ವಾಷಿಂಗ್ಟನ್ : ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ 21 ಭಾರತೀಯರನ್ನು ಒಳಗೊಂಡಂತೆ 23 ಸಿಬ್ಬಂದಿಯನ್ನು ಹೊಂದಿರುವ ವ್ಯಾಪಾರಿ ನೌಕೆಯ ಮೇಲೆ ಶಂಕಿತ ಡ್ರೋನ್ ದಾಳಿ ನಡೆದಿದ್ದು ಇದೀಗ ಈ ದಾಳಿಯು ಇರಾನ್ ನಡೆಸಿರುವುದಾಗಿ ಯುಎಸ್ ರಕ್ಷಣಾ ಇಲಾಖೆ ಭಾನುವಾರ ತಿಳಿಸಿದೆ.
ಜಪಾನಿನ ಒಡೆತನದ ಹಡಗಿನಲ್ಲಿ ಕಚ್ಚಾ ತೈಲ ಸಾಗಿಸಲಾಗುತ್ತಿದ್ದು ಈ ವೇಳೆ ಗುಜರಾತ್‌ನ ಪೋರಬಂದರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ದಾಳಿ ನಡೆದಿದೆ ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೆಂಟಗನ್ ಹೇಳಿದೆ.
ನೌಕೆಯು ಡಿಸೆಂಬರ್ 19 ರಂದು ಸೌದಿ ಅರೇಬಿಯಾದ ಅಲ್ ಜುಬೈಲ್‌ನಿಂದ ಕಚ್ಚಾತೈಲವನ್ನು ಹೊತ್ತು ನವಮಂಗಳೂರು ಬಂದರಿಗೆ ಹೊರಟಿತ್ತು ಈ ನಡುವೆ ಡ್ರೋನ್ ದಾಳಿ ನಡೆದಿದೆ ಆದರೆ ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಲೈಬೀರಿಯನ್ ಧ್ವಜದ ವಾಣಿಜ್ಯ ಹಡಗು ಕೆಮ್ ಪ್ಲುಟೊಗೆ ಸಹಾಯ ಮಾಡಲು P8I ಕಡಲ ಗಸ್ತು ವಿಮಾನ ಮತ್ತು ಯುದ್ಧನೌಕೆಯನ್ನು ಕಳುಹಿಸಿದೆ ಎನ್ನಲಾಗಿದೆ. ಈ ಹಡಗು ಡಿಸೆಂಬರ್ 25 ರಂದು ಮಂಗಳೂರಿಗೆ ಬರುವ ನಿರೀಕ್ಷೆ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ ಬೆಂಕಿಯನ್ನು ನಂದಿಸಲಾಗಿದೆಯಾದರೂ ಹಡಗಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಈ ನಡುವೆ ಡ್ರೋನ್ ದಾಳಿ ನಡೆಸಿದ್ದು ಇರಾನ್ ಎಂದು ಅಮೆರಿಕ ಹೇಳಿಕೆ ನೀಡಿದೆ.
ಇದನ್ನೂ ಓದಿ: ಯುಪಿ,ಬಿಹಾರದ ಹಿಂದಿ ಭಾಷಿಕರು ತ.ನಾಡಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಾರೆ: DMK MP ವಿವಾದ