Advertisement

20 ವರ್ಷಗಳ ಬಳಿಕ ಬರದ ಛಾಯೆ

01:09 PM Mar 24, 2019 | Team Udayavani |

ಬೆಳ್ತಂಗಡಿ : ಸುಮಾರು 20 ವರ್ಷಗಳ ಬಳಿಕ ಬೆಳ್ತಂಗಡಿ ನಗರದಲ್ಲಿ ಬರದ ಛಾಯೆ ಲಕ್ಷಣ ಕಂಡುಬರುತ್ತಿದ್ದು, ಅಂತರ್ಜಲ ಮಟ್ಟ ಗಣನೀಯ ಕುಸಿತ ಕಂಡಿದೆ. ಇದರ ಪರಿಣಾಮ ನಗರದ ಜನತೆಗೆ ಕುಡಿಯುವ ನೀರು ಪೂರೈಕೆಗೆ ಬೆಳ್ತಂಗಡಿ ಪ.ಪಂ. ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸೋಮಾವತಿ ನದಿಯಲ್ಲಿ ನೀರಿನ ಒಳಹರಿವು ಸಂಪೂರ್ಣ ನಿಂತಿದ್ದು, ನೀರೆತ್ತಲು ನಿರ್ಮಿಸಿದ್ದ ತಾತ್ಕಾಲಿಕ ಕಟ್ಟದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕೊಳವೆಬಾವಿಗಳೇ ಗತಿಯಾಗಿವೆ. ಆದರೆ ಅಲ್ಲೂ ಅಂತರ್ಜಲ
ಬತ್ತಿಹೋದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಈ ಹಿಂದೆ ಪ್ರತಿದಿನ 1.05 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗ ಅದನ್ನು 0.75 ಎಂಎಲ್‌ಡಿಗೆ ಇಳಿಸಲಾ ಗಿದೆ. ಅಂದರೆ ಪ್ರತಿಯೊಬ್ಬರಿಗೂ 100 ಎಲ್‌ಪಿಸಿಡಿ ಆಧಾರದಲ್ಲಿ ಪೂರೈಕೆ ಮಾಡ ಲಾಗುತ್ತಿದೆ. ಪ.ಪಂ. ವ್ಯಾಪ್ತಿಯಲ್ಲಿ 14 ಕೊಳವೆ ಬಾವಿಗಳಿದ್ದು, 11ರಿಂದ ಮಾತ್ರ ನೀರು ತೆಗೆಯಲಾಗುತ್ತಿದೆ. ಆದರೆ ವಿದ್ಯುತ್‌ ವ್ಯತ್ಯಯಗೊಂಡರೆ ಪೂರೈಕೆಯೂ ಕಷ್ಟವಾ ಗಲಿದೆ. ಪ್ರಸ್ತುತ 3 ಕೊಳವೆಬಾವಿ ಪ್ರಸ್ತಾ ವನೆಗೆ ಮಂಜೂರಾತಿ ಸಿಕ್ಕಿದ್ದು, ಆದರೆ ಅದನ್ನು 1 ತಿಂಗಳ ಬಳಿಕವೇ ಕೊರೆಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸರು ತೆಗೆದರೂ ಲಾಭವಿಲ್ಲ
ಪಟ್ಟಣ ಪಂಚಾಯತ್‌ನ ಜಾಕ್‌ ವೆಲ್‌ ಬಳಿ ಸೋಮಾವತಿ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸಿ ನೀರು ತೆಗೆಯಲಾಗುತ್ತಿದ್ದು, ಈ ಹಿಂದೆ ಪ್ರತಿನಿತ್ಯ ಸುಮಾರು 4 ಲಕ್ಷ ಲೀ.ನಷ್ಟು ನೀರನ್ನು ನದಿಯಿಂದ ತೆಗೆಯಲಾಗುತ್ತಿತ್ತು.

ಆದರೆ ಈಗ 1 ಲಕ್ಷ ಲೀ. ಕೂಡಾ ಕಷ್ಟದಲ್ಲಿ ಸಿಗುತ್ತಿದೆ. ಹೀಗಾಗಿ ನೀರು ಸಂಗ್ರಹವಾಗಬೇಕು ಎಂದು ಅಲ್ಲಿನ ಸುತ್ತಮುತ್ತಲ ಕೆಸರನ್ನು ಜೆಸಿಬಿ ಮೂಲಕ ತೆಗೆದರೂ ದೊಡ್ಡ ಪ್ರಯೋಜನವಾಗಿಲ್ಲ. ಒಳಹರಿವು ಪೂರ್ತಿ ನಿಂತಿರುವುದರಿಂದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

