Advertisement

ಡ್ರೋನ್‌ ಮೂಲಕ ಅಡಿಕೆಗೆ ಔಷಧ: ಸುಳ್ಯದಲ್ಲಿ ಪ್ರಥಮ ಪ್ರಯೋಗ

12:14 AM Jan 08, 2023 | Team Udayavani |

ಸುಳ್ಯ: ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಸದ್ಯ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿ ಕೃಷಿ ತೋಟವೇ ನಲುಗಿದೆ. ಇದರ ನಿವಾರಣೆಗೆ ಔಷಧ ಸಿಂಪಡನೆ ಅನಿವಾರ್ಯ. ಇದೀಗ ಡ್ರೋನ್‌ ಮೂಲಕ ಸಿಂಪಡನೆ ತಂತ್ರಜ್ಞಾನ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಸುಳ್ಯದಲ್ಲಿ ನಡೆಯುತ್ತಿದೆ.

Advertisement

ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು ಅಡಿಕೆ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಔಷಧ ಸಿಂಪಡನೆಗೆ ಕಾರ್ಮಿಕರ ಕೊರತೆಯೂ ಎದುರಾಗುತ್ತಿರುವ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಕಳಂಜ ಗ್ರಾಮದ ಗಿರಿಕೃಪಾ ಫಾರ್ಮ್ನ ಸುದರ್ಶನ ಕೋಟೆ ಅವರು ಡ್ರೋನ್‌ ಪ್ರಾಯೋಗಿಕ ಬಳಕೆಗೆ ಮುಂದಾಗಿರುವ ಕೃಷಿಕ.

ಕಾರ್ಯಾಚರಣೆ
ಮಲ್ಟಿಪ್ಲೆಕ್ಸ್‌ ಎಂ ಸಂಸ್ಥೆಯವರ ಡ್ರೋನ್‌ ಬಳಕೆಯಾಗುತ್ತಿದ್ದು, 10 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಹೊಂದಿದೆ. ಔಷಧ ತುಂಬಿದ ಬಳಿಕ ಒಟ್ಟು ತೂಕ 25 ಕೆ.ಜಿ. ಇರಲಿದೆ. 10 ಲೀಟರ್‌ ಔಷಧವನ್ನು ಅರ್ಧ ಎಕ್ರೆ ತೋಟಕ್ಕೆ 15 ನಿಮಿಷಗಳಲ್ಲಿ ಸಿಂಪಡಿಸಬಹುದಾಗಿದೆ. ಡ್ರೋನ್‌ ಅಡಿಕೆ ಮರಗಳ ಮೇಲ್ಭಾಗಕ್ಕೆ ತೆರಳಿ ಎಲೆಗಳ ಮೇಲೆ ಔಷಧ ಸಿಂಪಡಿಸು ತ್ತದೆ. ಶೃಂಗೇರಿ ಮೊದಲಾದೆಡೆ ಈಗಾಗಲೇ ಔಷಧ ಸಿಂಪಡಣೆಗೆ ಡ್ರೋನ್‌ ಬಳಸಲಾಗಿದೆ.

ಸುಧಾರಣೆ ಅಗತ್ಯ
ಪ್ರಸ್ತುತ ಇರುವ ಡ್ರೋನ್‌ ಅಡಿಕೆ ಎಲೆಗೆ ಔಷಧ ಸಿಂಪಡಿಸಲಷ್ಟೇ ಸಹಕಾರಿ. ಸಿಂಗಾರ, ಗೊಂಚಲಿಗೆ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಸುಧಾರಣೆ ಕಂಡಲ್ಲಿ ಕೃಷಿಕರಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಡ್ರೋನ್‌ ಮೂಲಕ ಸಿಂಪಡಿಸಿರುವ ಔಷಧದ ಪರಿಣಾಮ ಇನ್ನಷ್ಟೇ ತಿಳಿದುಬರಬೇಕು. ಆದರೂ ಈ ವಿಧಾನ ಪ್ರಯೋಜನಕಾರಿ ಎನ್ನುತ್ತಾರೆ ಕೃಷಿಕರು.

ಪ್ರಯೋಜನಗಳು
ಡ್ರೋನ್‌ ಮೂಲಕ ಔಷಧ ಸಿಂಪಡನೆ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಆಗುತ್ತಿದೆ. ಆದ್ದರಿಂದ ಇದಕ್ಕೆ ಬೇಡಿಕೆ ವ್ಯಕ್ತವಾಗಿದ್ದು, ಸಂಸ್ಥೆಯವರು ಜಿಲ್ಲೆಗೆ 3 ಡ್ರೋನ್‌ ನೀಡಲಿದ್ದಾರೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಕಳಂಜ, ಅಮರಮುಟ್ನೂರು, ಅಮರಪಟ್ನೂರು, ಮರ್ಕಂಜ, ದೊಡ್ಡತೋಟ, ಪಂಜ, ಬಳ್ಪ, ಯೇನೆಕಲ್ಲು, ಸುಬ್ರಹ್ಮಣ್ಯ ಭಾಗದ ಕೃಷಿಕರೂ ಈಗಾಗಲೇ ಔಷಧ ಸಿಂಪಡಣೆಗೆ ಡ್ರೋನ್‌ ಕಾದಿರಿಸಿದ್ದಾರೆ.

Advertisement

ನಾನು ನಮ್ಮ 8 ಎಕ್ರೆ ಅಡಿಕೆ ತೋಟಕ್ಕೆ 180 ಲೀಟರ್‌ ಔಷಧವನ್ನು ಡ್ರೋನ್‌ ಮೂಲಕ ಸಿಂಪಡಿಸಿದ್ದೇನೆ. ಫ‌ಲಿತಾಂಶವನ್ನು ಈಗಲೇ ಹೇಳಲಾಗದು. ಆದರೂ ಇದು ಕೃಷಿಕರಿಗೆ ಪೂರಕವಾದ ಪ್ರಯೋಗ. ಅಡಿಕೆ ಸಿಂಗಾರ, ಗೊಂಚಲಿಗೆ ಔಷಧ ಸಿಂಪಡಿಸುವ ಡ್ರೋನ್‌ ಬಂದರೆ ಉತ್ತಮ.
– ಸುದರ್ಶನ ಕೋಟೆ, ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next