ರಾಯಚೂರು: ಸಚಿವ ಸಂಪುಟದ ಉಪಸಮಿತಿ ಕೈಗೊಂಡಿರುವ ಬರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕಾರ್ಯ ಕಾಟಾಚಾರಕ್ಕೆ ಕೂಡಿದ್ದು ಎನ್ನಲಿಕ್ಕೆ ಗುರುವಾರ ರಾತ್ರಿ ನಡೆದ ಸಭೆ ಸಾಕ್ಷಿ.
ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಬರ ಕಾಮಗಾರಿಗಳ ಪ್ರಗತಿಯನ್ನು ಕೇವಲ ಎರಡು ಗಂಟೆಗಳಲ್ಲಿ ಮುಗಿಸಲಾಯಿತು. ಸಚಿವರಾದ ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಕೈಗೊಂಡ ಬರ ಪರಿಶೀಲನೆ ಕಾರ್ಯ ಬಳ್ಳಾರಿಯಿಂದ ಶುರುವಾಗಿ, ಕೊಪ್ಪಳ ಮೂಲಕ ರಾಯಚೂರಿಗೆ ಬಂದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಬಂದವರೇ ನಗರದ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಆರಂಭಿಸಿದರು. ಆದರೆ, ಸಭೆಯಲ್ಲಿದ್ದದ್ದು ರಾಯಚೂರು ಜಿಲ್ಲೆಯ ಅಧಿಕಾರಿಗಳು ಮಾತ್ರ. ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಬಿಟ್ಟರೆ ಅಲ್ಲಿನ ಯಾವ ಯಾರು ಇರಲಿಲ್ಲ. ಹೀಗಾಗಿ ಇಬ್ಬರು ಡಿಸಿಗಳು ಒಪ್ಪಿಸಿದ ವರದಿ ಕೇಳಿದ ಸಚಿವರು ರಾಯಚೂರು ಜಿಲ್ಲೆಯ ಪರಿಶೀಲನೆಗೆ ಮುಂದಾದರು.
ನನಗೇ ಮಾಹಿತಿ ಇಲ್ಲ: ನಗರ ಶಾಸಕ ಡಾ| ಶಿವರಾಜ್ ಪಾಟೀಲ ನೀವು ಸಭೆ ನಡೆಸುವ ವಿಚಾರವೇ ನನಗೆ ತಿಳಿದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಾವು ಬರುವ ವಿಚಾರ ಮೊದಲೇ ತಿಳಿಸಲಾಗಿತ್ತು. ಆದರೂ ಯಾಕೆ ಇಂಥ ಬೇಜವಾಬ್ದಾರಿ ತೋರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಬೋರವೆಲ್ ಪ್ರಹಸನ: ಕುಡಿಯುವ ನೀರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಚಿವರು ಪ್ರಶ್ನಿಸಿದಾಗ ಅಧಿಕಾರಿಗಳು ಬೋರ್ ಕೊರೆಸಿದ್ದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಶಾಸಕ ಶಿವರಾಜ ಪಾಟೀಲ, ಒಂದೇ ಒಂದು ಬೋರ್‌ಗೆ ವಿದ್ಯುತ್ ಸಂಪರ್ಕ, ಪೈಪ್‌ಲೈನ್ ಸಂಪರ್ಕ ಕಲ್ಪಿಸಿಲ್ಲ. ಬಾಯಿದೊಡ್ಡಿ ಗ್ರಾಮಕ್ಕೆ ನೀರು ಪೂರೈಸುವಂತೆ ಲೆಟರ್ ಕೊಟ್ಟು 15 ದಿನ ಆಗಿದೆ. ಇನ್ನೂ ಪೂರೈಸಿಲ್ಲ ಎಂದು ದೂರಿದರು. ಇದಕ್ಕೆ ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಕೂಡ ಧ್ವನಿಗೂಡಿಸಿದರು. ನಮ್ಮನ್ನು ಕೇಳಿ ಗ್ರಾಮಗಳ ಆಯ್ಕೆ ಮಾಡಿಲ್ಲ. ನೀರಿರುವ ಕಡೆ ಬೋರ್ ಕೊರೆಸಿದ್ದು, ಇಲ್ಲದ ಕಡೆ ಪೂರೈಸುತ್ತಿಲ್ಲ ಎಂದು ದೂರಿದರು. ಆಗ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿ ಸೂಕ್ತ ಮಾಹಿತಿ ನೀಡಲಿಲ್ಲ. ಇದರಿಂದ ಬೇಸರ ವ್ಯಕ್ತಪಡಿಸಿದ ಸಚಿವರು ಇಂಥವರಿಗೆ ಯಾಕೆ ಜವಾಬ್ದಾರಿಯುತ ಸ್ಥಾನ ನೀಡುತ್ತೀರಿ. ಕೆಲಸ ಮಾಡುವ ಅಧಿಕಾರಿಗಳು ನಿಯೋಜಿಸಿ ಎಂದು ಸೂಚಿಸಿದರು.
