ಕಲಬುರಗಿ: ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಗೆ ದಿಢೀರ್ ಮುಹೂರ್ತ ನಿಗದಿಯಾಗಿದೆ ಆದರೂ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡದಿರುವುದನ್ನು ಪ್ರಮುಖವಾಗಿ ಕಾಣಲಾಗುತ್ತಿದೆ.
ಯಾವುದೇ ಚುನಾವಣೆ ಎದುರಾಗುವ ಮುಂಚೆಯೇ ಸ್ಪರ್ಧಾ ಆಕಾಂಕ್ಷಿಗಳಲ್ಲಿ ದೊಡ್ಡ ಪೈಪೋಟಿಯೇ ಏರ್ಪಡುತ್ತಿತ್ತು. ಆದರೆ ಪ್ರಸಕ್ತವಾಗಿ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಾ ಅಭ್ಯರ್ಥಿಗಳ ಪೈಪೋಟಿ ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಂತೂ ಅಭ್ಯರ್ಥಿಗಳ ಬರ ಎದ್ದು ಕಾಣುತ್ತಿದೆ.
ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ-ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಒಬ್ಬರೂ ಮುಂದೆ ಬರುತ್ತಿಲ್ಲ. ಆದರೆ ಬಿಜೆಪಿಯ ಹಾಲಿ ಸದಸ್ಯ ಬಿ.ಜಿ.ಪಾಟೀಲ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿ ನಾಲ್ಕೈದು ಅಭ್ಯರ್ಥಿಗಳಾದರೂ ಮುಂದೆ ಬಂದು ತಮ್ಮ ಪ್ರತಿಷ್ಠೆ ಓರೆಗಲ್ಲಿಗೆ ಹಚ್ಚುತ್ತಿದ್ದರು. ಆದರೆ ಈ ಸಲ ಟಿಕೆಟ್ ತಮಗೆ ಕೊಡಲಾಗುತ್ತದೆ. ಸ್ಪರ್ಧಿಸಿ ಎಂದು ಕರೆ ನೀಡಿದ್ದರೂ ಯಾರು ಮನಸ್ಸು ಮಾಡುತ್ತಿಲ್ಲ. ಅದೇ ರೀತಿ ಬೀದರ್ ಜಿಲ್ಲೆಯಲ್ಲೂ ಹಾಲಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‌ನ ವಿಜಯಸಿಂಗ್ ಸಹ ಈ ಸಲ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುಪ್ಪವಾಗಿದೆ.
ಅಶೋಕ ಖೇಣಿ ಅವರನ್ನು ನಿಲ್ಲಿಸಲು ಚಿಂತನೆ ನಡೆಸಿದೆ. ವಿಜಯಸಿಂಗ್ ಸ್ಪರ್ಧೆಗೆ ಹೈಕಮಾಂಡ್ ಒತ್ತಡ ಹಾಕುತ್ತಿದೆ ಎನ್ನಲಾಗಿದೆ. ರಾಯಚೂರಲ್ಲೂ ಸಹ ಹಾಲಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‌ನ ಬಸವರಾಜ ಪಾಟೀಲ ಇಟಗಿ ಸಹ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಒಟ್ಟಾರೆ ಈ ಎಲ್ಲವನ್ನು ಅವಲೋಕಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಹೆಚ್ಚಿನ ಆಸಕ್ತಿ ಇಲ್ಲ ಎಂಬುದು ಹಾಗೂ ಕಾಂಗ್ರೆಸ್‌ನಲ್ಲಿ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಒಂದು ಕಾಲದಲ್ಲಿ ಟಿಕೆಟ್ ಕೊಡಿ ಎಂದು ಪಕ್ಷದ ವರಿಷ್ಠರಿಗೆ ಸ್ಪರ್ಧಾ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದರೆ ಈಗ ಟಿಕೆಟ್ ಕೊಡುತ್ತೇವೆ ಸ್ಪರ್ಧೆಗೆ ಮುಂದೆ ಬನ್ನಿ ಎನ್ನುತ್ತಿದ್ದರೂ ಯಾರೂ ಬಾರದಿರುವುದನ್ನು ನೋಡಿದರೆ ಚುನಾವಣೆ ಯಾವ ಮಟ್ಟಿಗೆ ತಲುಪಿದೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ಹೆಸರಿಗಷ್ಟೇ ಮಾತ್ರ ಎಂಬುದು ಸಾಬೀತುಪಡಿಸುತ್ತದೆ.