Advertisement

ಅಪರಾಧ ಕೃತ್ಯ ಕೈಬಿಡಿ..ಸಜ್ಜನರ ಸಂಗ ಮಾಡಿ

12:24 PM Jan 04, 2018 | |

ಅಫಜಲಪುರ: ಭೀಮಾ ತೀರ ಎಂದರೆ ಕೇವಲ ಕೊಲೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಹೀಗೆ ದುಷ್ಕೃತ್ಯಗಳ ಮಾತೇ ಕೇಳಿ ಬರುತ್ತವೆ. ಇನ್ಮುಂದೆ ಈ ಭಾಗದವರು ಅಪರಾಧ ಕೃತ್ಯಗಳನ್ನು ಬಿಟ್ಟು ಸುಸಂಸ್ಕೃತ ಜೀವನ ನಡೆಸಬೇಕು. ಸಜ್ಜನರ ಸಂಗ ಮಾಡಿ, ಸಜ್ಜನರ ನಾಡನ್ನಾಗಿ ಮಾಡಬೇಕು ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಹೇಳಿದರು.

Advertisement

ತಾಲೂಕಿನ ಬಳೂರ್ಗಿ, ಶಿರವಾಳ, ಸೊನ್ನ ಮತ್ತು ವಿಜಯಪುರ ಜಿಲ್ಲೆಯ ದೇವಣಗಾಂವ ಗ್ರಾಮಗಳಿಗೆ ಭೇಟಿ ನೀಡಿ ವಿವಿಧ
ಪ್ರಕರಣಗಳಲ್ಲಿ ಭಾಗಿಯಾದವರಿಗೆ ಅಪರಾಧ ಕೃತ್ಯಗಳನ್ನು ಬಿಟ್ಟು ಉತ್ತಮ ಜೀವನ ನಡೆಸಿ ಎಂದು ಸಲಹೆ ನೀಡಿದರು.

ಭೀಮಾ ತೀರದ ಗ್ರಾಮಗಳು ಒಳ್ಳೆಯ ಕೆಲಸಗಳಿಗೆ ಹೆಸರು ಪಡೆಯುತ್ತಿಲ್ಲ. ಅಪರಾಧ ಚಟುವಟಿಕೆಗಳಿಂದ ಕುಖ್ಯಾತಿಯಾಗುತ್ತಿದೆ. ಹೀಗಾಗಿ ಎಲ್ಲರನ್ನೂ ಕೆಟ್ಟವರಂತೆ ಕಾಣಲಾಗುತ್ತಿದೆ. ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡವರು ಹಳೆಯದನ್ನು ಬಿಡಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಸಹೋದರತೆಯಿಂದ, ಸಹಬಾಳ್ವೆಯಿಂದ ಸ್ನೇಹಮಯ ಜೀವನ ನಡೆಸಬೇಕು ಎಂದು
ಸಲಹೆ ನೀಡಿದರು.

ಸೊನ್ನ, ದೇವಣಗಾಂವ ಗ್ರಾಮಸ್ಥರೊಂದಿಗೆ ಗ್ರಾಮದ ವ್ಯವಸಾಯ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಐಜಿಪಿ ಅವರು ಕೇಳಿದ ಪ್ರಶ್ನೆಗಳಿಗೆ ದೇವಣಗಾಂವ ರೈತ ಯಲ್ಲಪ್ಪ ಅಂಜುಟಗಿ ಉತ್ತರಿಸಿ ಐಜಿಪಿ ಅವರಿಂದ 500 ರೂ. ನಗದು ಬಹುಮಾನ ಪಡೆದರು.

ಹೆಚ್ಚುವರಿ ಎಸ್‌ಪಿಗಳಾದ ಜಯಪ್ರಕಾಶ, ಡಾ| ಶಿವುಕುಮಾರ ಗುಣಾರಿ, ಡಿವೈಎಸ್‌ ಪಿಗಳಾದ ಪಿ.ಕೆ. ಚೌಧರಿ, ರವೀಂದ್ರ ಶಿರೂರ, ಸಿಪಿಐಗಳಾದ ಜೆ.ಎಚ್‌. ಇನಾಮದಾರ, ಚಂದ್ರಕಾಂತ ನಂದರೆಡ್ಡಿ, ಪಿಎಸ್‌ಐಗಳಾದ ಸಂತೋಷ ರಾಠೊಡ, ಅನಿಲಕುಮಾರ ಇದ್ದರು.

