ಇಸ್ಲಾಮಾಬಾದ್: ಜಮ್ಮುವಿನ ವಾಯುಪಡೆ ನೆಲೆ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಬೆನ್ನಲ್ಲೇ ಇದೀಗ ಭಾನುವಾರ ರಾತ್ರಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಳಗೆ ಡ್ರೋನ್ ಪತ್ತೆಯಾಗಿದ್ದು, ಇದೊಂದು ಪ್ರಮುಖ ಭದ್ರತಾ ವೈಫಲ್ಯವಾಗಿದೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಖಾಸಗಿ ಸುದ್ದಿ ವಾಹಿನಿ ವಿರುದ್ಧ ಸಮರ : ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ನಟ ಅನಿಶ್
ಭದ್ರತಾ ಉಲ್ಲಂಘನೆ ಘಟನೆಗೆ ಸಂಬಂಧಿಸಿದಂತೆ ಭಾರತ ಶುಕ್ರವಾರ ಪಾಕಿಸ್ತಾನದ ಜೊತೆ ಚರ್ಚೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ನಸುಕಿನ ವೇಳೆ ಜಮ್ಮುವಿನ ವಾಯುನೆಲೆಯ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ ಘಟನೆ ನಂತರ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಳಗೆ ಡ್ರೋನ್ ವೀಕ್ಷಣೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್ ಮೂಲಕ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಐಎಎಫ್ ಯೋಧರು ಗಾಯಗೊಂಡಿದ್ದರು. ಈ ಘಟನೆ ನಂತರ ಜಮ್ಮುವಿನ ಪ್ರಮುಖ ಸೇನಾ ನೆಲೆಗಳ ಮೇಲೆ ಹಲವಾರು ಡ್ರೋನ್ ಗಳು ಹಾರಾಟ ನಡೆಸಿದ್ದವು.
ಪಾಕಿಸ್ತಾನದ ಮೂಲದ ಉಗ್ರರು ಭಾರತ ದೇಶಗಳನ್ನು ಗುರಿಯಾಗಿರಿಸಿಕೊಂಡು ಡ್ರೋನ್ ಮೂಲಕ ದಾಳಿ ನಡೆಸುವ ಸಂಚು ರೂಪಿಸುತ್ತಿದ್ದು, ಈ ಬಗ್ಗೆ ವಿಶ್ವಸಂಸ್ಥೆಯಲ್ಲಿಯೂ ವಿಷಯ ಪ್ರಸ್ತಾಪಿಸಿರುವುದಾಗಿ ಭಾರತ ಹೇಳಿದೆ. ಅಲ್ಲದೇ ಈ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಭಾರತ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.