ಜಿಲ್ಲಾಡಳಿತಕ್ಕೇ ತರಾಟೆ: ಅಗತ್ಯ ಬಿದ್ದರೆ ತಹಶೀಲ್ದಾರ್‌ರು ನಿಮಗೆ ನೀಡಿದ ಅನುದಾನ ಖರ್ಚು ಮಾಡಬೇಕು ಎಂದಾಗ ಶಾಸಕರು ತಹಶೀಲ್ದಾರ್ ಬಳಿ ಹಣವಿಲ್ಲ ಎಂದರು. ಆಗ ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ಸಹಾಯಕ ಆಯುಕ್ತರ ಖಾತೆಯಲ್ಲಿ ಹಣವಿದ್ದು ಅವರ ಮೂಲಕ ಪಡೆಯಬೇಕಿದೆ ಎಂದು ಹೇಳಿದರು. ಇಂಥ ಹೊತ್ತಲ್ಲಿ ಅವರ ಬಳಿ ಹಣ ಇಟ್ಟುಕೊಂಡು ಏನು ಮಾಡುತ್ತಾರೆ ನೀಡುವುದು ತಾನೆ ಎಂದು ಸಚಿವ ನಾಡಗೌಡ ಪ್ರಶ್ನಿಸಿದರು. ಆದರೆ, ಸರ್ಕಾರದ ನಿರ್ದೇಶನವೇ ಆಗಿದೆ ಎಂದು ಎಡಿಸಿ ಸಮಜಾಯಿಷಿ ನೀಡಿದರು. ನೀವು ಎಲ್ಲದಕ್ಕೂ ಹೀಗೆ ಮಾಡಿದರೆ ಯಾವ ಕೆಲಸವೂ ಆಗವುದಿಲ್ಲ. ಕಳೆದ ಸಭೆಯಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದರು. ಆ ಸಭೆ ನಡಾವಳಿ ಆಧರಿಸಿ ಹಣ ನೀಡಿದರೆ ಆಗುತ್ತದೆ. ನೀವೆ ಹೀಗೆ ಮಾಡಿದರೆ ಕೆಲಸಗಳು ಸಾಗುವುದೇ ಹೇಗೆ ಎಂದು ಜಿಲ್ಲಾಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಅಧಿಕಾರಿಗಳು 24 ಗಂಟೆ ಕೆಲಸ ಮಾಡಬೇಕು ಎಂಬ ನಿರ್ದೇಶನಗಳಿವೆ. ನೀವು ಹೀಗೆ ವಿನಾಕಾರಣ ನೆಪ ಹೇಳಿದರೆ ನಡೆಯುವುದಿಲ್ಲ. ಟಾಸ್ಕ್ ಫೋರ್ಸ್‌ಗೆ ನೀಡಿದ ಹಣ ಕಡಿಮೆ ಬಿದ್ದರೆ ಇನ್ನೂ 50 ಲಕ್ಷ ನೀಡಲಾಗುವುದು. ನರೇಗಾದಡಿ ಕೂಲಿ ಸರಿಯಾಗಿ ಪಾವತಿಯಾಗಿಲ್ಲ ಎಂಬ ದೂರುಗಳಿದ್ದು, ಬಾಕಿ ಹಣ ಪಾವತಿ ಕುರಿತು ಸಿಎಂ ಜತೆ ನಾವೆಲ್ಲ ಚರ್ಚಿಸಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಬರ ಕಾಮಗಾರಿಗಳು ನಿಲ್ಲಬಾರದು ಎಂದು ಸೂಚಿಸಿದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರನಾಯಕ, ಬಳ್ಳಾರಿ, ಯಾದಗಿರಿ ಜಿಲ್ಲಾಧಿಕಾರಿಗಳು ಇದ್ದರು.
ಶಾಸಕ ಶಿವರಾಜ ಪಾಟೀಲ ಬೋರ್‌ವೆಲ್ ವಶಕ್ಕೆ ಪಡೆದ ಬಗ್ಗೆ ಆಕಿ ಅನುಮತಿ ನೀಡುತ್ತಿಲ್ಲ ಎಂದು ಎರಡ್ಮೂರು ಬಾರಿ ಉಚ್ಛರಿಸಿದರು. ಸಚಿವ ನಾಡಗೌಡರು ಆಕಿ ಅಂದ್ರ ಯಾರಾಕಿಎಂದರು. ಕೊನೆಗೆ ಮಲ್ಕಾಪುರ ಪಂಚಾಯಿತಿ ಪಿಡಿಒ ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆ. ಬೋರ್‌ವೆಲ್ ಕೊರೆಸಲು, ವಶಕ್ಕೆ ಪಡೆಯಲು ಒಪ್ಪಿಗೆ ನೀಡುತ್ತಿಲ್ಲ ಎಂದು ದೂರಿದರು. ಈ ಕುರಿತು ಪರಿಶೀಲಿಸುವಂತೆ ಇಒಗೆ ಸೂಚಿಸಲಾಯಿತು.