Advertisement

ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ತಟ್ಟಿದ ಮಂತ್ರಿಗಿರಿಗೆ ಬರ

09:21 PM Aug 21, 2019 | Team Udayavani |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ಪತನದ ಬಳಿಕ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಎರಡು ವಾರ ಕಳೆದ ನಂತರ ವಿಸ್ತರಣೆಯಾದ ಸಚಿವ ಸಂಪುಟ ಜಿಲ್ಲೆಗೆ ನಿರಾಸೆ ತಂದಿದೆ. ಜಿಲ್ಲೆಯಲ್ಲಿ ಕಮಲದ ಶಾಸಕರು ಇಲ್ಲದ ಜೊತೆಗೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಅನರ್ಹಗೊಂಡಿರುವುದರಿಂದ ಬಿಜೆಪಿ ಸರ್ಕಾರದಲ್ಲಿ ಸದ್ಯಕ್ಕೆ ಜಿಲ್ಲೆಗೆ ಮಂತ್ರಿಗಿರಿ ಒಲಿಯುತ್ತಾ ಎಂಬ ಅನುಮಾನ ಇನ್ನೂ ಜೀವಂತವಾಗಿದೆ.

Advertisement

ರಾಜಕೀಯ ಲೆಕ್ಕಾಚಾರ: ಚಿಕ್ಕಬಳ್ಳಾಪುರ ಜಿಲ್ಲೆ ದಶಕಗಳಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, ಇದುವರೆಗೂ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿದ ಇತಿಹಾಸ ಇಲ್ಲ. ಹೀಗಾಗಿ ನಿರೀಕ್ಷೆಯಂತೆ ಜಿಲ್ಲೆಯ ಶಾಸಕರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದರೂ ಸಚಿವ ಸ್ಥಾನ ಆಕಾಂಕ್ಷೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಹೊಸ್ತಿಲಲ್ಲಿರುವ ಡಾ.ಕೆ.ಸುಧಾಕರ್‌ಗೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುತ್ತಾ ಅಥವ ಇಲ್ಲವಾ? ಅನರ್ಹದಿಂದ ಅವರ ರಾಜಕೀಯ ಜೀವನ ಏನೆಲ್ಲಾ ಆಗಬಹುದೆಂಬ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಬಯಲು ಸೀಮೆ ಜಿಲ್ಲೆಗಳ ಪೈಕಿ ಕೋಲಾರದ ಜಿಲ್ಲೆಯ ಪಕ್ಷೇತರ ಶಾಸಕ ನಾಗೇಶ್‌ ಹಾಗೂ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಆದರೆ ಸದಾ ಬರಗಾಲದಿಂದ ಸಂಕಷ್ಟ ಎದುರಿಸುವ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಸದ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿಗೆ ಬರ ಎದುರಾಗಿದೆ. 2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಕುಮಾರಸ್ವಾಮಿ, ಧರ್ಮಸಿಂಗ್‌ ಸರ್ಕಾರದಲೂ ಮಂತ್ರಿ ಸ್ಥಾನದಿಂದ ಜಿಲ್ಲೆ ವಂಚಿತವಾಗಿತ್ತು.

ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ: ಕಳೆದ 2013 ರಲ್ಲಿ ಕಾಂಗ್ರೆಸ್‌ ಸರ್ಕಾರ ಪೂರ್ಣ ಬಹುಮತ ಇದ್ದರೂ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ 14 ವರ್ಷಗಳ ಬಳಿಕ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆಲವು ಸಾಧಿಸಿದ್ದ ಎನ್‌.ಹೆಚ್‌.ಶಿವಶಂಕರರೆಡ್ಡಿ ಸಚಿವ ಸ್ಥಾನ ಸಿಕ್ಕಿತ್ತು. ಅವರ ನಿರೀಕ್ಷೆಯಂತೆ ಕೃಷಿ ಖಾತೆ ಒಲಿದು ಬಂದಿತ್ತು. ಆದರೆ ಸ್ವಪಕ್ಷೀಯ ಶಾಸಕರ ಬಂಡಾಯ, ರಾಜೀನಾಮೆ ಪರ್ವದಿಂದ ಮೈತ್ರಿ ಸರ್ಕಾರ 14 ತಿಂಗಳಿಗೆಲ್ಲಾ ಪತನವಾಗಿದ್ದರಿಂದ ಶಿವಶಂಕರರೆಡ್ಡಿ ಮಂತ್ರಿಸ್ಥಾನ ಕಳೆದುಕೊಂಡರು.

