Advertisement

ಅಕ್ರಮ ತಡೆಗೆ ಡ್ರೋಣ್‌ ಬಳಕೆ

09:35 PM Apr 09, 2021 | Team Udayavani |

ಕಾರವಾರ : ಪ್ರಕೃತಿ ವಿಕೋಪ, ನೆರೆ ಹಾವಳಿಯಂತಹ ವಿಪತ್ತು ನಿರ್ವಹಣೆ ಮತ್ತು ಬೃಹತ್‌ ಸಭೆ, ಸಮಾರಂಭಗಳ ಸಂದರ್ಭದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಡ್ರೋಣ್‌ ಕ್ಯಾಮೆರಾ ಬಳಕೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್‌ ದೇವರಾಜ ಹೇಳಿದರು.

Advertisement

ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಡ್ರೋಣ್‌ ಕ್ಯಾಮರಾ ಬಳಕೆ ಹಾಗೂ ಕಾರ್ಯ ವೈಖರಿಯ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಹಾಗೂ ಸಮುದ್ರ ಪ್ರದೇಶವಿದ್ದು, ನೆರೆ ಹಾವಳಿ, ಬೆಂಕಿ ಅವಘಡ, ಕಡಲ ಕೊರೆತದಂತಹ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅದಲ್ಲದೇ ಜಿಲ್ಲೆಯಲ್ಲಿ ನಡೆಯುವ ಬೃಹತ್‌ ಸಭೆ, ಸಮಾರಂಭಗಳಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ನಡೆಯುವುದು ಹೆಚ್ಚಾಗಿದೆ. ಹೀಗಾಗಿ ಈ ಎಲ್ಲ ಸಂದರ್ಭಗಳಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಡ್ರೋಣ್‌ ಕ್ಯಾಮರಾ ಬಳಕೆ ಅತ್ಯವಶ್ಯಕವಾಗಿದೆ.

ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಬಳಸಲಾಗುವ ಈ ಡ್ರೋಣ್‌ ಕ್ಯಾಮೆರಾಗಳು ಸಮುದ್ರ, ಪ್ರವಾಹ ಹಾಗೂ ಕಾಡ್ಗಿಚ್ಚಿನಂತಹ ಪ್ರಕೃತಿ ವಿಪತ್ತುಗಳಲ್ಲಿ ಸಿಲುಕಿಕೊಂಡವರನ್ನು, ಪಕ್ಷಿನೋಟದ ಮೂಲಕ ಗುರುತಿಸಿ ರಕ್ಷಿಸಲು ಮತ್ತು ಜನದಟ್ಟಣೆ ಆಗುವ ಸಭೆ, ಸಮಾರಂಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಲಿವೆ. ಹೀಗಾಗಿ ವಿಪತ್ತು ನಿರ್ವಹಣಾ ನಿಧಿ ಯಿಂದ 12 ಲಕ್ಷ ವೆಚ್ಚದಲ್ಲಿ ಈ ಡ್ರೋನ್‌ ಕ್ಯಾಮರಾ ಬಳಕೆ ಆರಂಭಿಸಲಾಗಿದ್ದು, ಈ ಕ್ಯಾಮರಾ 200 ಮೀಟರ್‌ ಎತ್ತರ ಹಾಗೂ 2 ಕಿಮೀ ದೂರದವರೆಗೆ ಹಾರಾಟ ನಡೆಸಿ ವಿವಿಧ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ ಎಂದರು. ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆಯಾಗಿರುವ ಕಾರಣ ಎರಡು ಡ್ರೋನ್‌ ಕ್ಯಾಮರಾ ಬಳಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಭಟ್ಕಳ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕುಗಳನ್ನು ಒಂದು ವಿಭಾಗವನ್ನಾಗಿ ಮತ್ತು ಅಂಕೋಲಾ, ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳನ್ನು ಮತ್ತೂಂದು ವಿಭಾಗವನ್ನಾಗಿ ಮಾಡಿಕೊಂಡಿದ್ದು, ಈ ಎರಡು ವಿಭಾಗಗಳಲ್ಲಿ ಡ್ರೋನ್‌ ಕ್ಯಾಮರಾ ಕಾರ್ಯಾಚರಣೆಗೆ ಅನುವು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಡ್ರೋನ್‌ ಕ್ಯಾಮರಾ ಪ್ರಾಯೋಗಿಕ ಪ್ರಾತ್ಯಕ್ಷಿಕೆ ವೀಕ್ಷಿಸಿ ಬಳಿಕ, ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಎಂ.ಪಿ. ಮಾತನಾಡಿ, ಪ್ರಕೃತಿ ವಿಕೋಪದ ವಿಪತ್ತು ನಿರ್ವಹಣಾ ಅನುದಾನದಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಒಳಗೊಂಡ ಪೊಲೀಸ್‌ ತಂಡವು ಈ ಡ್ರೋನ್‌ ಕ್ಯಾಮರಾದ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಈ ಕ್ರಮವು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಂತಹ ಕಾರ್ಯಾಚರಣೆ ಹಾಗೂ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ತರ ಹೆಜ್ಜೆಯಾಗಿದೆ. ಇದರಿಂದಾಗಿ ಜಿಲ್ಲಾಡಳಿತದ ಶಕ್ತಿ ಹೆಚ್ಚಲು ಸಾಧ್ಯವಾಗುತ್ತಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಕಾರ್ಯ ಅಭಿನಂದನಾರ್ಹ ಎಂದರು.

Advertisement

ಹೆಚ್ಚುವರಿ ಎಸ್ಪಿ ಎಸ್‌. ಬದರೀನಾಥ, ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಡಿಎಸ್‌ಪಿ ಶಿವಾನಂದ ಚಲವಾದಿ, ಕಾರವಾರ ಸಿಪಿಐ ಸಂತೋಷ ಶೆಟ್ಟಿ ಹಾಗೂ ಇತರ ಪೊಲೀಸ್‌ ಸಿಬ್ಬಂದಿ ಉಪಸ್ಥಿರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next