ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, ನಗರದಲ್ಲಿ ನಿಷೇಧಾಜ್ಞೆ ಹಾಗೂ ಲಾಕ್ ಡೌನ್ ಇದ್ದರೂ ಜನರು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವ ಹಿನ್ನೆಲೆ ಅಂತಹವರ ಮೇಲೆ ನಗರ ಪೊಲೀಸರು ಡ್ರೋನ್ ಮೂಲಕ ಹದ್ದಿನ ಕಣ್ಣಿಟ್ಟಿದ್ದಾರೆ.
ನಗರದಲ್ಲಿ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡುತ್ತಾರೆ, ಯಾರೂ ಗುಂಪು ಗುಂಪಾಗಿ ಸೇರುತ್ತಾರೋ ಅಂತಹವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ಸಲುವಾಗಿ ಪೊಲೀಸರು ಎರಡು ಡ್ರೋಣ್ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಈಗಾಗಲೇ ಎರಡು ಡ್ರೋನ್ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದು, ಡ್ರೋನ್‌ನಲ್ಲಿ ಸೆರೆಯಾದ ದೃಶ್ಯ ಆಧಾರಿಸಿ ಗುರವಾರ ಇಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ 19 ವೈರಾಣು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನರು ಬೀದಿಗಿಳಿದು ಓಡಾಡುತ್ತಿರುವುದು ಕಮ್ಮಿಯಾಗಿಲ್ಲ. ನಗರದಲ್ಲಿ ನಿಷೇದಾಜ್ಞೆ ಜಾರಿಯಿದ್ದರೂ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಲು ಪೊಲೀಸರು ಡ್ರೋನ್ ಮೊರೆ ಹೋಗಿದ್ದಾರೆ. ಡ್ರೋನ್ ಮೂಲಕ ಜನರಲ್ಲಿ ಜಾಗೃತಿ: ನಗರದ ಎಲ್ಲಾ ಬಡಾವಣೆಗಳ ಮೇಲೆ ಹಾರಾಡುವ ಡ್ರೋನ್‌ಗಳಲ್ಲಿ ಸ್ಪೀಕರ್ ಅಳವಡಿಸಿದ್ದು, ಅದರ ಮೂಲಕ ಪೊಲೀಸರು ಜನರು ಎಲ್ಲಿಯೂ ಹೋಗದೆ ಮನೆಯಲ್ಲಿ ಇರುವಂತೆ ಎಚ್ಚರಿಕೆ ನೀಡಲಾಗುತ್ತದೆ. ಜೊತೆಗೆ ಮುಂಜಾಗ್ರತೆ ವಹಿಸುವಂತೆಯೂ ಜಾಗೃತಿ ನೀಡಲಾಗುತ್ತಿದೆ.
ನಗರದ ಕೆಲವು ಬಡಾವಣೆಗಳಲ್ಲಿ ಜನರು ನಿಯಮಗಳನ್ನು ಪಾಲಿಸದೆ, ಅನಗತ್ಯವಾಗಿ ಬೀದಿಗಳಲ್ಲಿ ಓಡಾಡುವುದು ಮತ್ತು ಗುಂಪು ಸೇರುವುದು ಮಾಡುತ್ತಿದ್ದಾರೆ. ಈ ಹಿನ್ನೆಲೆ ಡ್ರೋನ್ ಮೂಲಕ ಅಂತಹವರನ್ನು ಪತ್ತೆ ಹಚ್ಚಿ, ದೂರು ದಾಖಲಾಗಿಸಿವುದು. ಈಗಾಗಲೇ ಇಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಡಾ. ಪ್ರಕಾಶ್ ಗೌಡ ತಿಳಿಸಿದರು.