Advertisement

ಅಪರಾಧ ಪ್ರಕರಣ ತಡೆಗೆ ಹದ್ದಿನ ಕಣ್ಣು
ಅಫಜಲಪುರ: ಭೀಮಾ ತೀರದಲ್ಲಿ ಹೆಚ್ಚಾಗಿ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಬೆಂಗಳೂರು, ಮೈಸೂರು ಭಾಗದಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಭೀಮಾ ತೀರದವರ ಹೆಸರು ಕೇಳಿ ಬರುತ್ತಿವೆ. ಹೀಗಾಗಿ ಅಪರಾಧ ಪ್ರಕರಣಗಳ ತಡೆಗೆ ಪೊಲೀಸರು ಹದ್ದಿನ ಕಣ್ಣಿಡುವಂತಾಗಿದೆ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಕೊಲೆ, ಸುಲಿಗೆಯಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರು ನಮ್ಮ ಮಾತಿನಿಂದ ಬದಲಾದರೆ ನಮಗೂ ಖುಷಿಯ ವಿಚಾರ. ಆದರೆ ಅವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದರೆ ನಾವು ನಮ್ಮ ದಾಟಿಯಲ್ಲಿ ವಿಚಾರಿಸಬೇಕಾಗುತ್ತದೆ. ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ಎಡವಿದೆ. ಈ ಭಾಗದವರು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಅರಿವಿಲ್ಲ. ಪೊಲೀಸರು ಕಾನೂನು ಪ್ರಕಾರ ಸರಿಯಾಗಿ ಕ್ರಮ ಕೈಗೊಂಡಿದ್ದರೆ ಸಾಕಷ್ಟು ಅಪರಾಧ ಪ್ರಕರಣಗಳು  ತಡೆಯಬಹುದಿತ್ತು ಎಂದರು.

ಅಕ್ರಮ ಪಿಸ್ತೂಲು, ಗುಂಡು ಸಾಗಾಟ, ಕೊಲೆ, ಸುಲಿಗೆ ಪ್ರಕರಣಗಳು ನಿಲ್ಲುತ್ತಿಲ್ಲ. ಹಳೆಯ ರೌಡಿಗಳು ತಮ್ಮ ಕೃತ್ಯಗಳನ್ನು ನಿಲ್ಲಿಸಿಲ್ಲ. ಇವರನ್ನು ಅನುಕರಿಸಿ ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಹೀಗಾಗಿ ಅಪರಾಧ ಕೃತ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಾಟ ತಡೆಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಸಂಪೂರ್ಣ ಅಪರಾಧ ಕೃತ್ಯಗಳು ನಿಲ್ಲುವ ತನಕ ಕಾರ್ಯಾಚರಣೆ ನಿಲ್ಲುವುದಿಲ್ಲ. ಒಟ್ಟಿನಲ್ಲಿ ಭೀಮಾ ತೀರ ಸಂಪೂರ್ಣ ಅಪರಾಧ ಮುಕ್ತವಾಗಬೇಕು. ಎಲ್ಲರೂ ಸಹೋದರತೆಯಿಂದ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಈ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲ ಪಾಲಕರು ವಿಚಾರಿಸಬೇಕೆಂದು ಹೇಳಿದರು.

ಅಕ್ರಮ ಮರಳು ಸಾಗಾಟ ತಡೆಯುವುದು ಕೇವಲ ಪೊಲೀಸ್‌ ಇಲಾಖೆಯ ಕೆಲಸವಲ್ಲ. ಅನೇಕ ಇಲಾಖೆಗಳು ಇದರಲ್ಲಿ ಬರುತ್ತವೆ. ಹೀಗಾಗಿ ಎಲ್ಲಾ ಇಲಾಖೆಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ಅಕ್ರಮ ಮರಳು ಸಾಗಾಟಕ್ಕೆ ತಡೆ ಹಾಕಬಹುದಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ಡಾ|ಶಿವುಕುಮಾರ ಗುಣಾರಿ, ಡಿವೈಎಸ್‌ಪಿ ಪಿ.ಕೆ. ಚೌಧರಿ, ಸಿಪಿಐ ಜೆ.ಎಚ್‌. ಇನಾಮದಾರ, ಪಿಎಸ್‌ಐ ಸಂತೋಷ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next