ಸಿಂಧನೂರು: ಕ್ರಿಮಿನಾಶಕ ಸಿಂಪರಣೆ ಮಾಡಲು ಪಂಪ್, ಕೂಲಿ ಆಳು ಬೇಕೆಂದು ಕಾಯಲೇ ಬೇಕಿಲ್ಲ. ಒಂದು ಡ್ರೋಣ್ ಬಳಕೆ ಮಾಡಿಕೊಂಡರೆ ಸಾಕು, ಐದೇ ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ಕ್ರಿಮಿನಾಶಕ ಸಿಂಪಡಣೆಯಾಗಿರುತ್ತದೆ! ತುಂಗಭದ್ರಾ ಅಚ್ಚುಕಟ್ಟು ಭಾಗದಲ್ಲಿ ಡ್ರೋಣ್ ಮೂಲಕ ಭತ್ತದ ಗದ್ದೆಗಳಿಗೆ ಕ್ರಿಮಿನಾಶಕ ಸಿಂಪರಣೆ ಮಾಡಿಸುವ ಹೊಸ ಪ್ರಯೋಗ ಯಶಸ್ಸಿನತ್ತ ಸಾಗಿದೆ. ಜಮೀನಿನ ಜಿಪಿಎಸ್ ಮಾಡುವ ಮೂಲಕ ಮೊಬೈಲ್ ಯಂತ್ರದೊಂದಿಗೆ ಡ್ರೋಣ್ ಗೆ ಚಾಲನೆ ನೀಡಲಾಗುತ್ತದೆ.
ಗಿಡಮರ ಹಾಗೂ ಯಾವುದೇ ವಿದ್ಯುತ್ ಕಂಬಗಳ ಅಡಚಣೆ ಇಲ್ಲವಾದರೆ, ಡ್ರೋಣ್ ಕೆಲಸ ಶರವೇಗದಲ್ಲಿ ಸಾಗುತ್ತದೆ. 11 ಲೀ. ಟ್ಯಾಂಕರ್ ಒಳಗೊಂಡ ಈ ಡ್ರೋಣ್ ಪ್ರತಿ ಎಕರೆಗೊಮ್ಮೆ ಮಾತ್ರ ಭತ್ತದ ಗದ್ದೆಯ ಬದುವಿಗೆ ತರಿಸಿ, ಕ್ರಿಮಿನಾಶಕ ತುಂಬಿಸಬೇಕಾಗುತ್ತದೆ.
ಗನ್ ಪಂಪ್ ಹಾಗೂ ಇತರ ಯಂತ್ರಗಳನ್ನು ಬಳಸಿಕೊಂಡು ಕ್ರಿಮಿನಾಶಕ್ಕೆ ಸಿಂಪಡಣೆ ಮಾಡುವುದಕ್ಕೂ ಡ್ರೋಣ್ ಬಳಸುವುದಕ್ಕೂ ವ್ಯತ್ಯಾಸವಿದೆ. 15 ಎಕರೆ ಜಮೀನಿಗೆ ಬಳಕೆಯಾಗುವ ಕ್ರಿಮಿನಾಶಕವನ್ನು 10 ಎಕರೆಗೆ ಸೀಮಿತಗೊಳ್ಳುವಂತೆ ಡ್ರೋಣ್ ಸಿಂಪಡಿಸುತ್ತದೆ. ಪ್ರತಿ ಎಕರೆಗೆ 5ರಿಂದ 6 ನಿಮಿಷದಲ್ಲೇ ಮುಗಿಯುವುದರಿಂದ ಯಾವುದೇ ನಷ್ಟವಿಲ್ಲ ಎನ್ನುತ್ತಾರೆ ರೈತರು. ಪ್ರತಿ ಎಕರೆಗೆ ಡ್ರೋಣ್ ಬಳಸಲು 550 ರೂ. ಬಾಡಿಗೆಯನ್ನು ರೈತರು ಭರಿಸಬೇಕಿದೆ.
