ಬೆಂಗಳೂರು: ಅಶ್ಲೀಲ ವೀಡಿಯೋಗಳಿದ್ದ ಪೆನ್‌ಡ್ರೈವ್‌ಗಳನ್ನು ಹಾದಿಬೀದಿಯಲ್ಲಿ ತೂರಾಡಿದರು ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಕರಣದ ಪಿತೂರಿಯಲ್ಲಿ ಶಾಮೀಲಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಹಿಳೆಯರ ಮಾನ ಅಪಹರಣ ನಾಲ್ಕು ಗೋಡೆ ಮಧ್ಯೆ ಇತ್ತು. ಅದನ್ನು ಪೆನ್‌ಡ್ರೈವ್ ಮೂಲಕ ಜಗತ್ತಿಗೆ ತೋರಿಸಿದವರು ಯಾರು? ಬೀದಿ ಬೀದಿಯಲ್ಲಿ ಮಹಿಳೆಯರ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್‌ಗಳನ್ನು ಚೆಲ್ಲಾಡಿದರು. ಇದರ ಹಿಂದಿನ ಸೂತ್ರಧಾರ ಡಿ.ಕೆ.ಶಿವಕುಮಾರ್ ಆಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಗುರುವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ, ಪ್ರಕರಣದ ತನಿಖೆಗೆ ಸರಕಾರ ನೇಮಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಇದರಲ್ಲಿ ಡಿ.ಕೆ. ಶಿವಕುಮಾರ್ ಪಿತೂರಿ ಇದೆ ಎಂದು ದೂರು ನೀಡಿತು. ಈ ಸಂಬಂಧ ಮನವಿ ಸಲ್ಲಿಸಿ, ನಂತರ ಅದರಲ್ಲಿನ ಎಲ್ಲ ಅಂಶಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿತು.
ನಿಯೋಗದಲ್ಲಿ ಎಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಅಲ್ಕೊಡ್ ಹನುಮಂತಪ್ಪ, ಆನಂದ್ ಅಸ್ನೋಟಿಕರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯಕ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತಿತರರು ಇದ್ದರು.