Advertisement
ಸದ್ಯ ಜಿಲ್ಲೆಯ ಮಾರುಕಟ್ಟೆಯಲ್ಲಿ ಕಿಲೋ ಬೀನ್ಸ್ 120 ರೂ., ಗಡಿ ದಾಟಿದರೆ ಕ್ಯಾರೆಟ್ 50 ರೂ., ನುಗ್ಗೆಕಾಯಿ 60 ರಿಂದ 80 ರೂ., ಬದನೆ 50 ರೂ., ಹಾಗಲಕಾಯಿ 60 ರೂ., ಹೀರೆಕಾಯಿ 40 ರಿಂದ 50 ರೂ., ಮೂಲಂಗಿ 40 ರೂ., ಹೂಕೋಸು 40 ರೂ., ಬಾಟಾನಿ 80 ರೂ., ಹೀಗೆ ವಿವಿಧ ತರಕಾರಿ ಬೆಳೆಗಳು ಬೆಲೆ ಏರಿಕೆಯಾಗಿವೆ. ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆಗೆ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಬಿಸಿ ಮುಟ್ಟಿಸುತ್ತಿದೆ.
Related Articles
Advertisement
ಬೆಳೆಯುವರೇ ಖರೀದಿಸುವ ಸ್ಥಿತಿ: ವಿಪರ್ಯಾಸದ ಸಂಗತಿ ಎಂದರೆ ತಮ್ಮ ಕೊಳವೆ ಬಾವಿಗಳಲ್ಲಿ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತಂದು ಕೈ ತುಂಬ ಹಣ ಸಂಪಾದಿಸುತ್ತಿದ್ದ ಗ್ರಾಮೀಣ ಪ್ರದೇಶದ ಸಣ್ಣ, ಪುಟ್ಟ ರೈತರು ಕೂಡ ಇಂದು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವ ದುಸ್ಥಿತಿ ಜಿಲ್ಲೆಯಲ್ಲಿ ಎದುರುರಾಗಿದೆ.
ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವ ಬೆನ್ನಲ್ಲೇ ರೈತರ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಕೃಷಿ ಚಟುವಟಿಕೆಗಳು ಸ್ತಬ್ದಗೊಂಡಿದ್ದು, ಕನಿಷ್ಠ ಹೂವು, ಹಣ್ಣು, ತರಕಾರಿ ಬೆಳೆಯಲು ನೀರಾವರಿ ಇಲ್ಲದೇ ರೈತರು ತಮ್ಮ ಕುಟುಂಬ ನಿರ್ವಹಣೆಗೆ ಬೇಕಾದ ತರಕಾರಿಯನ್ನು ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ಖರೀದಿಸುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.
ಬೆಲೆ ಏರಿಕೆ ಲಾಭ ರೈತರಿಗಿಲ್ಲ: ಬರಗಾಲದ ಪರಿಣಾಮ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು. ಇದರ ಪರಿಣಾಮ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಆದರೂ ಅಲ್ಪಸ್ವಲ್ಪ ತರಕಾರಿ ಬೆಳೆದಿರುವ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಲಾಭ ಸಿಗುತ್ತಿಲ್ಲ ಎಂಬ ಆರೋಪಗಳು ರೈತ ವಲಯದಿಂದ ಕೇಳಿ ಬರುತ್ತಿದೆ.
ಮಾರುಕಟ್ಟೆ ದಲ್ಲಾಳಿಗಳು, ವ್ಯಾಪಾರಸ್ಥರು ರೈತರಿಂದ ಅಗ್ಗದ ದರದಲ್ಲಿ ತರಕಾರಿ ಖರೀದಿಸಿ ಬಳಿಕ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬೆಲೆ ಏರಿಕೆಯ ಲಾಭ ನ್ಯಾಯಯುತವಾಗಿ ರೈತನಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಮಾರುಕಟ್ಟೆಯ ಪೈಕಿ ಈರುಳ್ಳಿ, ಆಲೂಗಡ್ಡೆ ಹೊರತಪಡಿಸಿದರೆ ಎಲ್ಲಾ ತರಕಾರಿ ಬೆಳೆಗಳು ಗಗನಕ್ಕೇರಿವೆ.
ಹೋಟೆಲ್ ಮಾಲೀಕರಿಗೂ ಗಾಯದ ಮೇಲೆ ಬರೆ: ಜಿಲ್ಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿರುವುದು ಸಹಜವಾಗಿಯೇ ಹೋಟೆಲ್ ಮಾಲೀಕರಿಗೆ ಹಾಗೂ ಮದುವೆ, ಗೃಹ ಪ್ರವೇಶ, ನಾಮಕರಣ ಮತ್ತಿತರ ಶುಭ ಕಾರ್ಯಗಳನ್ನು ನಡೆಸುತ್ತಿರುವ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೋಟೆಲ್ ಮಾಲೀಕರಿಗೆ ತರಕಾರಿ ಬೆಲೆ ಏರಿಕೆ ಸಹಜವಾಗಿಯೇ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನೂ ಮದುವೆ, ನಾಮಕರಣ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಸುವ ಸಾರ್ವಜನಿಕರಿಗೂ ತರಕಾರಿ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಕಾಸು ಕೊಟ್ಟರೂ ಬೇಡಿಕೆಗೆ ತಕ್ಕಂತೆ ತರಕಾರಿ ಸಿಗದೇ ಪರದಾಡುವಂತಹ ಸ್ಥಿತಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿದೆ.
ಕಳೆದೊಂದು ವಾರದಿಂದ ತರಕಾರಿ ಬೆಲೆ ಮಾರುಕಟ್ಟೆಯಲ್ಲಿ ವಿಪರೀತ ಹೆಚ್ಚಾಗಿದೆ. ಬೀನ್ಸ್, ಟೊಮೆಟೋ, ಮೆಣಸಿನಕಾಯಿ, ನುಗ್ಗೇಕಾಯಿ ಬೆಲೆ ಏರಿಕೆಯಾಗಿದೆ. ಮಳೆ ಕೊರತೆಯಿಂದ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಹೋಟೆಲ್ ನಡೆಸುವುದೇ ಕಷ್ಟ. ತರಕಾರಿ ಬೆಲೆ ಹೆಚ್ಚಳ ಆದರೆ ಆರ್ಥಿಕ ಹೊರೆ ಆಗುತ್ತದೆ. ಟೊಮೆಟೋ ಕೆ.ಜಿಗೆ 40 ರೂ. ಮುಟ್ಟಿದೆ. 50 ರೂ. ದಾಟಿದರೂ ಆಶ್ಚರ್ಯ ಪಡಬೇಕಿಲ್ಲ.-ಮುರಳೀಧರ್, ಹೋಟೆಲ್ ಮಾಲೀಕ, ಚಿಂತಾಮಣಿ