ಸಿರುಗುಪ್ಪ: ನಗರದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಿರುಗುಪ್ಪ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷ ಕಳೆದರೂ ನಾಗರಿಕರಿಗೆ ಸಕಾಲಕ್ಕೆ ನೀರೊದಗಿಸುವ ಕಾರ್ಯ ಮಾಡಿಲ್ಲ. ಇದರಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ.
ನಗರದ ಸಮೀಪವೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಗರದ ಕೆಲವು ವಾರ್ಡಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಸದ್ಯ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿದ್ದು, ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಹರಿಯುವ ತಂಗಭದ್ರಾ ನದಿಯ ದಂಡೆಯ ಉದ್ದಕ್ಕೂ ನೂರಾರು ಏತ ನೀರಾವರಿ ಯೋಜನೆಗಳು ನಿರ್ಮಿಸಿ ನದಿ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಿದ್ದು, ಇದರಿಂದ ನದಿಯಲ್ಲಿ ಹರಿಯುತ್ತಿರುವ ನೀರಿನ ಹರಿವು ಕಡಿಮೆಯಾಗಿದೆ.
ಪ್ರತಿವರ್ಷ ಮಾರ್ಚ್ ನಂತರ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ ಈ ವರ್ಷ ಫೆಬ್ರವರಿಯಲ್ಲೇ ತುಂಗಭದ್ರಾ ನದಿ ಬತ್ತಿದೆ. ಆದರೆ ಸೀಮಾಂಧ್ರ ಪ್ರದೇಶಕ್ಕೆ ನದಿ ಮೂಲಕ ನೀರು ಬಿಟ್ಟಿದ್ದರಿಂದ ಸದ್ಯ ನದಿಯಲ್ಲಿ ಅಲ್ಪ ಪ್ರಮಾಣದ ನೀರು ಹರಿಯುತ್ತಿದೆ. ನಗರದಿಂದ 5 ಕಿ.ಮೀ. ದೂರದಲ್ಲಿರುವ ತುಂಗಭದ್ರಾ ನದಿಯ ಹರಿಗೋಲ್ ಘಾಟ್ ಭಾಗದಲ್ಲಿ ಸದ್ಯ ಸಂಗ್ರಹಗೊಂಡಿರುವ ನೀರು ನಗರಕ್ಕೆ ಪೂರೈಸಲು ಒಂದೂವರೆ ತಿಂಗಳಿಗೆ ಮಾತ್ರ ಸಾಕಾಗುತ್ತದೆ. ನದಿಯಲ್ಲಿ ಸಂಪೂರ್ಣ ನೀರು ಬತ್ತಿ ಹೋದ ನಂತರ ಹರಿಗೋಲ್ ಘಾಟ್‌ನಿಂದ ನೀರು ಬಿಡುವ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಪ್ರತಿವರ್ಷ ನಗರದ ಜನರು ಬೇಸಿಗೆ ಸಮಯದ ಮೂರರಿಂದ ನಾಲ್ಕು ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿಬಾರಿಯೂ ನಗರಸಭೆ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಂದಾಗ ಮಾತ್ರ ನದಿ ನೆನಪಾಗುತ್ತದೆ. ಯಾವುದೇ ಶಾಶ್ವತ ಯೋಜನೆ ರೂಪಿಸದೆ ಕಾಟಾಚಾರಕ್ಕೆ ನದಿಯ ಪಂಪ್‌ಹೌಸ್ ಹತ್ತಿರ ಉಸುಕಿನಿಂದ ತಡೆಗೋಡೆ ನಿರ್ಮಿಸಿ ಹರಿಗೋಲ್ ಘಾಟ್‌ನಿಂದ ನೀರು ಪೂರೈಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಿರ್ಮಾಣವಾಗದ ಕೆರೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೆರೆ ನಿರ್ಮಾಣಕ್ಕೆ ಕಳೆದ ಎರಡು ವರ್ಷದ ಹಿಂದೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಸದ್ಯ ಕೆರೆ ನಿರ್ಮಾಣ ಕಾರ್ಯ ಪ್ರತಿ ವರ್ಷವೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನದಿಯಲ್ಲಿ ನೀರು ಹರಿಯುವಾಗ ಗಮನ ಹರಿಸದ ಅಧಿಕಾರಿಗಳು ನದಿ ಬತ್ತಿ ಹೋದ ಮೇಲೆ ಕುಡಿಯುವ ನೀರೊದಗಿಸಲು ಪರದಾಡುತ್ತಾರೆ. ಹೀಗಾಗಿ ನಾವು ಶುದ್ಧ ಕುಡಿಯುವ ನೀರು ಹಣ ಕೊಟ್ಟು ಖರೀದಿಸಬೇಕಾಗಿದೆ.
ಕೆ.ದೇವೇಂದ್ರಪ್ಪ, ನಗರವಾಸಿ, ಸಿರುಗುಪ್ಪ.
ಸದ್ಯ ನಗರದಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ. ನದಿಯಲ್ಲಿ ನೀರಿದ್ದು, ಅಲ್ಲಿಂದ ಪೂರೈಸಲಾಗುತ್ತಿದೆ. ನದಿ ಬತ್ತಿದ ನಂತರ ಹರಿಗೋಲ್ ಘಾಟ್‌ನಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ನಗರದ 27ವಾರ್ಡ್‌ಗಳಲ್ಲಿ ಸುಮಾರು 100 ಸಿಸ್ಟ್ರನ್ ಟ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಸದ್ಯ ನೀರಿನ ಸಮಸ್ಯೆ ಇಲ್ಲ. ಪ್ರೇಮ್‌ಚಾರ್ಲ್ಸ್, ಪೌರಾಯುಕ್ತರು, ಸಿರುಗುಪ್ಪ