Advertisement

ಜಿಲ್ಲೆಯಲ್ಲಿ ಬರ: ಕುಡಿಯುವ ನೀರಿನ ಆತಂಕ

07:29 AM Feb 20, 2019 | |

ಹಾಸನ: ಮುಂಗಾರಿನಲ್ಲಿ ಅತಿವೃಷ್ಟಿ, ಹಿಂಗಾರಿನಲ್ಲಿ ಅನಾವೃಷ್ಟಿಯಿಂದ ತತ್ತರಿಸಿದ ಹಾಸನ ಜಿಲ್ಲೆಯ ಎಲ್ಲಾ ಎಂಟು ತಾಲೂಕುಗಳೂ ಈಗ ಬರಪೀಡಿತ ಪ್ರದೇಶಗಳೆಂದು ಘೋಷಣೆ ಆಗಿವೆ. ಬರಪರಿಹಾರ ಕಾರ್ಯಕ್ರಮಗಳನ್ನೂ ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಆದರೂ ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಅಭಾವದ ಆತಂಕ ಕಾಡುತ್ತಿದೆ.

Advertisement

ಜಲಾಶಯಗಳಿದ್ದರೂ ನೀರಿಲ್ಲ: ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಪ್ರದೇಶಗಳನ್ನೊಳಗೊಂಡ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ನದಿಗಳು ಹರಿಯುತ್ತಿದ್ದು, ಪ್ರಮುಖ ಎರಡು ಜಲಾಶಯಗಳು, ಮೂರು ಕಿರು ಜಲಾಶಯಗಳಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಕೆ ನಿಲ್ಲಿಸಿ,

ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆದು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಿರಂತತ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿರುವ ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣದಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ಆದರೆ, ಮಲೆನಾಡು ಪ್ರದೇಶಗಳಾದ ಸಕಲೇಶಪುರ, ಆಲೂರಿನಲ್ಲೂ ನೀರಿಗೆ ಹಾಹಾಕಾರ ಆತಂಕ ಎದುರಾಗಿದೆ. 

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಮಲೆನಾಡು ಪ್ರದೇಶಗಳು ಅತಿವೃಷ್ಟಿಯುಂದ ತತ್ತರಿಸಿದ್ದವು. ಜೂನ್‌ನಿಂದ ಆಗಸ್ಟ್‌ 2ನೇ ವಾರದವರೆಗೂ ಸುರಿದಿದ್ದ ಮಳೆಗೆ ಹೇಮಾವತಿ ನದಿ, ನೇತ್ರಾವತಿ ಉಪನದಿಗಳು, ಪಶ್ಚಿಮಘಟ್ಟದ ಹಳ್ಳ, ತೊರೆಗಳೂ ಉಕ್ಕಿ ಹರಿದಿದ್ದವು. 

ಅಂತರ್ಜಲ ಕುಸಿತ: ಭೂ ಕುಸಿತ, ಪ್ರವಾಹದಿಂದ ಬೆಳೆಕಳೆದುಕೊಂಡಿದ್ದ ಮಲೆನಾಡಿನ ಪ್ರದೇಶಗಳಲ್ಲೂ ಈಗ ಅಂತರ್ಜಲ ಕುಸಿದು ಹಲವಾರು ಕೊಳವೆ ಬಾವಿಗಳು, ಝರಿ, ತೊರೆಗಳು, ಹಳ್ಳಗಳು ಬತ್ತಿ ಹೋಗಿವೆ. ಇನ್ನು ಅರೆಮಲೆನಾಡು ಪ್ರದೇಶಗಳು ಹಾಗೂ ಬಯಲುಸೀಮೆ ಪ್ರದೇಶಗಳಲ್ಲಿ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ರೈತರ ಕೈ ಹಿಡಿಯಲಿಲ್ಲ. ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗ‌ಳೆ ಈಗ ಆಸರೆಯಾಗಿವೆ.

Advertisement

32 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ: ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗೆ ಹಿಂಗಾರು ಹಂಗಾಮಿನಲಿ ಶೇ.50ರಷ್ಟು ಅಧಿಕ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾದ್ದರಿಂದ ಜಿಲ್ಲೆಯ ಎಂಟು ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಮುಂಗಾರು ಹಂಗಾಮಿನಲ್ಲಿ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ತಾಲೂಕುಗಳಲ್ಲಿ 46,976 ಹೆಕ್ಟೇರ್‌ ಬೆಳೆ ನಾಶವಾಗಿದ್ದು, 32 ಕೋಟಿ ರೂ.ಪರಿಹಾರಕ್ಕೆ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮುಸುಕಿನ ಜೋಳ, ಅವರೆ, ಹುರುಳಿ, ರಾಗಿ, ಕಡಲೆ ಮಳೆಯಿಲ್ಲದೇ ಒಣಗಿ ಹೋಗಿವೆ.

