Advertisement

ಕೆರೆ ಶುದ್ಧ ಮಾಡಲಿದೆ ಡ್ರೋನ್‌!

06:31 AM Feb 25, 2019 | |

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಶುದ್ಧೀಕರಣವನ್ನು ಈಗ ಡ್ರೋನ್‌ ಮೂಲಕ ಮಾಡಬಹುದು! ಇಂತಹದ್ದೊಂದು ವಿನೂತನ ಮಾದರಿಯ ಡ್ರೋನ್‌ ಅನ್ನು ನಗರದ ಸರ್‌ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ನೀರಿನಲ್ಲಿ ಮೀನಿನಂತೆ ಸರಾಗವಾಗಿ ಈಜಬಲ್ಲದು.

Advertisement

ನದಿ ಅಥವಾ ಕೆರೆಗಳ ಆಳದಲ್ಲಿ ಇಳಿದು, ಅಲ್ಲಿ ತುಂಬಿರುವ ಹೂಳಿನ ಪ್ರಮಾಣ, ನೀರಿನಲ್ಲಿ ಸೇರಿಕೊಂಡಿರುವ ರಾಸಾಯನಿಕ ವಸ್ತುಗಳು, ಗುಣಮಟ್ಟ ಸೇರಿದಂತೆ ಸಮಗ್ರ ಚಿತ್ರಣವನ್ನು ನೀಡಲಿದೆ. ಆ ಮಾಹಿತಿಯನ್ನು ಆಧರಿಸಿ ಶುದ್ಧೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಇಂತಹದ್ದೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ. 

“ಕೇವಲ ಕೆರೆಗಳ ಚಿತ್ರಣವಲ್ಲ; ಮೀನು ಸಾಕಾಣಿಕೆ, ನೆರೆಯಲ್ಲಿ ಕೊಚ್ಚಿಹೋದವರ ಪತ್ತೆಗೂ ಈ ಡ್ರೋನ್‌ ಬಳಸಬಹುದು. ಈಗಾಗಲೇ ಚೆನ್ನೈನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಸಿಯನ್‌ ಟೆಕ್ನಾಲಜಿಯೊಂದಿಗೆ ಮಾತುಕತೆ ನಡೆಸಿದ್ದು, ಚರ್ಚೆ ಅಂತಿಮ ಹಂತದಲ್ಲಿದೆ. ಅದೇ ರೀತಿ, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಗಂಗಾ ಶುದ್ಧೀಕರಣ’ಕ್ಕೂ ಇದನ್ನು ಬಳಸಬಹುದು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲು ಚಿಂತನೆ ನಡೆದಿದೆ’ ಎಂದು ಇದನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲೊಬ್ಬರಾದ ಶಿವ ವರುಣ್‌ ಸಿಂಗ್‌ ರಾಜಪೂತ್‌ ತಿಳಿಸಿದರು. 

ಕೆರೆಗಳ ಶುದ್ಧೀಕರಣಕ್ಕೆ ಬಳಸುವಾಗ ನಿರ್ದಿಷ್ಟವಾದ ಸೆನ್ಸರ್‌ಗಳನ್ನು ಅಳವಡಿಸಬೇಕಾಗುತ್ತದೆ. ಡ್ರೋನ್‌ ತನ್ನ ಕ್ಯಾಮೆರಾ ಮೂಲಕ ನೀರಿನಲ್ಲಿರುವ ಚಿತ್ರಣವನ್ನು ಸೆರೆಹಿಡಿದು ಸೆನ್ಸರ್‌ಗಳಿಗೆ ರವಾನೆ ಮಾಡುತ್ತದೆ. ಅದು ವಿಶ್ಲೇಷಣೆ ಮಾಡಿ, ಮಾಹಿತಿ ನೀಡುತ್ತದೆ. ನೀರಿನಲ್ಲಿ ಪಾಚಿಗಟ್ಟಿದ್ದರೆ ಅಥವಾ ಬಂಡೆಗಳು ಅಡ್ಡಿಯಾಗಿದ್ದರೆ, ಅಟೋಮೆಟಿಕ್‌ ಆಗಿ ಡ್ರೋನ್‌ ಪರ್ಯಾಯ ಮಾರ್ಗವನ್ನು ಹುಡುಕಿ, ಆ ಮೂಲಕ ನುಸುಳುತ್ತದೆ ಎಂದು ಈ ತಂತ್ರಜ್ಞಾನಕ್ಕೆ ಮಾರ್ಗದರ್ಶಕರಾದ ಮೆಹಬೂಬ್‌ ಬಾಷಾ ದೊಡ್ಡಮನಿ “ಉದಯವಾಣಿ’ಗೆ ತಿಳಿಸಿದರು. 

