ಚಿತ್ರದುರ್ಗ: ರಾಜ್ಯದಲ್ಲಿ ಶೇ.99ರಷ್ಟು ಮಳೆ ಕೊರತೆಯಾಗಿದ್ದು, 130 ತಾಲೂಕುಗಳ ಬರ ಪರಿಸ್ಥಿತಿ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದ ಹಾನಿಯಾಗಿರುವ ಮೆಕ್ಕೆಜೋಳ, ಶೇಂಗಾ ಹಾಗೂ ರಾಗಿ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ಲಕ್ಷ್ಮೀಸಾಗರ ಗ್ರಾಮದ ರೈತರಾದ ಸಲುಪಣ್ಣ, ಶಿವಮೂರ್ತಿ, ಈರಮ್ಮ, ನಾಗರಾಜಪ್ಪ ಅವರಿಂದ ಮಾಹಿತಿ ಪಡೆದುಕೊಂಡರು.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗಸ್ಟ್ ತಿಂಗಳಿನಲ್ಲಿ ಉತ್ತಮ ಮಳೆ ನಿರೀಕ್ಷೆಯಿತ್ತು. ಆದರೆ ಈ ತಿಂಗಳಲ್ಲಿ ಶೇ.99ರಷ್ಟು ಮಳೆ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಅ ಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದು, ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಬರದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಸಿದ್ಧವಿದೆ. ಸರ್ಕಾರದ ಮಟ್ಟದಲ್ಲೂ ಶಾಸಕರು ಹಾಗೂ ಹಲವು ಮಂತ್ರಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ ಎಂದರು.
ವಾಸ್ತವಿಕ ವರದಿ ಬಂದ ನಂತರ ಬರ ಪೀಡಿತ ತಾಲೂಕುಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಲಿದೆ. ಬರ ಪಟ್ಟಿಯಲ್ಲಿ ತಾಲೂಕುಗಳು ಬಿಟ್ಟು ಹೋಗಿದ್ದರೆ ಪರಿಶೀಲಿಸಿ ಸೇರಿಸಲಾಗುವುದು. ಮಾರ್ಗಸೂಚಿ ಅನುಸಾರ ಯಾವ ತಾಲೂಕುಗಳಲ್ಲಿ ಬರ ಲಕ್ಷಣಗಳು ಕಂಡುಬರುತ್ತದೆ ಅವುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು. ಸರ್ಕಾರ ರಾಜ್ಯದ 6.5 ಕೋಟಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಯತ್ನಿಸುತ್ತದೆ. ಬೆಳೆ ಪರಿಹಾರದ ಹಣ ತಾಂತ್ರಿಕ ಕಾರಣದಿಂದ ಬೇರೆಯವರ ಖಾತೆಗೆ ಜಮಾ ಆಗಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬರ ಪರಿಹಾರ ಕಾರ್ಯಗಳ ನಿಯಮಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವ ಮಾರ್ಗಸೂಚಿಗಳ ಸರಳೀಕರಣಕ್ಕೆ ಚಿಂತನೆ ನಡೆದಿದ್ದು, ಜಿಲ್ಲಾ ಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.
– ಎನ್.ಚೆಲುವರಾಯಸ್ವಾಮಿ, ಕೃಷಿ ಸಚಿವ
ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.93ರಷ್ಟು ಬಿತ್ತನೆಯಾಗಿದೆ. ಆದರೆ ಸಂಪೂರ್ಣವಾಗಿ ಮಳೆ ಕೈಕೊಟ್ಟಿದೆ. ಮಳೆ ಕೊರತೆ ಕಂಡುಬಂದರೆ ಬರ ಎಂದು ಘೋಷಣೆ ಮಾಡಲಾಗುತ್ತದೆ. ವಾಸ್ತವ ಸ್ಥಿತಿ ತಿಳಿಯುವ ಸಲುವಾಗಿ ಜಿಲ್ಲಾ ಧಿಕಾರಿ ನೇತೃತ್ವದಲ್ಲಿ ಅಂತರ್ ಇಲಾಖೆ ಸಮೀಕ್ಷೆ ನಡೆಸಿ ವಸ್ತುಸ್ಥಿತಿಯ ವರದಿ ನೀಡಲು ಸೂಚನೆ ನೀಡಲಾಗಿದೆ. ಮೊದಲಿನಿಂದಲೂ ಚಿತ್ರದುರ್ಗ ಕಡಿಮೆ ಮಳೆ ಬೀಳುವ ಪ್ರದೇಶ. ರಾಜ್ಯದ ಮಧ್ಯ ಭಾಗದಲ್ಲಿರುವ ಜಿಲ್ಲೆಯ ರೈತರ ಸ್ಥಿತಿ ಅರಿಯುವ ಸಲುವಾಗಿಯೇ ಜಿಲ್ಲಾ ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರಾದ ಕೆ.ಸಿ. ವೀರೇಂದ್ರ, ಟಿ.ರಘುಮೂರ್ತಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಿಲ್ಲಾ ಧಿಕಾರಿ ದಿವ್ಯಪ್ರಭು ಇದ್ದರು.