ಅತಿವೃಷ್ಟಿಯಿಂದ ಹಾನಿ: ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ. 190 ರಷ್ಟು ಹೆಚ್ಚುವರಿ ಮಳೆ ಸುರಿದು ದಾಖಲೆ ನಿರ್ಮಿಸಿತ್ತು. ಅತಿವೃಷ್ಟಿಯಿಂದ ತಾಲೂಕಿನ 19 ಸಾವಿರ ರೈತರ 11 ಸಾವಿರ ಹೆಕ್ಟೇರ್‌ ಪ್ರದೇಶ ಹಾನಿಯಾಗಿತ್ತು. ತಾಲೂಕು ಆಡಳಿತ 600 ಕೋಟಿ ರೂ. ಖಾಸಗಿ ಆಸ್ತಿ ನಷ್ಟ, 340 ಕೋಟಿ ರೂ. ಸಾರ್ವಜನಿಕ ಆಸ್ತಿ ಹಾನಿ ಸೇರಿ ಒಟ್ಟು 980 ಕೋಟಿ ರೂ.ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ ಹಿಂಗಾರು ಮಳೆಯ ಕೊರತೆಯಿಂದಾಗಿ ಮಲೆನಾಡಿದನ ಚಿತ್ರಣವೆ ಬದಲಾಗಿ ಹೋಗಿದೆ. ಸಕಲೇಶಪುರ ತಾಲೂಕಿನಲ್ಲಿ ಪ್ರಸ್ತುತ 84 ಗ್ರಾಮಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಕಾಫಿ, ಏಲಕ್ಕಿ ಬೆಳೆಗಳು ಒಣಗಿವೆ. ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಖಾಸಗಿ ಕೊಳವೆ ಬಾವಿ ಅವಲಂಬಿಸಲಾಗಿದೆ. 

ಅರಸೀಕೆರೆ ತಾಲೂಕಿನಲ್ಲಿ ಅಂತರ್ಜಲ ಬತ್ತಿ ಹೋಗಿ ಒಂದು ಸಾವಿರ ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಅರಸೀಕೆರೆ ತಾಲೂಕು ಸಂಕೊಂಡನಹಳ್ಳಿ, ಗಂಗೂರು, ಮಲಿಯಪ್ಪನ ಕೊಪ್ಪಲು, ಕೆಂಕೆರೆ, ಸುಳ್ಳದ್ದಿಮ್ಮನಹಳ್ಳಿ, ಚಟ್ಟನಹಳ್ಳಿ, ಮಿನುಗನಹಳ್ಳಿ, ಕಬ್ಬಿಗರಹಳ್ಳಿ, ಮಾಗೊಂಡನಹಳ್ಳಿ ಜನರು ಒಂದೆರೆಡು ಕಿ.ಮೀ.ದೂರದಿಂದ ಸೈಕಲ್‌, ದ್ವಿಚಕ್ರ ವಾಹನದಲ್ಲಿ ನೀರು ತರಬೇಕಿದೆ. 

ತೆಂಗಿನ ಮರಗಳ ನಾಶ: ರೈತರ ಬದುಕಿಗೆ ಆಸರೆಯಾಗಿದ್ದ ತೆಂಗಿನ ಮರಗಳು ತೇವಾಂಶ ಕೊರತೆಯಿಂದ ಒಣಗಿ ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ನುಸಿ ರೋಗ, ಕಪ್ಪು ತಲೆ ಹುಳುಗಳ ಹಾವಳಿಯೂ ಸೇರಿ ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ. 

ತೆಂಗಿನ ಮರಕ್ಕೆ 400 ರೂ. ಪರಿಹಾರ: ತೋಟಗಾರಿಕೆ ಇಲಾಖೆ ನೀಡುವ ಅಂಕಿ ಅಂಶ ಪ್ರಕಾರ ಸುಮಾರು 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 14.13 ಲಕ್ಷ ತೆಂಗಿನ ಮರಗಳು ಹಾನಿಯಾಗಿವೆ. ಸರ್ಕಾರದಿಂದ 60 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, ಸಂಪೂರ್ಣ ಒಣಗಿ ಹೋಗಿರುವ ತೆಂಗಿನ ಮರಗಳಿಗೆ ತಲಾ 400 ರೂ. ಪರಿಹಾರ ಹಂಚಿಕೆ ಮಾಡಲಾಗುತ್ತದೆ. 

