ಸುಬ್ರಹ್ಮಣ್ಯ : ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಉಕ್ಕೇರಿ ಪ್ರವಾಹ ಸೃಷ್ಟಿಸಿದ್ದ ಕುಮಾರಧಾರಾ ನದಿ ಈಗ ಭೀಕರ ಬರದ ಆತಂಕ ಮೂಡಿಸಿದೆ. ನದಿ ಪಾತ್ರದಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದ್ದು, ನೀರಿನ ಹರಿವಿನ ಮಟ್ಟ ತೀರಾ ಇಳಿಕೆ ಕಂಡಿದೆ. ನದಿಯ ಹೂಳೆತ್ತದಿದ್ದರೆ ಮುಂಗಾರು ವೇಳೆ ಮತ್ತೆ ದುರಂತ ಸಂಭವಿಸಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂಬ ಭಯ ನದಿ ಪಾತ್ರದ ಜನತೆಯನ್ನು ಕಾಡುತ್ತಿದೆ.
ಘಟ್ಟ ಪ್ರದೇಶದಲ್ಲಿ ಹುಟ್ಟಿ ಕರಾವಳಿ ಭಾಗಕ್ಕೆ ಹರಿಯುವ ಕುಮಾರಧಾರಾ ನದಿ ಮಳೆಗಾಲದಲ್ಲಿ ಪ್ರತಿ ವರ್ಷವೂ ನೆರೆಯಿಂದ ತುಂಬಿ ಹರಿಯುತ್ತದೆ. ಕಳೆದ ಬಾರಿ ಘಟ್ಟ ಪ್ರದೇಶದಲ್ಲಿ ಜಲಪ್ರಳಯದ ಜತೆಗೆ ಭಾರೀ ಭೂಕುಸಿತ ಸಂಭವಿಸಿತ್ತು. ಪರಿಣಾಮ ಬೆಟ್ಟ, ಗುಡ್ಡ ಗಳನ್ನು ಸೀಳಿ ನೀರು ನುಗ್ಗಿ ಬಂದಿತ್ತು. ನೀರಿನ ಜತೆಗೆ ಕಲ್ಲು, ಮರಗಳು ಹಾಗೂ ಮಣ್ಣು ಭಾರೀ ಪ್ರಮಾಣದಲ್ಲಿ ಕೊಚ್ಚಿ ಕೊಂಡು ಬಂದಿದ್ದು, ಕುಕ್ಕೆ ಕ್ಷೇತ್ರ ಸಹಿತ ನದಿ ಪಾತ್ರದ ಎಲ್ಲ ಕಡೆಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
ಒಂದೊಮ್ಮೆ ಭಾರೀ ನೆರೆ ಹಾವಳಿ ಸೃಷ್ಟಿಸಿದ್ದ ಈ ನದಿಯಲ್ಲಿ ಬೇಸಗೆ ಕಾಲಿಟ್ಟು ಕೆಲವೇ ದಿನಗಳಲ್ಲಿ ನೀರಿನ ಹರಿವು ಸೊರಗಿದೆ. ನದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ನದಿಯ ಉದ್ದಕ್ಕೂ ಅಲ್ಲಲ್ಲಿ ದೊಡ್ಡ ಗಾತ್ರದ, ಸಾಕಷ್ಟು ಆಳವಿರುವ ಕಯಗಳಿದ್ದವು. ಈಗ ಅವುಗಳಲ್ಲಿ ಹೂಳು ತುಂಬಿ ಮುಚ್ಚಿ ಹೋಗಿವೆ. ನದಿಯುದ್ದಕ್ಕೂ ಕಂಡು ಬರುತ್ತಿದ್ದ ಕಯಗಳು, ಬಂಡೆಕಲ್ಲುಗಳು ಹೂಳಿನಡಿ ಮರೆಯಾಗಿವೆ. ಹೀಗಾಗಿ, ನದಿಯ ಪಾತ್ರ ದೊಡ್ಡ ಮೈದಾನದಂತೆ ಗೋಚರಿಸುತ್ತಿದೆ.
ನದಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವುದು ಸ್ಥಳೀಯ ಜನತೆಯನ್ನು ಚಿಂತೆಗೀಡು ಮಾಡಿದೆ. ಕರಾಳ ದಿನಗಳ ನೆನಪು ನದಿ ಪಾತ್ರದ ಜನರನ್ನು ದಿಕ್ಕೆಡಿಸಿದೆ. ಇದೀಗ ನದಿಯಲ್ಲಿ ಹೂಳು ತುಂಬಿರುವ ಕಾರಣ ಮುಂದಿನ ಮುಂಗಾರು ಅವಧಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಈ ಅವಧಿಯಲ್ಲಿ ನೀರು ಮೇಲ್ಮಟ್ಟದಲ್ಲಿ ಹರಿಯುವ ಕಾರಣ ನೆರೆ ಸ್ಥಿತಿ ಉಲ್ಬಣಿಸಬಹುದು. ನೀರು ನದಿಯಲ್ಲಿ ಆಳಸ್ತರದಲ್ಲಿ ಹರಿಯದೇ ಇರುವುದು ಮತ್ತಷ್ಟು ದುರಂತಕ್ಕೆ ಅವಕಾಶ ನೀಡಬಹುದು. ನದಿಯ ಹೂಳು ತೆಗೆದಲ್ಲಿ ನೀರಿನ ಹರಿವಿಗೆ ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಎನ್ನುವುದನ್ನು ಪುರಾಣದ ಗ್ರಂಥಗಳು ಉಲ್ಲೇಖೀಸಿದೆ. ಈ ನದಿಯು ತನ್ನ ಜಲ ಸಮೃದ್ಧಿಯೊಂದಿಗೆ ಕುಕ್ಕೆ ಕ್ಷೇತ್ರ ವಾಸಿಗಳ ದಾಹವನ್ನು ತಣಿಸುತ್ತಿದೆ. ಜಿಲ್ಲೆಯ ಜನತೆಗೂ ಅನುಕೂಲವಾಗಿದೆ. ಸುಬ್ರಹ್ಮಣ್ಯ, ಉಪ್ಪಿ ನಂಗಡಿ ಇತ್ಯಾದಿ ಪ್ರದೇಶಗಳಲ್ಲಿ ದೊಡ್ಡ ಕಿಂಡಿ ಅಣೆಕಟ್ಟುಗಳ ಮೂಲಕ ಈ ನದಿಯ ನೀರನ್ನು ಹಿಡಿದಿಟ್ಟು ಕುಡಿಯಲು ಉಪಯೋಗಿಸುತ್ತಾರೆ. ಪುತ್ತೂರಿನಂತಹ ದೊಡ್ಡ ನಗರಗಳಿಗೆ ಕುಮಾರಧಾರಾ ನದಿ ನೀರನ್ನು ಒದಗಿಸುತ್ತಿದೆ. ಗ್ರಾಮೀಣ ಮತ್ತು ನಗರ ವಾಸಿಗಳ ತನಕ ನೀರುಣಿಸುವ ನದಿಯಲ್ಲಿ ಈಗ ನೀರಿನ ಒಳ ಹರಿವು ಕ್ಷೀಣಿಸಿದೆ.
ಪುಣ್ಯ ನದಿ
ಕುಮಾರಧಾರಾ ತೀರ್ಥವು ಭರತಖಂಡದ ಪವಿತ್ರತೀರ್ಥಗಳಲ್ಲಿ ಒಂದಾಗಿದೆ. ಕೃತಯುಗದಲ್ಲಿ ಇಂದ್ರದ್ಯುನ್ನುನೆಂಬ ರಾಜನು ಭೂಮಿಯ ಸಮಭಾಗದಲ್ಲಿ ಯಜ್ಞವನ್ನು ಮಾಡುತ್ತಿರಲು ಭೂದೇವಿಯು ಸಂತೃಪ್ತಳಾಗಿ ಭೂಮಿಯ ಗರ್ಭದಿಂದ ಉಕ್ಕಿ ಮೇಲೇರಿ ಪ್ರವಹಿಸಿದ ಸಮಸ್ತ ತೀರ್ಥಗಳ ಸಾರವೇ ಮಹೀ ನದಿ ಅಥವಾ ಧಾರಾ ನದಿ. ಕುಮಾರಸ್ವಾಮಿಗೆ ಕುಮಾರ ಪರ್ವತದಲ್ಲಿ ಈ ತೀರ್ಥದಿಂದ ದೇವಸೇನಾ ಪತಿಯಾಗಿ ಪಟ್ಟಾಭಿಷೇಕವಾದ ಮೇಲೆ ಕುಮಾರಧಾರಾ ನದಿಯೆಂದೂ ಪ್ರಸಿದ್ಧವಾಯಿತು ಎಂಬುದಾಗಿ ಸ್ಥಳ ಮಹಾತ್ಮೆ ತಿಳಿಸುತ್ತದೆ.
ಹೂಳೆತ್ತದಿದ್ದರೆ ತೊಂದರೆ ಖಂಡಿತ
ಕಳೆದ ಬಾರಿಯಂತೆ ಮುಂದಿನ ಮುಂಗಾರು ವೇಳೆಯೂ ಮಳೆ ಪ್ರಮಾಣ ಹೆಚ್ಚಿದ್ದರೆ ಮತ್ತಷ್ಟೂ ಜನವಸತಿ ಪ್ರದೇಶಗಳು ಮುಳುಗಡೆ ಗೊಂಡು ಭಾರೀ ನಷ್ಟ, ಪ್ರಾಣ ಹಾನಿ ಸಂಭವಿಸಬಹುದು. ಹೀಗಾಗಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ತುಂಬಿರುವ ಹೂಳು ತೆಗೆದರೆ ನೀರು ಸಂಗ್ರಹ ಹಾಗೂ ಹರಿವಿಗೆ ಅನುಕೂಲವಾಗುವುದು
.
– ಶಿಶುಪಾಲ ಜಾಡಿಮನೆ
ಕುಲ್ಕುಂದ, ಸ್ಥಳಿಯ ನಿವಾಸಿ