Advertisement

Drought: ನೀರಿಲ್ಲದೇ 500 ಎಕರೆ ಭತ್ತದ ಬೆಳೆ ನಾಶ ಮಾಡಿದ ರೈತರು

02:37 PM Oct 06, 2023 | Team Udayavani |

ರಾಯಚೂರು: ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದೆ ಕಂಗಾಲಾಗಿರುವ ರೈತರು ಸಕಾಲಕ್ಕೆ ನೀರು ಸಿಗದ ಕಾರಣ ಭತ್ತದ ಬೆಳೆಯನ್ನೇ ನಾಶಪಡಿಸುತ್ತಿದ್ದಾರೆ! ತುಂಗಭದ್ರಾ ಜಲಾಶಯ ವ್ಯಾಪ್ತಿಯ ಎಡದಂಡೆ ಕಾಲುವೆ ಕೆಳಭಾಗದ ರಾಯಚೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ದಯನೀಯ ದೃಶ್ಯಗಳು ಕಂಡು ಬಂದಿವೆ.

Advertisement

ತಾಲೂಕಿನ ದಿನ್ನಿ, ಮಮದಾಪುರ, ಕಸಬೆಕ್ಯಾಂಪ್‌, ವೆಂಕಟೇಶ್ವರ ಕ್ಯಾಂಪ್‌, ಕಲಮಲ ಭಾಗದಲ್ಲಿ ರೈತರು ಸುಮಾರು 500 ಎಕರೆ ಭತ್ತದ ಜಮೀನಿಗೆ ಕುರಿಗಳನ್ನು ಹಾಯಿಸಿ ಮೇಯಿಸುವ ಮೂಲಕ ಬೆಳೆಹಾಳು ಮಾಡುತ್ತಿದ್ದಾರೆ. ಇನ್ನೂ ಕೆಲ ರೈತರು, ಟ್ರ್ಯಾಕ್ಟರ್‌ ಮೂಲಕವೇ ಬೆಳೆ ನಾಶ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಕೇವಲ 54 ಟಿಎಂಸಿ ಅಡಿ ನೀರು ಲಭ್ಯವಿದ್ದು, ಒಂದು ಬೆಳೆಗೆ ಮಾತ್ರ ನೀರು ಹರಿಸಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಲ್ಲೂ ನಿತ್ಯ 3,900 ಕ್ಯುಸೆಕ್‌ ಹರಿಸಿದರೆ ಮಾತ್ರ ನೀರು ಸಾಕಾಗಲಿದೆ ಎಂದು ಅ ಧಿಕಾರಿಗಳು ತಿಳಿಸಿದ್ದರು. ಆದರೆ, 3,900 ಕ್ಯುಸೆಕ್‌ ಹರಿಸಿದರೆ ಕೊನೆ ಭಾಗಕ್ಕೆ ನೀರು ಬರುವುದೇ ಇಲ್ಲ. ಕನಿಷ್ಠ 4,100 ಕ್ಯುಸೆಕ್‌ ಹರಿಸುವಂತೆ ರೈತರು ಒತ್ತಾಯಿಸಿದ್ದರು. ಅಧಿ ಕಾರಿಗಳು ಹೇಳುವ ಪ್ರಕಾರ, ನಿತ್ಯ 4,100 ಕ್ಯುಸೆಕ್‌ ಹರಿಸಲಾಗುತ್ತಿದೆ. ಆದರೂ ಮಾನ್ವಿ ಮತ್ತು ರಾಯಚೂರು ಭಾಗದ ಕೆಲ ನೀರಾವರಿ ಜಮೀನಿಗೆ ನೀರು ಹರಿದೇ ಇಲ್ಲ. ಇದರಿಂದ ಭತ್ತ ಇಳುವರಿ ಸಂಪೂರ್ಣ ಕುಂಠಿತಗೊಂಡಿದ್ದು, ರೈತರಿಗೆ ನಷ್ಟ ಎದುರಾಗಿದೆ.

ಪ್ರತಿ ಬಾರಿ ತಡವಾಗಿಯಾದರೂ ಕೊನೆ ಭಾಗಕ್ಕೆ ಒಂದು ಬೆಳೆಗೆ ನೀರು ಹರಿಯುತ್ತಿತ್ತು. ಈ ಬಾರಿ ಅಕ್ಟೋಬರ್‌ ಬಂದರೂ ನೀರು ತಲುಪಿಲ್ಲ.

ಇದರಿಂದ ತಾಲೂಕಿನ ದಿನ್ನಿ, ಮಮದಾಪುರ, ಕಲ್ಲೂರು, ಸಿರವಾರದ ಕಲಮಲ ಭಾಗದ ಸಾಕಷ್ಟು ಜಮೀನುಗಳ ಸ್ಥಿತಿ ಇದೇ ಆಗಿದೆ. ಇನ್ನೂ ಕೆಲ ರೈತರು ಮಳೆ ನಂಬಿಯೂ ಭತ್ತ ಬಿತ್ತನೆ ಮಾಡಿದ್ದರು. ಆದರೆ, ಮಳೆಯೂ ಬಾರದೆ ಬೆಳೆ ಚೇತರಿಕೆ ಕಂಡಿಲ್ಲ. ಇದರಿಂದ ಬೇರೆ ದಾರಿಯಿಲ್ಲದೇ ನಾಶಕ್ಕೆ ಮುಂದಾಗಿದ್ದಾರೆ.

Advertisement

ಹಿಂಗಾರಿಯಲ್ಲೂ ಬರ:

ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ತುಂಗಭದ್ರಾ ತೀರ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಕಾಲುವೆಗಳಿಗೂ ನೀರು ಇಲ್ಲದ್ದರಿಂದ ಬರಗಾಲ ಎದುರಾಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತದ ಬೆಳೆ ಒಣಗಿ ಹೋಗುತ್ತಿದೆ. ಹಿಂಗಾರಿಯಲ್ಲೂ ಮಳೆಯಾಗದಿದ್ದರೆ ಬೆಳೆಗೆ ಮಾತ್ರವಲ್ಲ, ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆ ಇದೆ.

ಲಕ್ಷಾಂತರ ರೂ. ಖರ್ಚು:

ರೈತರು ಭತ್ತ ನಾಟಿ ಮಾಡಿ ಆಗಲೇ ಒಂದೆರಡು ಬಾರಿ ಕ್ರಿಮಿನಾಶಕ, ಗೊಬ್ಬರ ಸಿಂಪಡಿಸಿ ಲಕ್ಷಾಂತರ ರೂ. ಖರ್ಚು ಮಾಡಿಕೊಂಡಿದ್ದಾರೆ. ಎಕರೆಗೆ ಏನಿಲ್ಲವೆಂದರೂ 25-30 ಸಾವಿರ ರೂ. ಖರ್ಚಾಗಿದೆ. ಇನ್ನೂ ಕೆಲ ರೈತರು ಲೀಜ್‌ ಪಡೆದುಕೊಂಡಿದ್ದು, ಜಮೀನು ಮಾಲೀಕರಿಗೆ ಆಗಲೇ ಹಣ ಪಾವತಿ ಮಾಡಿದ್ದಾರೆ. ಅದರ ಜತೆಗೆ ಬೆಳೆಗೂ ಖರ್ಚು ಮಾಡಿದ್ದು, ನಷ್ಟ ಮೈಮೇಲೆ ಎಳೆದುಕೊಳ್ಳುವಂತಾಗಿದೆ.

ಆನ್‌ ಆ್ಯಂಡ್‌ ಆಫ್ ಬದಲು ವಿಷ ಕೊಡಿ!

ಗುರುವಾರ ವಿಕಾಸಸೌಧದಲ್ಲಿ ತುಂಗಭದ್ರಾ ಯೋಜನೆಯ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ, ಜಲಾಶಯದಲ್ಲಿನ ನೀರನ್ನು ಬೆಳೆಗೆ ಬಿಡುತ್ತಾ ಹೋದರೆ ಕುಡಿಯುವ ನೀರು ಸೇರಿದಂತೆ ಅನ್ಯ ಬಳಕೆಗೆ ಕಷ್ಟವಾಗ ಲಿದೆ. ಹೀಗಾಗಿ ವಾರಕ್ಕೊಮ್ಮೆ ಆನ್‌ ಅಂಡ್‌ ಆಫ್ ಮಾದರಿಯಲ್ಲಿ ನೀರು ಬಿಡುವುದು ಸೂಕ್ತ ಎಂದು ಅಧಿಕಾರಿಗಳು ಸಭೆಗೆ ಸಲಹೆ ನೀಡಿದರು. ಇದಕ್ಕೆ ರೈತರು ಹಾಗೂ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಂಪ್ಲಿ ಶಾಸಕ ಗಣೇಶ್‌, ಆನ್‌ ಅಂಡ್‌ ಆಫ್ ಪದ್ಧತಿಯಲ್ಲಿ ನೀರು ಬಿಡು ವುದು ಬೇಡ. ಅದರ ಬದಲು ನೀರಿಗಿಂತ ವಿಷ ಅಗ್ಗವಾಗಿ ಸಿಗುತ್ತದೆ. ಅದನ್ನೇ ಕೊಟ್ಟುಬಿಡಿ ಎಂದು ಕಿಡಿ ಕಾರಿದರು. ಕೊನೆಗೆ ಆನ್‌ ಅಂಡ್‌ ಆಫ್ ಪದ್ಧತಿಯ ಬದಲು, ಬಿಡುತ್ತಿರುವ ನೀರಿನ ಪ್ರಮಾಣ ತಗ್ಗಿಸಲು ಸಭೆ ಒಮ್ಮತಕ್ಕೆ ಬಂದಿತು. ಇದೇ ವೇಳೆ, ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದ್ದು, ಬಲದಂಡೆ ಮೇಲ್ಮಟ್ಟದ ಕಾಲುವೆ ಹೊರತುಪಡಿಸಿ ಉಳಿದೆಲ್ಲಾ ಕಾಲುವೆಗಳಿಗೂ ನ.30ರವರೆಗೆ ನಿತ್ಯ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್‌ ತಂಗಡಗಿ ಹೇಳಿದರು.

ರಾಯಚೂರು ತಾಲೂಕಿನ ಮಮದಾಪುರ ಸೇರಿ ಕೆಲ ಗ್ರಾಮಗಳಲ್ಲಿ ಭತ್ತ ಬೆಳೆಯನ್ನು ಸಂಪೂರ್ಣ ನಾಶ ಮಾಡಲಾಗಿದೆ. ಭತ್ತದ ಗದ್ದೆಗೆ ನೀರು ಬಂದಿಲ್ಲ. ಇನ್ನೂ ಕಾಯುತ್ತ ಕುಳಿತರೆ ರೈತರಿಗೆ ಮತ್ತಷ್ಟು ನಷ್ಟವಾಗಲಿದೆ. ಸರ್ಕಾರ ಕೂಡಲೇ ನಷ್ಟ ಪರಿಹಾರ ವಿತರಿಸಬೇಕು. ●ಬೂದಯ್ಯ ಸ್ವಾಮಿ ಇಂಗಳದಾಳ, ರೈತ ಸಂಘದ ಮುಖಂಡ

● ಸಿದ್ದಯ್ಯಸ್ವಾಮಿ ಕುಕನೂರು

 

Advertisement

Udayavani is now on Telegram. Click here to join our channel and stay updated with the latest news.

Next