ಜಿಪಂ ಬರ ನಿರ್ವಹಣೆ: ಜಿಲ್ಲಾ ಪಂಚಾಯಿತಿ ವತಿಯಿಂದ ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತುರ್ತು ಕುಡಿಯುವ ನೀರು, ಬೋರ್‌ವೆಲ್‌ ಕೊರೆಸಲು ಎಂಟು ತಾಲೂಕಿಗೂ ತಲಾ 50 ಲಕ್ಷ ರೂ.ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲೂ ಎರಡು ಹಂಗಾಮಿನಲ್ಲು ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರು ತಾಲೂಕಿಗೆ ಹೆಚ್ಚುವರಿಯಾಗಿ ತಲಾ 50 ಲಕ್ಷ ಅನುದಾನ ಅಂದರೆ ಒಟ್ಟು ಒಂದು ಕೋಟಿ ರೂ. ಅನುದಾನ ನೀಡಲಾಗಿದೆ.

ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯ 15 ರಿಂದ 20 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಪಂಚಾಯಿತಿಗೆ 12 ಲಕ್ಷ ರೂ.ಬಿಡುಗಡೆಯಾಗಿದೆ. ಇದರಲ್ಲಿ ಶೇ 80 ರಷ್ಟು ಹಣವನ್ನು ಕುಡಿಯುವ ನೀರಿಗೆ ಬಳಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಮಾಹಿತಿ ನೀಡಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಡಿ ಚೆಕ್‌ಡ್ಯಾಂ, ಬದು ನಿರ್ಮಾಣ, ನೀರು ಇಂಗಿಸಲು ಆದ್ಯತೆ ನೀಡಲಾಗುತ್ತಿದೆ. 42 ಲಕ್ಷ ಮಾನವ ದಿನ ಗುರಿಗೆ ಬದಲಾಗಿ 46 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ. ಹೆಚ್ಚುವರಿಯಾಗಿ 16 ಲಕ್ಷ ಮಾನವ ದಿನ ಸೃಜಿಸಲಾಗಿದ್ದು, ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು ತಾಲೂಕುಗಳಲ್ಲಿ ವರ್ಷಕ್ಕೆ 150 ದಿನ ಕೆಲಸ ಕೊಡಲಾಗುತ್ತಿದೆ. ದನದ ಕೊಟ್ಟಿಗೆ, ನೀರಿನ ತೊಟ್ಟಿಗಳ ನಿರ್ಮಾಣ ಖಾತರಿ ಯೋಜನೆಯಡಿ ಆದ್ಯತೆ ನೀಡಲಾಗುತ್ತಿದೆ ಎಂದೂ ಪುಟ್ಟಸ್ವಾಮಿ ಅವರು ಹೇಳಿದ್ದಾರೆ. 

ಕುಡಿಯುವ ನೀರಿಗೆ ಆದ್ಯತೆ: ಬರ ಪರಿಹಾರ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಪ್ರತಿ ಗ್ರಾಮವಾರು ಅಧ್ಯಯನ ನಡೆಸಿ ಕುಡಿಯುವ ನೀರಿನ ಸಮಸ್ಯೆಯಿದ್ದರೆ ಗುರ್ತಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.

ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಏಳು ಧಾನಸಭಾ ಕ್ಷೇತ್ರಗಳಿಗೂ 50 ಕೋಟಿ ರೂ.ಹಣ ತುರ್ತಾಗಿ ನೀಡಬೇಕು. 25 ಕೋಟಿ ರೂ.ಕೇಂದ್ರ ಸರ್ಕಾರದಿಂದ ಹಾಗೂ 25 ಕೋಟಿ ಜಿಲ್ಲಾ ಪಂಚಾಯತಿ ಮೂಲಕ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ. 

ಜಾನುವಾರು ಮೇವು ಖರೀದಿಗೆ ಸಿದ್ಧ: ಗ್ರಾಮವಾರು ನೀರಿನ ಪೂರೈಕೆ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ನೀಡುವಂತೆ ಜಿಪಂ ಸಿಇಒಗೆ ಕೋರಲಾಗಿದೆ. ಜಲ ಮೂಲ ಇರುವ ಕಡೆ ಉದ್ಯೋಗ ಖಾತರಿ ಯೋಜನೆಯಡಿ ದನಕರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ರೈತರ ಬಳಿ ಹೆಚ್ಚುವರಿ ಮೇವು ಲಭ್ಯವಿದ್ದರೆ ಪ್ರತಿ ಟನ್‌ ಮೇವು ಖರೀದಿಗೆ ಗೆ 6ಸಾವಿರ ರೂ. ದರ ನಿಗದಿಪಡಿಸಿದ್ದು, ಮೇವು ಬ್ಯಾಂಕ್‌ಗಳಿಗೆ ಮೇವು ಮಾರಾಟ ಮಾಡಬಹುದು. ಈ ಮೇವು ಖರೀದಿಸಿ ಸಮೀಪ ಇರುವ ಅರಣ್ಯ ಇಲಾಖೆ ಸಸ್ಯ ಸಂರಕ್ಷಣಾ ಕ್ಷೇತ್ರಗಳಲ್ಲಿ ದಾಸ್ತಾನು ಮಾಡಿ ಬೇಸಿಗೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ. 

