Advertisement

ರಾಜ್ಯದ 13 ಜಿಲ್ಲೆಗಳಲ್ಲಿ ಬರದ ಛಾಯೆ

06:00 AM Aug 08, 2018 | |

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಅವಧಿ ಪೂರ್ವ ಪ್ರಾರಂಭಗೊಂಡರೂ ಒಟ್ಟಾರೆ ಶೇ.3ರಷ್ಟು ಮಳೆ ಕೊರತೆ ಉಂಟಾಗಿದ್ದು, 13 ಜಿಲ್ಲೆಗಳಲ್ಲಿ ಬರ ಛಾಯೆಯ ಆತಂಕ ಎದುರಾಗಿದೆ. ಹೀಗಾಗಿ, ಹದಿಮೂರು ಜಿಲ್ಲೆಗಳಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಪಶು ಸಂಗೋಪನೆ, ಕೃಷಿ-ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಜತೆ ವಾರಕ್ಕೊಮ್ಮೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಪರಿಶೀಲನೆ ಮಾಡುವಂತೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಹವಾಮಾನ ವೀಕ್ಷಣ ಸಮಿತಿಗೆ ಸೂಚನೆ ನೀಡಲಾಗಿದೆ. ಜತೆಗೆ, ಕಂದಾಯ ಸಚಿವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯೂ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ಅಧಿಕಾರಿ ಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ
ಆರ್‌.ವಿ. ದೇಶಪಾಂಡೆ, ಪ್ರಸಕ್ತ ವರ್ಷ ಜೂನ್‌ ವೇಳೆಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಒಟ್ಟಾರೆ ಯಾಗಿ ಶೇ.3ರಷ್ಟು ಮಳೆ ಕೊರತೆ ಉಂಟಾಗಿದೆ. ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಜಲಾಶಯಗಳು ಭರ್ತಿಯಾಗಿ ದ್ದರೂ, ಇತರ 13 ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ ಎಂದು ಹೇಳಿದರು.

ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ರಾಯಚೂರು, ಬೀದರ್‌, ಬೆಂಗಳೂರು ನಗರ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ. ಈ ಜಿಲ್ಲೆಗಳಲ್ಲಿ ನಿಗಾ ವಹಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಸಮಿತಿಗೆ ಸೂಚನೆ
ನೀಡಲಾಗಿದೆ. ವಾರಕ್ಕೊಮ್ಮೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಮಾಹಿತಿ ಪಡೆಯಲು ನಿರ್ದೇಶನ ನೀಡಲಾಗಿದೆ. ಆಗಸ್ಟ್‌ – ಸೆಪ್ಟೆಂಬರ್‌ನಲ್ಲಿ ಮಳೆಯ ಪ್ರಮಾಣ ನೋಡಿಕೊಂಡು ಬಳಿಕ, ಬರಪೀಡಿತ ಘೋಷಣೆ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಳೆ ಕೊರತೆ ಇರುವ ಜಿಲ್ಲೆಗಳಲ್ಲಿ ಪರ್ಯಾಯ ಬೆಳೆ ಕುರಿತು ರೈತರಿಗೆ ಮಾಹಿತಿ ನೀಡುವುದು. ಅಗತ್ಯವಾದರೆ 150 ದಿನಗೂಲಿ ನೀಡಿ ಉದ್ಯೋಗ ಸೃಷ್ಟಿಸುವುದು. ಜಾನುವಾರುಗಳಿಗೆ ಮೇವು ಪೂರೈಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 19.12 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವಿದ್ದು ಇದುವರೆಗೂ 8.61 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಇನ್ನೂ 10.51 ಹೆಕ್ಟೇರ್‌ ಬಿತ್ತನೆಯಾಗಬೇಕಿದೆ. 8 ಲಕ್ಷ ಹೆಕ್ಟೇರ್‌ನಲ್ಲಿ ರಾಗಿ, ಹತ್ತಿ, ಶೇಂಗಾ ಬೆಳೆಗೆ ನೀರಿನ ಕೊರತೆ ಉಂಟಾಗಿದೆ. ಹದಿನೈದು ದಿನಗಳಲ್ಲಿ ಮಳೆ ಯಾದರೆ ಪರಿಸ್ಥಿತಿ ಸುಧಾರಿಸಲಿದೆ. ಆಗಸ್ಟ್‌ – ಸೆಪ್ಟೆಂಬರ್‌ ಭಾಗದಲ್ಲಿ ಮತ್ತಷ್ಟು ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Advertisement

