Advertisement

ಬರ ನಿರ್ವಹಣೆ ವೈಫಲ್ಯ ಖಂಡಿಸಿ ಜೂ. 10ಕ್ಕೆ ರಸ್ತೆತಡೆ

08:16 AM May 27, 2019 | Team Udayavani |

ಶಿವಮೊಗ್ಗ: ರಾಜ್ಯ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದನ್ನು ಮತ್ತು ರಾಜ್ಯದಲ್ಲಿನ ಬರಗಾಲವನ್ನು ಎದುರಿಸಲು ವಿಫಲವಾಗಿರುವುದನ್ನು ಖಂಡಿಸಿ ಜೂ. 10ರಂದು ರಾಜ್ಯಾದ್ಯಂತ ರಸ್ತೆತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ರೈತರ ಆಶಯಗಳಿಗೆ ಒತ್ತುಕೊಟ್ಟು ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ ಈಗ ರೈತರ ಆಶಯಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿದೆ. ರೈತರಿಗೆ ಮರಣ ಶಾಸನವಾಗಲಿರುವ ಭೂಸ್ವಾಧೀನ ಕಾಯ್ದೆಗೆ ರಾಜ್ಯದ ಸಮ್ಮಿಶ್ರ ಸರ್ಕಾರ ತಿದ್ದುಪಡಿ ಮಾಡಲು ಹೊರಟಿರುವುದನ್ನು ರೈತಸಂಘ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಹಿಂದಿನ ಭೂಸ್ವಾಧೀನ ಕಾಯ್ದೆಯಲ್ಲಿ ರೈತರಿಗೆ ಸಮಾಧಾನವಾಗುವಂತಹ ಅಂಶಗಳು ಇದ್ದವು. ಅದರ ಪ್ರಕಾರ ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಇರಲಿಲ್ಲ ಮತ್ತು ಪರಿಹಾರ ಮೊತ್ತ ಕೂಡ ಮಾರುಕಟ್ಟೆ ದರಕ್ಕಿಂತ ನಾಲ್ಕುಪಟ್ಟು ಹೆಚ್ಚಾಗಿತ್ತು. ನಗರ ಪ್ರದೇಶದಲ್ಲಿ ಎರಡುಪಟ್ಟು ಹೆಚ್ಚಾಗಿತ್ತು ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕಾಗಿತ್ತು ಎಂದರು.

ಅಲ್ಲದೆ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಐದು ವರ್ಷದ ಒಳಗೆ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗದಿದ್ದರೆ, ಆ ಭೂಮಿಯನ್ನು ರೈತರಿಗೆ ಮರಳಿ ಕೊಡಬೇಕಿತ್ತು ಮತ್ತು ಪರಿಹಾರವು ಹಣದ ರೂಪದಲ್ಲಿ ಇರಬೇಕಿತ್ತೇ ಹೊರತು, ಪುನರ್‌ವಸತಿ ರೂಪದಲ್ಲಲ್ಲ. ಆದರೆ ಈಗ ತಿದ್ದುಪಡಿ ಮಾಡಲು ಹೊರಟಿರುವ ಹೊಸ ಭೂಸ್ವಾಧೀನ ಕಾಯ್ದೆಯಲ್ಲಿ ಇವು ಯಾವುದೂ ಇಲ್ಲ. ಹಾಗಾಗಿಯೇ ಹೊಸ ಕಾಯ್ದೆ ರೈತರಿಗೆ ಮರಣ ಶಾಸನವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ವಿವರಿಸಿದರು.

ರಾಜ್ಯದಲ್ಲಿ ವ್ಯಾಪಕ ಬರಗಾಲವಿದ್ದರೂ ಸರ್ಕಾರಗಳು ತಿರುಗಿಯೂ ನೋಡುತ್ತಿಲ್ಲ. ಚುನಾವಣೆಗೆ ನೀಡುವಷ್ಟು ಮಹತ್ವವನ್ನು ಬರಗಾಲದ ಬಗ್ಗೆ ನೀಡುತ್ತಿಲ್ಲ ಎಂದು ದೂರಿದ ಅವರು, ಬರಗಾಲವನ್ನು ನಿಯಂತ್ರಿಸುವಲ್ಲಿ ಯಾವುದೇ ಸರ್ಕಾರಗಳು ಕ್ರಮ ಕೈಗೊಂಡಿಲ್ಲ. ಅಲ್ಲದೆ ಈಗಿನ ರಾಜ್ಯದ ಕುಮಾರಸ್ವಾಮಿ ಸರ್ಕಾರ ಸಹ ವಿಫಲವಾಗಿದೆ. ಬರಗಾಲದಿಂದಾಗಿ 15.69 ಲಕ್ಷ ಟನ್‌ನ್ನಷ್ಟು ಉತ್ಪಾದನೆ ನಷ್ಟವಾಗಿದೆ. ಆದರೂ ಸರ್ಕಾರ ಯಾವುದೇ ಜವಬ್ದಾರಿ ನಿಭಾಯಿಸುತ್ತಿಲ್ಲ. ರೈತರ ಗೋಳನ್ನು ಯಾರು ಕೇಳುತ್ತಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

Advertisement

ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಬರಗಾಲವನ್ನು ಸಮರ್ಪಕವಾಗಿ ಎದುರಿಸಲು ಹಾಗೂ ರೈತನ ಸರ್ವತೋಮುಖ ಬೆಳವಣಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆದರೆ ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಲ ಕಳೆಯಲಾಗುತ್ತಿದೆ ಎಂದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಇವರು ತಾವು ಮಣ್ಣಿನ ಮಗ, ರೈತನ ಮಗ ಎಂದು ಹೇಳಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ದೂರಿದರು.

 

Advertisement

Udayavani is now on Telegram. Click here to join our channel and stay updated with the latest news.

Next