Advertisement
ಮಳೆ ಕೊರತೆ ಕಾರಣದಿಂದಾಗಿ ಆಹಾರ ಉತ್ಪಾದನೆ ಪ್ರಮಾಣ ನಿರೀಕ್ಷಿತ ಗುರಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಕುಸಿತ ಕಂಡುಬರಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಈಗಾಗಲೇ ಬೇಳೆ ಕಾಳುಗಳ ಬೆಲೆ ಹೆಚ್ಚಳವಾಗಿರುವ ಆತಂಕದ ಜತೆಗೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ವಸ್ತುಗಳ ಬೆಲೆ ಏರಿಕೆಯೂ ತುಸು ಜೋರಾಗಿಯೇ ತಟ್ಟುವ ಸಾಧ್ಯತೆಗಳು ನಿಚ್ಚಳವಾಗಿವೆ.
Related Articles
Advertisement
ನಷ್ಟ ಪ್ರಮಾಣ 30 ಸಾವಿರ ಕೋಟಿ:
ರಾಜ್ಯದಲ್ಲಿ ಮುಂಗಾರಿನಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶ 118 ಲಕ್ಷ ಹೆಕ್ಟೇರ್ (ಶೇ. 89). ಈ ಪೈಕಿ ಮಳೆ ಅಭಾವದಿಂದ 39.74 ಲಕ್ಷ ಹೆಕ್ಟೇರ್ ಕೃಷಿ ಮತ್ತು 1.82 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿ ಮೊತ್ತ ಅಂದಾಜು 30 ಸಾವಿರ ಕೋಟಿ ಆಗಿದೆ. 13 ಜಿಲ್ಲೆಗಳ 195 ತಾಲ್ಲೂಕುಗಳನ್ನು ಈಗಾಗಲೇ “ಬರಪೀಡಿತ’ ಎಂದು ಘೋಷಿಸಲಾಗಿದ್ದು, ಅದರಂತೆ ಆ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಶೀಘ್ರ ಅದು ವರದಿ ಕೂಡ ನೀಡಲಿದ್ದು, ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇದರ ಬೆನ್ನಲ್ಲೇ ಇನ್ನೂ 21 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಬೆಳೆ ಸಮೀಕ್ಷೆ ನಡೆದಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಅದರ ವರದಿ ಕೂಡ ಬರಲಿದೆ ಎಂದು ಮಾಹಿತಿ ನೀಡಿದರು.
ಬೆಳೆ ಹಾನಿಯಲ್ಲಿ ಮುಖ್ಯವಾಗಿ ಭತ್ತ, ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹುರಳಿ, ಹತ್ತಿ, ಶೇಂಗಾ ಮತ್ತಿತರ ಬೆಳೆಗಳು ಹಾಳಾಗಿವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್ ಖುಷ್ಕಿ ಜಮೀನಿಗೆ 13,600 ರೂ. ಹಾಗೂ ನೀರಾವರಿ ಜಮೀನಿಗೆ 25 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗೆ 28 ಸಾವಿರ ಹೆಕ್ಟೇರ್ ಪರಿಹಾರ ನೀಡಬೇಕು ಎಂದು ವಿವರಿಸಿದ ಅವರು, 2023ರ ಮುಂಗಾರು ಹಂಗಾಮಿನಲ್ಲಿ ಒಟ್ಟು 36 ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅಧಿಸೂಚಿಸಲಾಗಿದೆ. 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ರೈತ ಸುರಕ್ಷತಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಆತ್ಮಹತ್ಯೆ ಪ್ರಮಾಣ ಇಳಿಕೆ
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 313 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. 2022-23ನೇ ಸಾಲಿಗೆ ಹೋಲಿಸಿದರೆ, ರೈತರ ಆತ್ಮಹತ್ಯೆಗಳು ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಾರಿ 313ಕ್ಕೆ ಇಳಿಕೆಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ಗ್ಯಾರಂಟಿಗಳು ಆಸರೆಯಾಗಿವೆ ಎಂದರು.
ಸಾವಿರ ಹುದ್ದೆಗಳ ನೇಮಕ
ಕೃಷಿ ಇಲಾಖೆಯಲ್ಲಿ ಶೇ. 57ರಷ್ಟು ಸಿಬ್ಬಂದಿ ಕೊರತೆ ಇದೆ. ಅವುಗಳ ಭರ್ತಿಗೆ ಕ್ರಮ ಕೈಗೊಂಡಿದ್ದು, ಮೊದಲ ಹಂತದಲ್ಲಿ ಸಾವಿರ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುವುದು. ಇದರಲ್ಲಿ 350 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳನ್ನು ನೇಮಿಸಲು ಉದ್ದೇಶಿಸಲಾಗಿದೆ. ಇವರೆಲ್ಲರೂ ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ನೇಮಕಗೊಳ್ಳಲಿದ್ದಾರೆ ಎಂದು ಹೇಳಿದರು.
ಲೋಡ್‌ಶೆಡ್ಡಿಂಗ್ ಸತ್ಯ
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತುಸು ಹೆಚ್ಚಾಗಿಯೇ ಇದೆ. ಹಾಗಾಗಿ, ಲೋಡ್‌ಶೆಡ್ಡಿಂಗ್ ಆಗುತ್ತಿರುವುದು ಸತ್ಯ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಒಪ್ಪಿಕೊಂಡರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ಇಲಾಖೆಯಲ್ಲಿ ತುಸು ಜಾಸ್ತಿಯೇ ಸಮಸ್ಯೆ ಆಗಿದೆ. ಹಾಗಾಗಿ, ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಆಗುತ್ತಿದೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ಕೂಡ ಈ ಅಂಶ ಬಂದಿದ್ದು, ಅವರೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.
118 ಲಕ್ಷ ಹೆಕ್ಟೇರ್- ಒಟ್ಟು ಬಿತ್ತನೆ ಪ್ರದೇಶ
39.74 ಲಕ್ಷ ಹೆಕ್ಟೇರ್- ಕೃಷಿ ಪ್ರದೇಶ ಹಾನಿ
1.82 ಲಕ್ಷ ಹೆಕ್ಟೇರ್- ತೋಟಗಾರಿಕೆ ಬೆಳೆ ಹಾನಿ
195- ಬರಪೀಡಿತ ತಾಲೂಕುಗಳು
13- ಜಿಲ್ಲೆಗಳು
21- ಜಿಲ್ಲೆಗಳ ಸಮೀಕ್ಷೆ ಪ್ರಗತಿಯಲ್ಲಿ