Advertisement

ಬರ: ಜೀವ ಜಲಕ್ಕೆ ನಗರವಾಸಿಗಳ ಪರದಾಟ!

03:55 PM Oct 08, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಪರಿಣಾಮ ಆವರಿಸಿರುವ ಬರಗಾಲ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಂಕಷ್ಟು ತಂದೊಡ್ಡಿದ್ದು, ಜನರಿಗೆ ಅಗತ್ಯವಾದ ನೀರು ನಿತ್ಯ ಪೂರೈಕೆ ಆಗದೇ ನಗರ ನಿವಾಸಿಗಳು ಜೀವ ಜಲಕ್ಕಾಗಿ ಪರಿತಪಿಸುವ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Advertisement

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಭೌಗೋಳಿಕವಾಗಿ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು ಜನಸಂಖ್ಯೆ, ವಾಸದ ಕುಟುಂಬಗಳು ಹೆಚ್ಚುತ್ತಿವೆ. ಆದರೆ ಕುಡಿಯುವ ನೀರಿಗೆ ಒಂದರೆಡು ನಗರ, ಪಟ್ಟಣಗಳು ಬಿಟ್ಟರೆ ಉಳಿದವುಗಳಿಗೆ ಕೊಳವೆ ಬಾವಿಗಳೇ ಅಶ್ರಯವಾಗಿದ್ದು ಸದ್ಯ ಮಳೆ ಕೊರತೆಯಿಂದ ನೀರಿನ ಅಭಾವ ಸೃಷ್ಠಿಯಾಗಿ ಬರದ ನರ್ತನಕ್ಕೆ ಜನ ಕಂಗಾಲಾಗುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರದಲ್ಲಿ ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ಕುಡಿಯು ವ ನೀರು ಪೂರೈಕೆ ಆಗುತ್ತಿದ್ದು ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಜಿಲ್ಲಾ ಕೇಂದ್ರಕ್ಕೆ ನಿತ್ಯ 10 ಎಂಎಲ್‌ಡಿ ನೀರಿನ ಬೇಡಿಕೆ ಇದ್ದರೂ ಸದ್ಯಕ್ಕೆ ಪೂರೈಕೆ ಆಗುತ್ತಿರು ವುದು ಕೇವಲ 8 ಎಂಎಲ್‌ಡಿ ನೀರು ಮಾತ್ರ. ಅದೇ ರೀತಿ ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆ, ಇತ್ತೀಚೆಗೆ ಭಕ್ತರಹಳ್ಳಿ ಅರಸಿಕೆರೆ ನೀರು ಪೂರೈಕೆ ಆಗುತ್ತಿದ್ದು, ಸದ್ಯ ಮಳೆ ಇಲ್ಲದ ಕಾರಣ ಎರಡು ಕೆರೆಗಳಲ್ಲಿ ನೀರು ಸಂಗ್ರಹ ಕುಸಿಯುತ್ತಿದೆ. ಚಿಂತಾಮಣಿ ನಗರಕ್ಕೆ ನಿತ್ಯ 12 ಎಂಎಲ್‌ಡಿ ನೀರು ಅವಶ್ಯಕತೆ ಇದ್ದರೂ ಸದ್ಯ 8 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಗೌರಿಬಿದನೂರಿ ಗೆ 7.50 ಎಂಎಲ್‌ಡಿ ನೀರಿನ ಬೇಡಿಕೆ ಇದ್ದರೂ ನಿತ್ಯ ಈಗ ಕೇವಲ 5 ಎಂಎಲ್‌ಡಿ ನೀರು ಮಾತ್ರ ಪೂರೈಕೆ ಆಗುತ್ತಿದೆ.