1,423 ಕನೆಕ್ಷನ್‌ ಮಾತ್ರ
ಬೆಳ್ತಂಗಡಿ ನಗರದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 7,746 ಆಗಿದ್ದು, ಒಟ್ಟು ಸುಮಾರು 3,300ರಷ್ಟು ಮನೆಗಳಿವೆ. ಆದರೆ ವಾಣಿಜ್ಯ ಸಂಪರ್ಕಗಳೂ ಸೇರಿ ಪಟ್ಟಣ ಪಂಚಾಯತ್‌ ನಿಂದ ನೀರಿನ ಸಂಪರ್ಕ ಪಡೆದಿರುವುದು ಕೇವಲ 1,423 ಮಂದಿ ಮಾತ್ರ. ಅಂದರೆ ಉಳಿದವರಿಗೆ ಸ್ವಂತ ಕೊಳವೆಬಾವಿ, ಬಾವಿಗಳಿವೆ ಎಂದರ್ಥ. ಇಲ್ಲದೇ ಇರುತ್ತಿದ್ದರೆ ಈಗಾಗಲೇ ಬೆಳ್ತಂಗಡಿ ನಗರ ನೀರಿಲ್ಲದೆ ಪರದಾಡಬೇಕಿತ್ತು.

Advertisement

ಪೋಲು ಮಾಡದಂತೆ ಮನವಿ
ಬೆಳ್ತಂಗಡಿ ನಗರದಲ್ಲಿ ಕಟ್ಟಡ ಕಾಮಗಾರಿಗಾಗಿ ಸುಮಾರು 30 ನೀರಿನ ಸಂಪರ್ಕ ನೀಡಲಾಗಿದ್ದು, ಪಟ್ಟಣ ಪಂಚಾಯತ್‌ ಅಂತಹವರಿಗೆ ಈಗಾಗಲೇ ನೋಟಿಸ್‌ ನೀಡಿ ನೀರು ಬಳಕೆ ಮಾಡದಂತೆ ಮನವಿ ಮಾಡಿದೆ. ಜತೆಗೆ ಪಟ್ಟಣ ಪಂಚಾಯತ್‌ ನಿಂದ ನೀರು ಪಡೆಯುವ ಎಲ್ಲರೂ ನೀರಿನ ಬಳಕೆ ಕಡಿಮೆ ಮಾಡಿ, ವಾಹನ ಹಾಗೂ ಕೃಷಿ, ಹೂವಿನ ಗಿಡಗಳಿಗೆ ನೀರು ಹಾಕಬಾರದು. ಜತೆಗೆ ಇತರ ಯಾವುದೇ ರೀತಿಯಲ್ಲಿ ನೀರು ಪೋಲು ಮಾಡದಂತೆ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೆ 8 ಗಂಟೆ, ಈಗ ಬರೀ 2 ಗಂಟೆ
ಬೇಸಗೆ ಆರಂಭದ ಮೊದಲು ಪ.ಪಂ. ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆ ಆಧಾರದಲ್ಲಿ ಬರೀ 2 ಗಂಟೆ ಮಾತ್ರ ನೀರು ಕೊಡಬೇಕಾದ ಸ್ಥಿತಿ ಇದೆ. ಆದರೆ ಪೂರ್ಣ ಪ್ರಮಾಣದ ಮಳೆಗಾಲ ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿ ಇದ್ದು, ಮುಂದೆ ಪರಿಸ್ಥಿತಿ ಹೇಗಾಗಬಹುದೆಂಬ ಭೀತಿ ಇದೆ.

ಗಣನೀಯ ಇಳಿಕೆ
ಸುಮಾರು 20 ವರ್ಷಗಳ ಬಳಿಕ ನದಿಯಲ್ಲಿ ನೀರು ಗಣನೀಯ ಇಳಿಕೆಯಾಗಿದ್ದು, ಈಗ ಕೊಳವೆ ಬಾವಿಗೆ ಹೆಚ್ಚಿನ ಒತ್ತು ನೀಡಿ ಜನರಿಗೆ ತೊಂದರೆ ಆಗದಂತೆ ನೀರು ಪೂರೈಕೆಗೆ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ನಿತ್ಯ ನೀರಿನ ಪ್ರಮಾಣ ಒಟ್ಟು 0.75 ಎಂಎಲ್‌ಡಿಗೆ ಇಳಿದಿದೆ. ಪ.ಪಂ.ನ ಜನತೆಯೂ ನೀರು ಪೋಲು ಮಾಡದೆ ಸಹಕಾರ ನೀಡಬೇಕಿದೆ.
– ಮಹಾವೀರ ಆರಿಗ
ಎಂಜಿನಿಯರ್‌, ಪ.ಪಂ. ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next