ನೀರು ಪೂರೈಕೆ: ಹಾಸನ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಸೇರಿ 12 ಜಿಲ್ಲೆಗಳ 184 ಹಳ್ಳಿಗಳಿಗೆ 275 ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯ ಇರುವ ಕಡೆ ಖಾಸಗಿ ಬೋರ್‌ವೆಲ್‌ ಗುತ್ತಿಗೆಗೆ ಪಡೆದು ನೀರು ಪೂರೈಕೆಗೂ ಆದೇಶಿಸಲಾಗಿದೆ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 5 ಕೋಟಿ ರೂ.ನಂತೆ ಒಟ್ಟು 221.23 ಕೋಟಿ ರೂ.ನಗದು ಇದ್ದು, ಯಾವುದೇ ತುರ್ತು ಪರಿಹಾರ ಕಾಮಗಾರಿ ಗಳಿಗೂ ಹಣದ ಕೊರತೆಯಿಲ್ಲ. ಬರಪೀಡಿತ ಪ್ರದೇಶ ಎಂದು ಘೋಷಿಸುವುದಕ್ಕೂ, ಕುಡಿಯುವ ನೀರು ಪೂರೈಕೆ ಮಾಡುವುದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಬರ ನಿರ್ವಹಣೆ ಕುರಿತು ಹೊಸ ವಿಧಾನ ಜಾರಿಗೆ ತಂದಿದೆ. ಈ ವಿಧಾನವು ಹೆಚ್ಚು ವೈಜ್ಞಾನಿಕವಾದ ಮಾನ ದಂಡಗಳನ್ನು ಹೊಂದಿದೆ. ಮಳೆ ಕೊರತೆ ಮತ್ತು ಮಳೆ ರಹಿತ ಪ್ರದೇಶಗಳ ಸ್ಥಿತಿಗತಿ ಅರಿಯಲು, ಬರ ಪರಿಣಾಮ ತಿಳಿಯಲು ಬೀಜ ಬಿತ್ತನೆ ಪ್ರದೇಶ, ತೇವಾಂಶ, ಮತ್ತು ನೀರಿನ ಲಭ್ಯತೆಯ ಸೂಚ್ಯಂಕಗಳನ್ನು ಇದು ಒಳಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯಲಿದೆ ಭೂ ದಾಖಲೆಗಳ ಸಮೀಕ್ಷೆ
ಬೆಂಗಳೂರು: ರಾಜ್ಯದಲ್ಲಿ 54 ವರ್ಷಗಳ ನಂತರ ಭೂ ದಾಖಲೆಗಳ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ, ರಾಮನಗರ, ಉತ್ತರ ಕನ್ನಡ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಭೂ ದಾಖಲೆಗಳ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ನಂತರ, ಹಂತ ಹಂತವಾಗಿ ಇದನ್ನು ರಾಜ್ಯಾದ್ಯಂತ ನಡೆಸಲಾಗುವುದು. ರಾಜ್ಯದಲ್ಲಿ 1964ರಲ್ಲಿ ಭೂ ದಾಖಲೆಗಳ ಸರ್ವೇ ನಡೆದದ್ದು, ಬಿಟ್ಟರೆ ಮತ್ತೆ ಆಗಿಲ್ಲ. 30 ವರ್ಷಕ್ಕೊಮ್ಮೆ ಸರ್ವೇ ಕಾರ್ಯ ನಡೆಯಬೇಕಿತ್ತಾದರೂ 54 ವರ್ಷಗಳಿಂದ ನಡೆದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡುವುದಾಗಿ ತಿಳಿಸಲಾಗಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅದೇ ರೀತಿ, ನಗರ ಪ್ರದೇಶಗಳಲ್ಲಿ ಆಸ್ತಿ ಮಾಲೀಕತ್ವ ಸಮೀಕ್ಷೆ ನಡೆಸಿ ಕಾರ್ಡ್‌ ನೀಡುವ ಯೋಜನೆ ಸಹ ಕೈಗೆತ್ತಿಕೊಳ್ಳಲಾಗಿದೆ.

ಶಿವಮೊಗ್ಗದಲ್ಲಿ ಪೂರ್ಣಗೊಳಿಸಿ, ಮಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ನಂತರ ಮೈಸೂರಿನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇಡೀ ರಾಜ್ಯಾದ್ಯಂತ ಈ ಸಮೀಕ್ಷಾ ಕಾರ್ಯ ನಡೆಯಲಿದೆ. ಎರಡೂ ಸಮೀಕ್ಷೆಗಳಿಂದ ಭೂ ದಾಖಲೆ, ಭೂ ಒಡೆತನಗಳ ಸ್ಪಷ್ಟ ಮಾಹಿತಿ ಸಿಗಲಿದ್ದು, ಅಕ್ರಮ ಪರಭಾರೆ, ಒತ್ತುವರಿ ಸೇರಿ ಅಕ್ರಮಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಹೇಳಿದರು.

ಬೇರೆ ರಾಜ್ಯದವರಿಗೆ ಬಗರ್‌ಹುಕುಂ ಜಮೀನು ಹಂಚಿಕೆಯಾಗಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು. ಅರ್ಜಿಗಳ ಶೀಘ್ರ ಇತ್ಯರ್ಥಕ್ಕೂ
ಕ್ರಮ ಕೈಗೊಳ್ಳಲಾಗುವುದು. 

● ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next