ಇಡೀ ಗೌರಿಬಿದನೂರು ಪಟ್ಟಣ ಕೊಳವೆ ಬಾವಿಗಳನ್ನೆ ಅಶ್ರಯಿಸಬೇಕಿದ್ದು ಯಾವುದೇ ಕೆರೆ, ಕಾಲುವೆಗಳ ಅಶ್ರಯವಿಲ್ಲ. ಇನ್ನೂ ಶಿಡ್ಲಘಟ್ಟ ಕೂಡ ಪಟ್ಟಣ ಇತ್ತೀಚೆಗೆ ಬೆಳೆಯುತ್ತಿದ್ದು ನಿತ್ಯ 8 ಎಂಎಲ್‌ಡಿ ನೀರಿನ ಅಶವ್ಯಕತೆ ಇದೆ. ಕೇವಲ 3.5 ಎಂಎಲ್‌ಡಿ ನೀರು ಮಾತ್ರ ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳ ಮೂಲಕವೇ ನೀರು ಪೂರೈಸಲಾಗುತ್ತಿದ್ದು ಸದ್ಯ ಮಳೆ ಕೊರತೆಯಿಂದ ಅಂತರ್ಜಲ ಬಳಕೆ ಹೆಚ್ಚಾದಂತೆ ಕೊಳವೆ ಬಾವಿಗಳಲ್ಲಿ ನೀರಿನ ಅಲಭ್ಯತೆ ಹೆಚ್ಚಾಗುವ ಆತಂಕ ಇದೆ. ಬಾಗೇಪಲ್ಲಿ ಪಟ್ಟಣಕ್ಕೆ ನಿತ್ಯ 4 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು ಸದ್ಯ 3.5 ಎಂಎಲ್‌ಡಿ ನೀರು ಸಿಗುತ್ತಿದೆ. ಅಲ್ಲಿ ಚಿತ್ರಾವತಿ ಡ್ಯಾಂ ಇರುವ ಕಾರಣ ಸದ್ಯಕ್ಕೆ ನೀರಿನ ಕೊರತೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ ಬೇಸಿಗೆ ಅವಧಿಗೆ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಗುಡಿಬಂಡೆಗೆ ನಿತ್ಯ 1.60 ಎಂಎಲ್‌ಡಿ ನೀರು ಅವಶ್ಯಕತೆ ಸದ್ಯ. 1.2 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಕೊಳವೆ ಬಾವಿಗಳ ಜೊತೆಗೆ ಅಮಾನಿ ಬೈರಸಾಗರ ಕೆರೆ ಇರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಾದ ಅಧಿಕಾರಿಗಳು ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ಡ್ಯಾಂಗಳಲ್ಲಿ ನೀರು ಸಂಗ್ರಹ ಕುಸಿತ: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಅಶ್ರಯವಾಗಿರುವ ಡ್ಯಾಂ ಹಾಗೂ ಕೆರೆಗಳಲ್ಲಿ ಕೂಡ ತೀವ್ರ ಮಳೆ ಕೊರತೆಯಿಂದ ನೀರಿನ ಸಂಗ್ರಹ ಕುಸಿಯ ತೊಡಗಿದೆ. ಚಿಂತಾಮಣಿಗೆ ನೀರು ಪೂರೈಸುವ ಕನ್ನಂಪಲ್ಲಿ ಕೆರೆ ಅರ್ಧ ಖಾಲಿ ಆಗಿದೆ. ಬಾಗೇಪಲ್ಲಿ ಚಿತ್ರಾವಳಿ ಡ್ಯಾಂ, ಚಿಕ್ಕಬಳ್ಳಾಪುರದ ಜಕ್ಕಲಮಡಗು ಜಲಾಶಯದ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿಯುತ್ತಿದೆ. ಉಳಿದಂತೆ ಶಿಡ್ಲಘಟ್ಟ, ಗೌರಿಬಿದನೂರು ಪಟ್ಟಣಗಳು ಸಂಪೂರ್ಣ ಕೊಳವೆ ಬಾವಿಗಳನ್ನೆ ಕುಡಿ ಯುವ ನೀರಿಗೆ ಅಶ್ರಯಿಸಿದ್ದು, ಮಳೆ ಕೊರತೆ ಯಿಂದ ಕೊಳವೆ ಬಾವಿಗಳು ಕೈ ಕೊಟ್ಟರೆ ಜೀವ ಜಲಕ್ಕಾಗಿ ಇನ್ನಷ್ಟು ಪಡಿಪಾಟಲು ಎದುರಿಸ ಬೇಕಾಗುತ್ತದೆ.

ನಿತ್ಯ ಬೇಕು 43 ಎಂಎಲ್‌ಡಿ ನೀರು, 29 ಎಂಎಲ್‌ಡಿ ನೀರು ಪೂರೈಕೆ!: ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು,. ಶಿಡ್ಲಘಟ್ಟ ಸೇರಿ 4 ನಗರಸಭೆ, ಬಾಗೇಪಲ್ಲಿ 1 ಪುರಸಭೆ ಹಾಗೂ ಗುಡಿಬಂಡೆ 1 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 6 ನಗರ ಸ್ಥಳೀಯ ಸಂಸ್ಥೆಗಳು ಇವೆ. ಆದರೆ ನಿತ್ಯ ಇವುಗಳಿಗೆ ಕನಿಷ್ಠ 43.1 ಎಂಎಲ್‌ಡಿ ನೀರು ಬೇಕು, ಆದರೆ ಸದ್ಯ ಪೂರೈಕೆ ಆಗುತ್ತಿರುವುದು ಮಾತ್ರ ಕೇವಲ 29.20 ಎಂಎಲ್‌ಡಿ ನೀರು ಮಾತ್ರ ಇನ್ನೂ 13.9 ಎಂಎಲ್‌ಡಿ ಯಷ್ಟು ನೀರು ಕೊರತೆ ಉಂಟಾಗಿ ನಗರದ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗೆ ಅವಶ್ಯಕವಾದ ನೀರಿನ ಸೌಕರ್ಯ ಇಲ್ಲದೇ ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ.

Advertisement

32,607 ಮನೆಗಳಿಗೆ ನಳಗಳ ಸಂಪರ್ಕವೇ ಇಲ್ಲ!: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಬರೊಬ್ಬರಿ 68,939 ಮನೆಗಳು ಇವೆ. ಆದರೆ ಆ ಪೈಕಿ ಇಲ್ಲಿವರೆಗೂ ಮನೆಯೊಳಗೆ ನಳ ಸಂಪರ್ಕ ಹೊಂದಲು ಸಾಧ್ಯವಾಗಿರುವುದು ಕೇವಲ 36,332 ಮನೆಗಳು ಮಾತ್ರ. ಇನ್ನೂ ಜಿಲ್ಲೆಯಲ್ಲಿ 32,607 ಮನೆಗಳು ನಳ ಸಂಪರ್ಕ ಹೊಂದಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 596 ಸರ್ಕಾರಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದು, ಸದ್ಯ 20ಕ್ಕೂ ಹೆಚ್ಚು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದೆ. ಹಿಂಗಾರು ಮಳೆ ಆಗದೇ ಹೋದರೆ ಬರುವ ಮಾರ್ಚ್‌, ಏಪ್ರಿಲ್‌ ತಿಂಗಳ ಬೇಸಿಗೆ ಹೊತ್ತಿಗೆ ಜಿಲ್ಲೆಯಲ್ಲಿ ನೀರಿನ ಬವಣೆ ಇನ್ನಷ್ಟು ವ್ಯಾಪಕವಾಗಲಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next