Advertisement
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ ಮತ್ತು ಕೇಂದ್ರದ ನಿಲುವಿನ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಷ್ಟೇ ಅಲ್ಲ, ಲೋಕಸಭಾ ಚುನಾವಣ ಹೊಸ್ತಿಲಿನಲ್ಲಿ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿಯಲು ರಾಜ್ಯ ಸರಕಾರ ಮುಂದಾಗಿದೆ.
Related Articles
Advertisement
ಕೃಷಿಭಾಗ್ಯ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಮರಳಿ ಜಾರಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 24 ಜಿಲ್ಲೆಗಳ ಮಳೆ ಆಶ್ರಿತ ಕೃಷಿ ಚಟುವಟಿಕೆ ನಡೆಸುವ 106 ತಾಲೂಕುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಸಹಾಯಧನ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸಹಿತ ವಿವಿಧ ಕೃಷಿ ಚಟುವಟಿಕೆಗಳಿಗೆ ಯೋಜನೆಯನ್ವಯ ಉತ್ತೇಜನ ನೀಡಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಜನನ-ಮರಣ ನೋಂದಣಿ ತುಟ್ಟಿ
ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳ ತಿದ್ದುಪಡಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಳಂಬ ನೋಂದಣಿಗೆ ಸಲ್ಲಿಸುವ ಅರ್ಜಿ ಶುಲ್ಕವೂ ತುಟ್ಟಿಯಾಗಲಿದೆ. 21 ದಿನಗಳ ಅನಂತರ ಹಾಗೂ 30 ದಿನಗಳೊಳಗೆ ಅರ್ಜಿ ನೋಂದಣಿಗೆ 2 ರೂ. ಇರುವ ಶುಲ್ಕವನ್ನು 100 ರೂ.ಗಳಿಗೆ, 30 ದಿನಗಳಿಂದ ಒಂದು ವರ್ಷದ ಅವಧಿಗೆ ಇರುವ 5 ರೂ. ಶುಲ್ಕವನ್ನು 200 ರೂ.ಗಳಿಗೆ, 1 ವರ್ಷದ ಅನಂತರದ ವಿಳಂಬ ಶುಲ್ಕ 10 ರೂ. ಬದಲು 500 ರೂ.ಗಳಿಗೆ ಹೆಚ್ಚಿಸಲಾಗಿದೆ. ವಿಳಂಬ ಶುಲ್ಕದೊಂದಿಗೆ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸುವ ಬದಲು ಸಹಾಯಕ ಆಯುಕ್ತರಿಗೆ (ಎ.ಸಿ.) ಅರ್ಜಿ ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದಾಗಿದೆ.
ಸ್ಪಂದಿಸದ ಕೇಂದ್ರ
ಸಭೆಯ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ನರೇಗಾ ಯೋಜನೆ ಅನ್ವಯ 100 ಮಾನವ ದಿನಗಳ ಕೆಲಸವನ್ನು ಬಡ ಕುಟುಂಬಗಳು ಪೂರೈಸಿವೆ. ಹೀಗಾಗಿ ಬರದ ಸಂದರ್ಭದಲ್ಲಿ ಅದನ್ನು 150 ದಿನಕ್ಕೆ ವಿಸ್ತರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಇದುವರೆಗೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದಷ್ಟು ಬೇಗ ಕೇಂದ್ರ ನಿರ್ಣಯ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಸಮಯ ಕೊಡದ ಕೇಂದ್ರ
ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಸಚಿವ ಪಾಟೀಲ್ ಹೇಳಿದ್ದಾರೆ. ರಾಜ್ಯ ಸರಕಾರದ ವತಿ ಯಿಂದ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರೂ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಸಮಯಾವಕಾಶ ನೀಡಿಲ್ಲ ಎಂದು ದೂರಿದರು. ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರ ನಿಯೋಗದ ಭೇಟಿಗೆ ಕೇಂದ್ರದ ಕಾರ್ಯದರ್ಶಿಗಳು ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಕೇಂದ್ರ ತತ್‌ಕ್ಷಣ ನಿರ್ಣಯ ಕೈಗೊಂಡು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಬರ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ನಡೆಸುತ್ತಿವೆ. ಕೇಂದ್ರ ತಂಡದ ವರದಿ ಸಲ್ಲಿಕೆಯ ಬಳಿಕವೂ ಪರಿಹಾರ ಬಿಡುಗಡೆಯಾಗದಿರುವ ಬಗ್ಗೆ ಧ್ವನಿ ಎತ್ತುವ ಬದಲು ತಾವೇ ಬರ ಅಧ್ಯಯನ ಮಾಡಲು ಹೊರಟಿವೆ. ಈ ರಾಜಕೀಯ ನಡೆಯಿಂದ ಜನಕಲ್ಯಾಣ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಜನೀಶ್ ಗೋಯೆಲ್ ನೂತನ ಮುಖ್ಯ ಕಾರ್ಯದರ್ಶಿ?
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಈ ತಿಂಗಳು ಸೇವಾ ನಿವೃತ್ತಿಯಾಗಲಿದ್ದಾರೆ. ನೂತನ ಮುಖ್ಯ ಕಾರ್ಯದರ್ಶಿ ನೇಮಕ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. 2025 ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಸೇವಾವಧಿ ಹೊಂದಿರುವ ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಸಭೆಯಲ್ಲಿ ಪ್ರಸ್ತಾವವಾಗಿದೆ. ಮೂಲಗಳ ಪ್ರಕಾರ ರಜನೀಶ್ ಗೋಯೆಲ್ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.