Advertisement

ಮಳೆ ಕೊರತೆಯಿಂದ ಬರದ ಛಾಯೆ!

04:41 PM Jul 28, 2018 | |

ಬೀದರ: ಆಕಾಶದಲ್ಲಿ ಕರಿ ಮೋಡಗಳಿದ್ದರೂ ಮಳೆಯಾಗದೇ ಬಿತ್ತಿದ ಬೆಳೆ ಕಣ್ಣೆದುರಿಗೆ ಒಣಗುತ್ತಿರುವುದನ್ನು ನೋಡಿ ರೈತರು ಅಕ್ಷರಶಃ ಮರುಗುತ್ತಿದ್ದಾರೆ. ಇದರಿಂದ ಈ ಬಾರಿ ಕಾಯಂ ಬರಗಾಲವಾಗಲಿದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.

Advertisement

ಸುಮಾರು ಅರ್ಧ ಮಳೆಗಾಲ ಪೂರ್ತಿಯಾದರೂ ನಿಗದಿತ ಪ್ರಮಾಣದ ಮಳೆಯಾಗಿಲ್ಲ. ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬೆಳೆ ಬರುವುದು ಖಚಿತವಿಲ್ಲದಾಗಿದೆ. ಅಲ್ಪ ಕಾಲಿಕ ಬೆಳೆಗಳಾದ ಹೆಸರು, ಉದ್ದು ಬೆಳೆಗಳ ಮೇಲಿನ ಭರವಸೆ ಕಳೆದುಕೊಂಡಿರುವ ರೈತರು ಸೋಯಾಬಿನ್‌, ಹೈಬ್ರಿàಡ್‌ ಜೋಳ, ತೊಗರಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೋಡಗಳು ಕಟ್ಟುವುದು ಹಾಗೂ ಚದುರಿ ಹೋಗುವುದು ನಿತ್ಯದ ಆಟವಾಗಿದೆ. ಎರಡು ವರ್ಷಗಳ ಹಿಂದೆ ಗಡಿ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಕಾಲ ಬರದ ಛಾಯೆ ಆವರಿಸಿತ್ತು. ಆ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿತ್ತು. ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಣೆ ಕಾರ್ಯ ಕೂಡ ಮಾಡಿತ್ತು.

ಕರಿ ಮೋಡಗಳು: ಆರಂಭದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಹುರುಪಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜಿಲ್ಲೆಯ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿದು ಭರವಸೆ ಮೂಡಿಸಿತ್ತು. ಜೂನ್‌ ಅಂತ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಆಯಿತು. ಬಳಿಕ ಸ್ಥಗಿತಗೊಂಡು ಇತ್ತ ಸುಳಿಯುತ್ತಲೂ ಇಲ್ಲ. ಕೆಲ ಕಡೆ ತುಂತುರು ಹನಿ ಚೆಲ್ಲಿದರೂ ಪ್ರಯೋಜನವಾಗುತ್ತಿಲ್ಲ. ಹೊಲಗಳಲ್ಲಿ ಮಣ್ಣು ಬಿರುಕು ಬಿಡುತ್ತಿದ್ದು, ಬೆಳೆಗಳು ಒಣಗಲಾರಂಭಿಸಿವೆ. ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಬೇಸಿಗೆ ಅನುಭವವಾಗುತ್ತಿದೆ.

ಬಿತ್ತನೆ ಪ್ರಮಾಣ: ಜಿಲ್ಲೆಯಲ್ಲಿನ ಒಟ್ಟಾರೆ 3.39 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯ ಪೈಕಿ 3.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ. ಒಟ್ಟಾರೆ ಶೇ.95ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮಳೆಯ ಕೊರತೆಯಿಂದ ಸೋಯಾ, ಹೆಸರು, ಉದ್ದು ಬೆಳೆಗಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆಗಳಿದ್ದು, ಈ ವರ್ಷ ಜಿಲ್ಲೆಯ ರೈತರು ಸುಮಾರು 1.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡಿದ್ದಾರೆ. 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು, 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಗಳ ಬಿತ್ತನೆ ಮಾಡಲಾಗಿದ್ದು, ಮಳೆಗಾಗಿ ದೇವರಲ್ಲಿ ರೈತರು ಪ್ರಾರ್ಥಿಸುತ್ತಿದ್ದಾರೆ.

