Advertisement

ಮುನಿದ ಮುಂಗಾರು: ಕೃಷಿ ಚಟುವಟಿಕೆಗಳಿಗೆ ಹಿನ್ನಡೆ

01:38 AM Jun 20, 2019 | Sriram |

ಕೋಟ: ಈ ಬಾರಿ ಮುಂಗಾರು ಸಾಕಷ್ಟು ವಿಳಂಬವಾಗಿದೆ. ಅಲ್ಪ ಪ್ರಮಾಣದ ಮಳೆಯಾದರೂ ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ. ಮುಂಗಾರು ಕ್ಷೀಣವಾದ್ದರಿಂದ ನೀರಿನ ಪ್ರಮಾಣ ಏರಿಕೆಯಾಗಿಲ್ಲ, ಜತೆಗೆ ನೀರಿನ ಒರತೆಯೂ ಇಲ್ಲ.

Advertisement

ನೇಜಿ ಸಿದ್ಧಗೊಂಡಿಲ್ಲ:
ಗದ್ದೆ ಹದಗೊಳಿಸಲು ನೀರಿಲ್ಲ
ನೀರಿನಾಶ್ರಯವಿಲ್ಲದ ಕೃಷಿಭೂಮಿಗಳಲ್ಲಿ ಇನ್ನೂ ಕೂಡ ನೇಜಿ ಸಿದ್ಧವಾಗಿಲ್ಲ ಹಾಗೂ ಗದ್ದೆ ಹದಗೊಳಿಸಲು ನೀರಿಲ್ಲ. ಮಳೆ ವಿಳಂಬವಾದ್ದರಿಂದ ಮುಂದೆ ನೇಜಿ ಸಿದ್ಧಪಡಿಸಿ ನಾಟಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಮುಂದೆ ಮಳೆಯಾದಾಗ ದೊಡ್ಡ ಪ್ರಮಾಣದಲ್ಲಿ ನೇರ ಬಿತ್ತನೆ ನಡೆಸುವ ಸಿದ್ಧತೆಯಲ್ಲಿ ರೈತರಿದ್ದಾರೆ.

ನಾಟಿ ಮಾಡಿದವರಿಗೂ ಚಿಂತೆ
ಬೇರೆ ನೀರಿನ ಮೂಲಗಳನ್ನು ಬಳಸಿ ನೇಜಿ ಸಿದ್ಧಮಾಡಿಟ್ಟುಕೊಂಡವರು ಅಲ್ಪ ಪ್ರಮಾಣದ ಮಳೆಗೆ ನಾಟಿ ಮುಗಿಸಿದ್ದಾರೆ. ಆದರೆ ಮಳೆಯಾಗದಿರುವುದರಿಂದ ನಾಟಿ ಮಾಡಿದ ಗದ್ದೆ ಒಣಗುತ್ತಿದೆ.

ಭತ್ತ ಬೇಸಾಯ ಕುಸಿತ
ಕೃಷಿ ಇಲಾಖೆಯ ಅಂಕಿ ಅಂಶದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 2016ನೇ ಸಾಲಿನಲ್ಲಿ 45ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹಾಕಲಾಗಿದ್ದು 44 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಬೇಸಾಯ ನಡೆದಿತ್ತು. 2018-19ನೇ ಸಾಲಿನಲ್ಲಿ ಮುಂಗಾರಿನಲ್ಲಿ 44 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಿದ್ದು, 35,487 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಸಲಾಗಿತ್ತು. ಪ್ರಸ್ತುತ 2019-20ರಲ್ಲಿ 36,000 ಹೆ. ಪ್ರದೇಶದಲ್ಲಿ ಗುರಿ ಹೊಂದಲಾಗಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಗಣನೀಯ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದೆ. 2016ನೇ ಸಾಲಿನಿಂದ 2019ನೇ ಸಾಲಿಗೆ ಭತ್ತದ ಬೆಳೆ ಸುಮಾರು 10ಸಾವಿರ ಹೆಕ್ಟೇರ್‌ನಷ್ಟು ಕುಸಿತವಾಗಿದೆ.