14 ವರ್ಷದ ಬಳಿಕ ಜಿಲ್ಲೆಯ ಶಾಸಕರೊಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕರೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚು ವರ್ಷ ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲ. ಶಾಸಕ ಸ್ಥಾನಕ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಬೇಕೆಂಬ ಮಹತ್ವಕಾಂಕ್ಷೆಯನ್ನು ಸುಧಾಕರ್‌ ಹೊಂದಿದ್ದರು. ಆದರೆ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ರಾಜೀನಾಮೆಯನ್ನು ಅಂಗೀಕರಿಸದೇ ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನದ ಆಕಾಂಕ್ಷೆ ಸದ್ಯಕ್ಕೆ ಕಮರಿ ಹೋಗಿದೆ. ಶಾಸಕರ ಅನರ್ಹತೆ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ಅವರ ರಾಜಕೀಯ ಭವಿಷ್ಯ, ಸಚಿವರಾಗುವ ಬಗ್ಗೆ ನಿರ್ಧಾರವಾಗಲಿದೆ.

Advertisement

ಮಾಲಿನ್ಯ ನಿಯಂತ್ರಣ ಮಂಡಳಿಯೇ ಕಾಯಂ ಆಗುತ್ತಾ?: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರಿ ಅನರ್ಹಗೊಂಡ ಶಾಸಕರ ಪೈಕಿ ಸದ್ಯಕ್ಕೆ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್‌ ಮಾತ್ರ ನಿಗಮ, ಮಂಡಳಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಮೈತ್ರಿ ಸರ್ಕಾರದಲ್ಲಿಯೇ ಅವರನ್ನು ಕೊನೆ ಗಳಿಗೆಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ಸುಧಾಕರ್‌ರನ್ನು ಪರಿಸರ ಮಾಲಿನ್ಯ ನಿಯಂತ್ರನ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದರು.

ಆದರೆ ಸುಧಾಕರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಂಡಳಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅನರ್ಹ ಪ್ರಕರಣದ ವಿಚಾರಣೆ ನಡೆದು ತೀರ್ಪು ಹೊರ ಬಿದ್ದು ಒಂದು ವೇಳೆ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದರೆ ಸುಧಾಕರ್‌ ರಾಜಕೀಯ ಭವಿಷ್ಯ ಡೋಲಾಯಮಾನವಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಕೈ ತಪ್ಪಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮುಂದುವರಿಯುವುದು ಕಾಯಂ ಆಗಲಿದೆ.

ಬೇರೆ ಜಿಲ್ಲೆಯ ಸಚಿವರಿಗೆ ಜಿಲ್ಲೆಯ ಉಸ್ತುವಾರಿ: 2008 ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದ ವೇಳೆ ಮೊದಲಿಗೆ ಮುಮ್ತಾಜ್‌ ಅಲಿಖಾನ್‌ರಿಂದ ಹಿಡಿದು ಅನೇಕಲ್‌ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಪಾವಗಡ ವೆಂಕಟರವಣ ಹೀಗೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಸರ್ಕಾರ ಗುರಿಯಾಗಿತ್ತು.

ಇದೇ ಪರಿಸ್ಥಿತಿ ಈಗ ಮತ್ತೆ ಮರುಕಳಿಸುತ್ತಾ ಎಂಬ ಅನುಮಾನ ಜಿಲ್ಲೆಯ ಜನರನ್ನು ಈಗಲೇ ಕಾಡುತ್ತಿದೆ. 2013 ರಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಕೂಡ ಜಿಲ್ಲೆಯ ಉಸ್ತುವಾರಿಗಳಾಗಿ ದಿನೇಶ್‌ ಗುಂಡೂರಾವ್‌, ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯವರೇ ಆದ ಶಿವಶಂಕರರೆಡ್ಡಿ 14 ತಿಂಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಶಾಸಕರು ಯಾರೊಬ್ಬರು ಇಲ್ಲದ ಕಾರಣ ಜಿಲ್ಲೆಯ ಉಸ್ತುವಾರಿ ಮತ್ತೂಂದು ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಸಿಗಲಿದೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next