ಬೆಳ್ಳಂದೂರು, ವರ್ತೂರು, ಹೆಬ್ಟಾಳದಂತಹ ಕೆರೆಗಳಿಗೆ ಇದನ್ನು ಖಂಡಿತ ಬಳಸಬಹುದು. ಆದರೆ, ಇದನ್ನು ಸಂಸ್ಥೆಯಿಂದ ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಇದಕ್ಕೆ ಪೂರಕವಾದ ಸೆನ್ಸರ್‌ಗಳು, ಕ್ಯಾಮೆರಾಗಳನ್ನು ಅಳವಡಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ ಅವರು, ಗಂಗಾ ಶುದ್ಧೀಕರಣ ಯೋಜನೆಗೆ ಇದನ್ನು ಬಳಸಬಹುದು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಚಿಂತನೆ ಇದೆ ಎಂದರು. 

Advertisement

4-5 ತಾಸು ಕಾರ್ಯಾಚರಣೆ ಸಾಮರ್ಥ್ಯ: 500-800 ಗ್ರಾಂ ತೂಕ ಹೊಂದಿದ್ದು, 2.6 ಕೆಜಿ ತೂಕವನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. ನೀರಿನಲ್ಲಿ 4ರಿಂದ 5 ತಾಸು ಕಾರ್ಯಾಚರಣೆ ಮಾಡಬಲ್ಲದು. ನೀರಿನ ಮೇಲೆ ಕೂಡ ಇದು ಹರಿದಾಡಬಲ್ಲದು. ಆಗಸದಲ್ಲಿ 20 ನಿಮಿಷ ಹಾರಾಟ ಮಾಡುವ ಸಾಮರ್ಥ್ಯ ಹೊಂದಿದೆ. ಮೀನು ಸಾಕಾಣಿಕೆಗೂ ಇದು ಹೇಳಿಮಾಡಿಸಿದ್ದಾಗಿದೆ. ಪ್ರತಿ ಸಲ ಮೀನುಗಾರರು ಕೇಜ್‌ನಲ್ಲಿ ಇಳಿದು ಪರೀಕ್ಷಿಸುವ ಅಗತ್ಯವಿಲ್ಲ.

ಡ್ರೋನ್‌ ಅನ್ನು ಕಳುಹಿಸಿ ಮೀನುಗಳ ಸ್ಥಿತಿಗತಿಯನ್ನು ತಿಳಿಯಬಹುದು ಎಂದು  ಮೆಹಬೂಬ ಬಾಷಾ ದೊಡ್ಡಮನಿ ಮಾಹಿತಿ ನೀಡಿದರು. ಅಂದಹಾಗೆ ಈ ವಿನೂತನ ತಂತ್ರಜ್ಞಾನಕ್ಕಾಗಿ 12ನೇ ವೈಮಾನಿಕ ಪ್ರದರ್ಶನದಲ್ಲಿ “ಸ್ಟುಡೆಂಟ್‌ ಪೆವಿಲಿಯನ್‌’ ವಿಭಾಗದಲ್ಲಿ ಮೊದಲ ಬಹುಮಾನಕ್ಕೆ ಪಾತ್ರವಾಗಿದೆ. ಬಹುಮಾನವು 2 ಲಕ್ಷ ಮೌಲ್ಯದ್ದಾಗಿದ್ದು, ಶಿವ ವರುಣ್‌ ಸಿಂಗ್‌ ರಾಜಪೂತ್‌, ಅಮನ್‌ ಸಿನ್ಹ ಹಾಗೂ ರೇವಂತ್‌ ಎಂಬ ವಿದ್ಯಾರ್ಥಿಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next