ನೇಜಿ ಬೆಳೆಸಿ ನಾಟಿ ಮಾಡಲು ದಿನವೆಲ್ಲಿದೆ?
ಈ ಹಿಂದೆ ಮೇ ಅಂತ್ಯದಲ್ಲೇ ಒಂದೆರಡು ಮಳೆಯಾಗಿ ಕೃಷಿಚಟುವಟಿಕೆ ಮಾಡುವಷ್ಟು ನೀರು ಲಭ್ಯವಾಗುತಿತ್ತು. ಮೇ ತಿಂಗಳಲ್ಲೇ ನೇಜಿ ಹಾಕಿ ಜೂನ್‌ 15-20ರೊಳಗೆ ನಾಟಿ ಮಾಡುತ್ತಿದ್ದೆವು. ಆದರೆ ಈ ಬಾರಿ ಜೂನ್‌ 20 ಕಳೆದರೂ ಅಗತ್ಯ ಪ್ರಮಾಣದ ಮಳೆಯಾಗಿಲ್ಲ ಹಾಗೂ ನೇಜಿ ಕೂಡ ಸಿದ್ಧಗೊಂಡಿಲ್ಲ. ಹೀಗಾಗಿ ಲಾಭ-ನಷ್ಟವನ್ನು ನೋಡದೆ ನೇರ ಬಿತ್ತನೆ ಮಾಡಲು ನಿಶ್ಚಯಿಸಿದ್ದೇವೆ.
-ಶಂಕರ್‌ ಶೆಟ್ಟಿ ಕೋಟ, ಹಿರಿಯ ಕೃಷಿಕ

Advertisement

ಸುಧಾರಿತ ವಿಧಾನದ ನೇರ ಬಿತ್ತನೆ ಸೂಕ್ತ
ಮುಂಗಾರು ದುರ್ಬಲವಾಗಿರುವುದರಿಂದ ನೇರ ಬಿತ್ತನೆ ಸೂಕ್ತ. ಆದರೆ ಈ ವಿಧಾನದಲ್ಲಿ ಕಳೆ ಹತೋಟಿಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸುಧಾರಿತ ವಿಧಾನದ ಮೂಲಕ ಬಿತ್ತನೆ ಮಾಡುವುದರಿಂದ ಕಳೆಯನ್ನು ಸಂಪೂರ್ಣ ಹತೋಟಿ ಮಾಡಲು ಸಾಧ್ಯವಿದೆ. ಈ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಅಗತ್ಯ ಮಾಹಿತಿ ನೀಡಲಾಗುವುದು.
-ನವೀನ್‌, ಬೇಸಾಯ ತಜ್ಞರು
ಕೆ.ವಿ.ಕೆ. ಬ್ರಹ್ಮಾವರ

ನೇರ ಬಿತ್ತನೆಯ ವಿಧಾನಗಳು
ಸಾಂಪ್ರದಾಯಿಕ ಕೈ ಬಿತ್ತನೆ, ಡ್ರಮ್‌ಶೀಲ್ಡ್‌, ಕೂರಿಗೆ ವಿಧಾನ, ಸಾಲು ಬೀಜ ಹಾಗೂ ರೈತರೇ ತಯಾರಿಸಿದ ಯಂತ್ರಗಳು ಹಾಗೂ ಟಿಲ್ಲರ್‌, ಟ್ರ್ಯಾಕ್ಟರ್‌ಗೆ ಅಳವಡಿಸಿದ ಯಂತ್ರಗಳ ಮೂಲಕ ನೇರ ಬಿತ್ತನೆ ನಡೆಸಲಾಗುತ್ತದೆ. ಈ ವಿಧಾನ ಅತ್ಯಂತ ಸುಲಭವಾದರೂ ಕಳೆ ಹತೋಟಿಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ನೇರ ಬಿತ್ತನೆ ಯಂತ್ರಗಳು ಲಭ್ಯವಿವೆ.

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next