇ ತಿಂಗಳವರೆಗೆ ವಾಡಿಕೆಯಷ್ಟೂ ಮಳೆ ಆಗಿರಲಿಲ್ಲ. ಆಗ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿತ್ತು. ಮುಂಗಾರು ಹಂಗಾಮು ಬರ ಪೀಡಿತ ಎಂದು ಘೋಷಿಸುವುದೇ ಆಗಿದ್ದರೆ, ಅಷ್ಟೂ ತಾಲೂಕು ಪರಿಗಣಿಸಬೇಕಿತ್ತು ಎಂಬುದು ಹಲವರ ಒತ್ತಾಯ.

ಮಳೆ ಪ್ರಮಾಣ ಎಷ್ಟು ?: ಜಿಲ್ಲೆಯ ಆರು ತಾಲೂಕುಗಳಲ್ಲಿ ವಾರ್ಷಿಕ 580.8 ಎಂಎಂ ಮಳೆ ಆಗಬೇಕು. ಅ.23ರ ವರೆಗೆ ಒಟ್ಟು 552.8 ಎಂಎಂ ಮಳೆಯಾಗಿದೆ. ಜನವರಿಯಲ್ಲಿ 1.3ಎಂಎಂ ಮಳೆಯಾಗಬೇಕಿತ್ತು. ಆದರೆ, 0.2 ಎಂಎಂ ಮಳೆಯಾಗಿತ್ತು. ಫೆಬ್ರವರಿಯಲ್ಲಿ 0.1ಎಂಎಂ, ಮಾರ್ಚ್‌ನಲ್ಲಿ 1.2ಎಂಎಂ, ಏಪ್ರಿಲ್‌ನಲ್ಲಿ 13.5 ಎಂಎಂ ಮಳೆಯಾಗಿತ್ತು. ವಾಸ್ತವದಲ್ಲಿ ಏಪ್ರಿಲ್‌ನಲ್ಲಿ 23.1ಎಂಎಂ ಮಳೆಯಾಗಬೇಕಿತ್ತು. ಮೇ ತಿಂಗಳಲ್ಲಿ 56.3 ಎಂಎಂ ಆಗಬೇಕಿದ್ದ ಮಳೆ, 22.2ಎಂಎಂ ಆಗಿತ್ತು. ಇನ್ನು ಪ್ರಮುಖವಾಗಿ ಮುಂಗಾರು ಬಿತ್ತನೆ ಹಂಗಾಮು ಆರಂಭಗೊಳ್ಳುವುದು ಜೂನ್‌ ತಿಂಗಳಲ್ಲಿ. ಆಗ ಜಿಲ್ಲೆಯಲ್ಲಿ 78 ಎಂಎಂ ಮಳೆಯಾಗಬೇಕಿದ್ದು, 104.3 ಎಂಎಂ ಮಳೆಯಾಗಿತ್ತು. ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ, ಇಡೀ ಜಿಲ್ಲೆಯಲ್ಲಿ ಜೂನ್‌ ತಿಂಗಳಲ್ಲಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಬಿತ್ತನೆ ಮಾಡಿದ ಬೆಳೆ ಬಹುತೇಕ ತೇವಾಂಶ ಕೊರತೆಯಿಂದ ಒಣಗಿತ್ತು. ಕೆಲವೆಡೆ ಮಳೆ ಬಂದರೆ, ಇನ್ನೂ ಕೆಲವೆಡೆ ಮಳೆ ಬಂದಿರಲಿಲ್ಲ.

ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಪ್ರವಾಹ ಬಂದಿದೆ. ಅದಕ್ಕೂ ಮುಂಚೆ ಜಿಲ್ಲೆಯ ಕೆಲವು ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ ಇನ್ನೂ ಕೆಲ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ತೇವಾಂಶ ಕೊರತೆಯಿಂದ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ಮಾಹಿತಿ ಪಡೆದು ಸರ್ಕಾರ ಬರ ಘೋಷಣೆ ಮಾಡಿದೆ. ಬರದಿಂದ ಹಾನಿಯಾದ ಬೆಳೆಗೆ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ಸಿಗಲಿದೆ.-ಗೋವಿಂದ ಕಾರಜೋಳ, ಡಿಸಿಎಂ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next