Advertisement

ಬೆಂಗಳೂರಿನ ಟೆಕ್‌ ಸಮಿಟ್‌ನಲ್ಲಿ ಡ್ರೋಣ್‌ ರೇಸ್‌

06:00 AM Nov 21, 2018 | Team Udayavani |

ಬೆಂಗಳೂರು: ಕಾರು ರೇಸ್‌, ಬೈಕ್‌ ರೇಸ್‌ನಂತೆಯೇ ಈಗ ಬೆಂಗಳೂರಿನಲ್ಲಿ ಡ್ರೋಣ್‌ಗಳ ರೇಸ್‌ ನಡೆಯಲಿದೆ. ಅರಮನೆ ಮೈದಾನದಲ್ಲಿ ನ.29ರಂದು ಮಿಂಚುಹುಳುಗಳಂತೆ ಸುಮಾರು 30 ಡ್ರೋಣ್‌ಗಳು ಸ್ಪರ್ಧೆ ನಡೆಸಲಿವೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಡ್ರೋಣ್‌ ರೇಸ್‌ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಡ್ರೋಣ್‌ ತಯಾರಿಕಾ ಕಂಪೆನಿಗಳು ಇದರಲ್ಲಿ ಭಾಗವಹಿಸಲಿವೆ.

Advertisement

ನ.29ರಿಂದ ಡಿ.1ರವರೆಗೆ “ಬೆಂಗಳೂರು ಟೆಕ್‌ ಸಮಿಟ್‌’ ಅಂಗವಾಗಿ ಈ ರೇಸ್‌ ನಡೆಯುತ್ತಿದೆ. ಮೊದಲ ದಿನ ಪ್ರಾಯೋಗಿಕವಾಗಿ ಡ್ರೋಣ್‌ಗಳು ಹಾರಾಟ ನಡೆಸಲಿದ್ದು, ಇದರಲ್ಲಿ 4 ಡ್ರೋಣ್‌ಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯುತ್ತವೆ. 30ರಂದು ಅಂತಿಮ ಸುತ್ತಿನ ರೇಸ್‌ ಇರುತ್ತದೆ. ಯುವಕರನ್ನು ಆಕರ್ಷಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ನಿರ್ದೇಶಕಿ ಆರ್‌. ವಿನೋತ್‌ ಪ್ರಿಯಾ ಮಾಹಿತಿ ನೀಡಿದರು. 

ಗಂಟೆಗೆ 120 ಕಿ.ಮೀ. ವೇಗದಲ್ಲಿ ಹಾರಾಟ: ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಟಿ-ಬಿಟಿ ಇಲಾಖೆ ಸಲಹೆಗಾರ ರಾಜಕುಮಾರ್‌ ಶ್ರೀವಾಸ್ತವ, ರೇಸ್‌ ನಲ್ಲಿ ಭಾಗವಹಿಸುವ ನ್ಯಾನೋ ಡ್ರೋಣ್‌ಗಳು 250 ಗ್ರಾಂಕ್ಕಿಂತ ಕಡಿಮೆ ತೂಕ ಇರಲಿವೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲವು. ಪ್ರತಿ ಡ್ರೋಣ್‌ಗೆ 2ರಿಂದ 3 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ.
ಅಷ್ಟರಲ್ಲಿ ಅವುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ. ಸಾಮಾನ್ಯವಾಗಿ ಒಳಾಂಗಣದಲ್ಲಿ ಡ್ರೋಣ್‌ ರೇಸ್‌ ನಡೆಯತ್ತದೆ. ಹೊರಾಂಗಣದಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲು. ಹಾಗಾಗಿ, ತುಂಬಾ ಅದ್ಭುತ ಅನುಭವ ನೀಡಲಿದೆ. ದೂರದರ್ಶನದಲ್ಲಿ ಇದರ ನೇರ ಪ್ರಸಾರ ಕೂಡ ಇರಲಿದೆ ಎಂದು ತಿಳಿಸಿದರು. ಸ್ವಿಡ್ಜರ್‌ಲ್ಯಾಂಡ್‌ನ‌ ನಾಲ್ಕು ಕಂಪೆನಿಗಳು, ಇಸ್ರೇಲ್‌
ಮತ್ತು ಭಾರತದ ತಲಾ ಒಂದು ಕಂಪೆನಿಗಳು ಇದರಲ್ಲಿ ಭಾಗವಹಿಸಲಿವೆ. ಡ್ರೋಣ್‌ ತಯಾರಿಕೆಯಲ್ಲಿ ಜರ್ಮನಿ, ಫ್ರಾನ್ಸ್‌, ಅಮೆರಿಕ, ಚೀನಾ ಮತ್ತಿತರ ದೇಶಗಳು ಕೂಡ ಮುಂಚೂಣಿಯಲ್ಲಿವೆ. ವಿಜೇತರಿಗೆ ಬಹುಮಾನ ಕೂಡ ಇರಲಿದೆ. ಡ್ರೋಣ್‌ಗಳಲ್ಲಿ ಹತ್ತಾರು ಪ್ರಕಾರಗಳಿದ್ದು, ಅವುಗಳ ತೂಕ 250 ಗ್ರಾಂ.ಗಿಂತ ಕಡಿಮೆ ಹಾಗೂ 150 ಕೆಜಿಗಿಂತ ಅಧಿಕವೂ ಆಗಿರುತ್ತವೆ. ವಿವಿಧ ಉದ್ದೇಶಗಳಿಗೆ
ಇವುಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು. 

ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಟೆಕ್‌ ಸಮಿಟ್‌ನಲ್ಲಿ ನೀರು ನಿರ್ವಹಣೆ, ಆರೋಗ್ಯ ಸೇರಿ ಹಲವು ಸವಾಲುಗಳಿಗೆ ತಂತ್ರಜ್ಞಾನಗಳ ಮೂಲಕ ಪರಿಹಾರ ಹುಡುಕುವ ಪ್ರಯತ್ನ ಇದಾಗಿದೆ. ಜತೆಗೆ ನಮ್ಮಲ್ಲಿನ ತಂತ್ರಜ್ಞಾನಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮೇಳವೂ ಆಗಿದೆ ಎಂದರು. ಇದೇ ವೇಳೆ ಕೇಂದ್ರದಿಂದ ಡ್ರೋಣ್‌ ಕಾರ್ಯಾಚರಣೆಗೆ 
ಸಂಬಂಧಿಸಿದಂತೆ ನೂತನ ನೀತಿ ಬಿಡುಗಡೆ ಆಗಲಿದೆ. ಅದರಲ್ಲಿ ಡ್ರೋಣ್‌ ಬಳಕೆ ಕುರಿತು ಮಾರ್ಗಸೂಚಿಗಳನ್ನು ಸರ್ಕಾರ ನೀಡಲಿದೆ. ಈ ಸ್ಪರ್ಧೆ ಅದರ ದ್ಯೋತಕವಾಗಿ ನಡೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next