ಬನಹಟ್ಟಿ: ಜನರ ಜೀವನಾಡಿಯಾಗಿರುವ ಕೃಷ್ಣೆಯ ಒಡಲು ಸಂಪೂರ್ಣವಾಗಿ ಬರಿದಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭಗೊಂಡಿದೆ. ಕೊಡಗಳನ್ನು ಹಿಡಿದ ಮಹಿಳೆಯರು, ಹಿರಿಯರು, ಮಕ್ಕಳು ಸರದಿಯಲ್ಲಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ. ಅಲ್ಲದೇ ಬಿಸಿಲಿನ ತಾಪವೂ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆಡೆ ನೀರಿಗಾಗಿ ಪರದಾಟ, ಇನ್ನೊಂದೆಡೆ ಬಿಸಿಲಿನ ತಾಪದಿಂದ ಜನ ಕಂಗೆಟ್ಟು ಹೋಗಿದ್ದಾರೆ.
ಹಿಪ್ಪರಗಿ ಜಲಾಶಯ ಮುಂಭಾಗ ಸಂಪೂರ್ಣ ಬರಿದಾಗಿ ಸಂಪೂರ್ಣ ಆಟದ ಬಯಲಿನಂತೆ ಕಾಣುತ್ತಿತ್ತು. ಹಿಂಭಾಗದ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನು ರೈತರು ತಮ್ಮ ತೋಟಗಳಿಗೆ ತೆಗೆದುಕೊಂಡು ಹೋಗಿ ಉಳಿದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳನ್ನು ಅವಲಂಬಿಸಿರುವ ಕೃಷ್ಣಾ ನದಿಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಲಿದೆ.
ಕೃಷ್ಣಾ ನದಿ ಬತ್ತಿ ತಿಂಗಳಿಗಿಂತ ಹೆಚ್ಚು ಕಾಲವಾಗಿದೆ. ಈ ಭಾಗದ ಆಡಳಿತ ಮತ್ತು ವಿರೋಧ ಪಕ್ಷದ ಜನಪ್ರತಿನಿಧಿಗಳು ಮಹಾರಾಷ್ಟ್ರಕ್ಕೆ ಹೋಗಿ ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ನೀರು ಬಿಡುವಂತೆ ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ನೀರು ಬಂದಿಲ್ಲ.
ರಬಕವಿ-ಬನಹಟ್ಟಿ ಹಾಗೂ ಕೃಷ್ಣಾ ನದಿ ತೀರದ ಲಕ್ಷಾಂತರ ಜನ ಮತ್ತು ಜಾನುವಾರುಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಕೊಯ್ನಾ ಜಲಾಶಯದಿಂದ ನೀರು ಬಂತು ಎಂಬ ಮಾತುಗಳು ಸದ್ಯ ಹುಸಿಗೊಳ್ಳುತ್ತಿದ್ದು, ಜನರು ಜನಪ್ರತಿನಿಧಿಗಳ ನೀಡಿದ ಭರವಸೆಗಳು ಹುಸಿಯಾಗಿವೆ.
ಈ ಭಾಗದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಒಂದೆರಡು ಗಂಟೆಗಳ ಕಾಲ ನೀರು ಕೊಡುತ್ತಿದ್ದ ಕೊಳವೆ ಬಾವಿಗಳು ಈಗ ಕೇವಲ ಅರ್ಧ ಗಂಟೆಗಳ ಕಾಲ ಮಾತ್ರ ನೀರನ್ನು ನೀಡುತ್ತಿವೆ. ಮುಂದಿನ ಒಂದು ವಾರದೊಳಗಾಗಿ ಕೃಷ್ಣೆಗೆ ನೀರು ಬರದೆ ಇದ್ದರೆ ಸಮಸ್ಯೆ ಉಲ್ಬಣಿಸಲಿದೆ.
ಜವಳಿ ಉದ್ದಿಮೆ ಹೊಂದಿರುವ ರಬಕವಿ-ಬನಹಟ್ಟಿ, ರಾಜ್ಯದಲ್ಲಿಯೇ ಸೀರೆಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇಲ್ಲಿ ದಿನಂಪ್ರತಿ ಸಾವಿರಾರು ಸೀರೆಗಳು ರಫ್ತಾಗುತ್ತವೆ. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳಿಗೆ ಪ್ರಮುಖವಾಗಿ ನೀರು ಬೇಕು. ಸದ್ಯ ನೀರಿನ ಅಭಾವದ ಕಾರಣ ಪರೋಕ್ಷವಾಗಿ ಜವಳಿ ಉದ್ದಿಮೆಗೆ ಪೆಟ್ಟು ಬಿದ್ದಿದೆ. ಅಲ್ಲದೇ ಇದು ನೇಕಾರಿಕೆಯ ಉದ್ಯೋಗದ ಮೇಲೂ ಪರಿಣಾಮ ಬೀರಿದೆ.
ನೀರಿನ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತಾಲೂಕು ಆಡಳಿತ ಸಮರ್ಪಕ ನೀರು ಪೂರೈಸುವತ್ತ ಅಗತ್ಯ ಕ್ರಮ ಕೈಗೊಂಡಿದೆ. ಅಧಿಕಾರಿಗಳ ಸಭೆ ಕರೆದು ಎಲ್ಲಿ ನೀರಿನ ಅವಶ್ಯವಿರುವ ಕಡೆ ನೀರು ಪೂರೈಕೆಗೆ ಸೂಚಿಸಲಾಗಿದೆ.
•ಕೆ. ರಾಘವೆಂದ್ರರಾವ್ ತಹಶೀಲ್ದಾರ್ ರಬಕವಿ-ಬನಹಟ್ಟಿ
ಕಿರಣ ಶ್ರೀಶೈಲ ಆಳಗಿ