ಮಳೆ ಪ್ರಮಾಣ: ಜೂನ್‌ ತಿಂಗಳಿಂದ ಜುಲೈ 27ರ ವರೆಗೆ ಸರಾಸರಿ 289.70 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 237.87 ಮಿ.ಮೀ ಮಳೆಯಾಗಿದ್ದು, ಸರಾಸರಿ ಶೇ.18ರಷ್ಟು ಮಳೆ ಕೊರತೆ ಎದುರಾಗಿದೆ. ಜುಲೈ ತಿಂಗಳ ಮಳೆ ಪ್ರಮಾಣ
ನೋಡುವುದಾದರೆ ಸರಾಸರಿ 162.20 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 89.46 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ. 45ರಷ್ಟು ಮಳೆ ಕೊರತೆ ಎದುರಾಗಿದೆ. ಬೆಳೆಗಳ ಬೆಳವಣಿಗೆ ಹಂತದಲ್ಲೇ ಮಳೆ ಕೊರತೆಯಾದರೆ ಇಳುವರಿ ಗಣನೀಯವಾಗಿ ಕುಂಠಿತಗೊಳ್ಳುತ್ತದೆ ಎನ್ನಲಾಗಿದೆ.

Advertisement

ಕೃಷಿ ಕೂಲಿಕಾರರ ಗುಳೆ: ಈ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಕೃಷಿ ಕೂಲಿಕಾರರು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯ ವಿವಿಧೆಡೆ ಕೂಲಿ ಕಾರ್ಮಿಕರ ಕೈಗೆ ಕೆಲಸ ಇಲ್ಲದಂತಾಗಿದ್ದು, ಶೋಚನೀಯ ಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಸ್ಥಿತಿ ಇನ್ನೆರಡು ವಾರ ಹೀಗೇ ಮುಂದುವರಿದರೆ ಬಿತ್ತಿದ ಯಾವ ಬೆಳೆಗಳ ಮೇಲೂ ರೈತರು ಭರವಸೆ ಇಟ್ಟುಕೊಳ್ಳುವಹಾಗಿಲ್ಲ ಎನ್ನುತ್ತಾರೆ ಪ್ರಗತಿಪರ ಕೃಷಿಕರು.

ಜಿಲ್ಲೆಯಲ್ಲಿ ಈ ವರ್ಷ ಸರಾಸರಿ ಮಳೆ ಪ್ರಮಾಣದಲ್ಲಿ ಸಾಕಷ್ಟು ಕೊರತೆಯಾಗಿದೆ. ಸದ್ಯ ಉದ್ದು, ಹೆಸರು ಹಾಗೂ ಸೋಯಾ ಬೆಳೆಗಳಿಗೆ ಮಳೆಯ ಅವಶ್ಯಕತೆ ಹೆಚ್ಚಿದೆ. ತೊಗರಿ, ಕಬ್ಬು ಸೇರಿದಂತೆ ಇತರೆ ಬೆಳೆಗಳು ಇನ್ನೂ ಕೆಲದಿನಗಳ ಕಾಲ ಮಳೆ ಸುರಿಯದಿದ್ದರೂ ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಮುಂದಿನ ಒಂದು ವಾರದಲ್ಲಿ ಮಳೆ ಸುರಿಯದಿದ್ದರೆ ಬೆಳೆಗಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಬೆಳೆಗಳನ್ನು ವೀಕ್ಷಿಸಲು ಸಂಚರಿಸುತ್ತಿದ್ದು, ಬೆಳೆಗಳಿಗೆ ರೋಗಬಾಧೆ ಕಂಡುಬಂದಲ್ಲಿ ರೈತರಿಗೆ ಕೂಡಲೆ ಔಷಧಿ ವಿತರಣೆಗೆ ಇಲಾಖೆ ಸಜ್ಜಾಗಿದೆ.
 ಜಿಯಾ ಉಲ್‌ ಹಕ್‌,ಕೃಷಿ ಜಂಟಿ ನಿರ್ದೇಶಕ

ಜಿಲ್ಲೆಯಲ್ಲಿನ ಬಿತ್ತನೆ ಕಾರ್ಯ ಮುಗಿದ ನಂತರ ಉದ್ಯೋಗ ಖಾತ್ರಿ ಆರಂಭಕ್ಕೆ ಸೂಚಿಸಲಾಗಿದೆ. ಉದ್ಯೋಗ ಖಾತ್ರಿ
ಯೋಜನೆಯಡಿ ಕೆಲಸ ಮಾಡಲು ಇಚ್ಚಿಸುವವರಿಗೆ ಕೆಲಸ ನೀಡುವಂತೆ ಎಲ್ಲಾ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೂಲಿಕಾರರ ಕೈಗೆ ಕೆಲಸ ನೀಡುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು.
 ಡಾ| ಆರ್‌.ಸೆಲ್ವಮಣಿ, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next