ದಿನಕ್ಕೆ 30 ಎಕರೆಗೂ ಹೆಚ್ಚು ಸಿಂಪರಣೆ:
ಮುಂಜಾನೆಯಿಂದ ಸಂಜೆ ವೇಳೆಗೆ ಗನ್ ಪಂಪ್ ಬಳಸಿ ಈ ಮೊದಲು ಕ್ರಿಮಿನಾಶಕ ಸಿಂಪರಣೆ ಮಾಡಿದರೂ 12 ಎಕರೆ ಮೀರುವುದು ಕಷ್ಟವಾಗಿತ್ತು. ಇದೀಗ ಡ್ರೋನ್ ನ ಮೂಲಕ ಒಂದೇ ದಿನದಲ್ಲಿ 30 ಎಕರೆಗೂ ಹೆಚ್ಚು ಜಮೀನಿಗೆ ಕ್ರಿಮಿನಾಶಕ ಸಿಂಪರಣೆ ಮಾಡುವ ಅವಕಾಶ ಒದಗಿದೆ. ಕ್ರಿಮಿನಾಶಕ ಗಾಳಿಯಲ್ಲಿ ಹಾರುವ ಬದಲು ಡ್ರೋಣ್ ಬಳಸಿದಾಗ ನೇರವಾಗಿ ಗದ್ದೆಯೊಳಕ್ಕೆ ಹೋಗುತ್ತದೆಂಬ ನಂಬಿಕೆಯೂ ಕೂಡ ಈ ಪದ್ಧತಿಯತ್ತ ರೈತರು ಆಕರ್ಷಿತಗೊಳ್ಳಲು
ಕಾರಣವಾಗಿದೆ.
ರೈತರಲ್ಲಿ ಹೆಚ್ಚಿದ ಕುತೂಹಲ: ಪ್ರತಿ ಗನ್ ಪಂಪ್ ಹಾಗೂ ಮೋಟರ್ ಚಾಲಿತ ಯಂತ್ರ ಬಳಸಿ ಭತ್ತದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ರೈತರಿಗೆ ಡ್ರೋಣ್ ಬಳಕೆ ಕುತೂಹಲದ ಕೇಂದ್ರವಾಗಿದೆ. ಪ್ರತಿ 15 ಎಕರೆ ಲೆಕ್ಕದಲ್ಲಿ ಬಳಕೆಯಾಗುವ ಕ್ರಿಮಿನಾಶಕವನ್ನು 5 ಎಕರೆಯಷ್ಟು ಕಡಿಮೆ ಮಾಡುತ್ತದೆಂಬ ಮಾಹಿತಿ ಕುತೂಹಲಕ್ಕೆ ಕಾರಣವಾಗಿದೆ. ಸಹಜವಾಗಿಯೇ ರೈತರು ಡ್ರೋಣ್‌ನತ್ತ ಒಲವು ತೋರುತ್ತಿದ್ದು, ಶ್ರೀಪುರಂ ಜಂಕ್ಷನ್‌ನಲ್ಲಿ ಈಗಾಗಲೇ ಭತ್ತದ ಗದ್ದೆಗೆ ಈ
ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಮಾಹಿತಿ ಪಡೆದ ರೈತರು ಡ್ರೋಣ್ ಬಾಡಿಗೆ ಪಡೆಯಲು ಮುಗಿಬೀಳಲಾರಂಭಿಸಿದ್ದಾರೆ.
ತಮಿಳುನಾಡಿನಲ್ಲಿ ಡ್ರೋಣ್ ಬಳಸುವ ಮಾಹಿತಿ ಗೊತ್ತಿತ್ತು. ಮೆಣಸಿನಕಾಯಿಗೂ ಬಳ್ಳಾರಿ ಜಿಲ್ಲೆಯಲ್ಲಿ ಈ ಯಂತ್ರ ಬಳಸಿದ್ದನ್ನು ನೋಡಿದ ಮೇಲೆ ಅವರನ್ನು ಸಂಪರ್ಕಿಸಿ, ಭತ್ತದ ಗದ್ದೆಗೂ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ.
ಕೆ.ಸತ್ಯನಾರಾಯಣ ಕರಟೂರಿ, ರೈತ, ಶ್ರೀಪುರಂ ಜಂಕ್ಷನ್, ಸಿಂಧನೂರು ತಾಲೂಕು
ಯಮನಪ್ಪ ಪವಾರ