ಖಾಸಗಿ ಕೊಳವೆ ಬಾವಿಗಳ ಬಾಡಿಗೆ: ಖಾಸಗಿ ಬೋರ್‌ವೆಲ್‌ಗ‌ಳಿಂದ ಕುಡಿಯಲು ನೀರು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಪೈಪ್‌ಲೈನ್‌ ಮೂಲಕ ಪೂರೈಸಲಾಗುತ್ತಿದೆ. ಟ್ಯಾಂಕರ್‌ಗಳಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗಿದ್ದು, ತಿಂಗಳಿಗೆ 18 ಸಾವಿರ ರೂ. ನೀಡಿ ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಹಳೆ ಬೋರ್‌ವೆಲ್‌ಗ‌ಳ ಪುನಶ್ಚೇತನ, ಅಗತ್ಯವಿರುವ ಕಡೆ ಹೊಸ ಕೊಳವೆ ಬಾವಿ ಕೊರೆಸಲು ತಾಪಂ ಇಓಗಳಿಗೆ ಸೂಚನೆ ನೀಡಲಾಗಿದೆ. 5.50 ಕೋಟಿ ರೂ.ವೆಚ್ಚದಲ್ಲಿ ಈಗಾಗಲೇ 124 ಬೋರ್‌ವೆಲ್‌ ಕೊರೆಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಸಿ.ಪುಟ್ಟಸ್ವಾಮಿ ಹೇಳಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಕೊರತೆ ಇಲ್ಲ: ಜಿಲ್ಲೆಯಲ್ಲಿ 7.47 ಲಕ್ಷ ಜಾನುವಾರುಗಳಿದ್ದು, ಮುಂದಿನ 20 ವಾರಗಳಿಗೆ ಮೇವು ಲಭ್ಯವಿದೆ. ಈಗಾಗಲೇ ಸುಮಾರು 75 ಸಾವಿರ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಚನ್ನರಾಯಪಟ್ಟಣ, ಬೇಲೂರು, ಅರಸೀಕೆರೆಯಲ್ಲಿ ತಲಾ ಎರಡು ಕಡೆ ಮೇವಿನ ಬ್ಯಾಂಕ್‌ ತೆರೆಯಲು ಸ್ಥಳ ಗುರುತಿಸಲಾಗಿದೆ.

ಹಾಲಿನ ಸಂಘಗಳಲ್ಲಿ ಸದಸ್ಯರಾಗದಿರುವ ಆಸಕ್ತ ರೈತರು ಸಹ ಪಶುಪಾಲನಾ ಇಲಾಖೆ ಮೂಲಕ ಮೇವಿನ ಮಿನಿಕಿಟ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ವೀರಭದ್ರಯ್ಯ ಮಾಹಿತಿ ನೀಡಿದ್ದಾರೆ. 

ಜಾನುವಾರು ರೋಗದ ಮುನ್ನಚ್ಚರಿಕೆ ವಹಿಸಲಿ: ಬೋರ್‌ವೆಲ್‌ ಪಕ್ಕ ಇಂಗು ಗುಂಡಿಗಳನ್ನು ಮಾಡಿಸಬೇಕು. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ಮುಂಜಾಗ್ರತೆಯಿಂದ ಲಸಿಕೆ ಹಾಕಬೇಕು. ಜಾನುವಾರುಗಳಿಗೆ ಮೇವು ಸಂಗ್ರಸುವ ಕಾರ್ಯ ಚುರುಕಾಗಬೇಕು. ಅಗತ್ಯವಿರುವ ಕಡೆ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. 

ಜಿಲ್ಲೆಯ ಅಂಕಿ ಅಂಶ
-1,073 ಮಿ.ಮೀ. ವಾಡಿಕೆ ಮಳೆ 
-1451 ಮಿ.ಮೀ. ಈ ವರ್ಷದ ಮಳೆ 
-7,47,724 ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ
-75 ಸಾವಿರ ಮಿನಿ ಮೇವು ಕಿಟ್‌ ತರಣೆ
-32 ಕೋಟಿ ರೂ. ಬರ ನಿರ್ವಹಣೆಗೆ ಜಿಲ್ಲಾಡಳಿತ ಪ್ರಸ್ತಾವ
-11 ಕೋಟಿರೂ. ಸರ್ಕಾರ ಬಿಡುಗಡೆ ಮಾಡಿದ ಅನುದಾನ.

* ಎನ್‌. ನಂಜುಂಡೇಗೌಡ 

Advertisement

Udayavani is now on Telegram. Click here to join our channel and stay updated with the latest news.

Next