ಸೊರಬ: ಗಾಂಜಾ ಬೆಳೆ ಪತ್ತೆಹಚ್ಚಲು ಡ್ರೋಣ್ ತಂತ್ರಜ್ಞಾನ ಬಳಕೆಗೆ ಮುಂದಾಗಿರುವ ಅಬಕಾರಿ ಇಲಾಖೆಗೆ ಮೊದಲ ಯಶಸ್ಸು ದೊರಕಿದೆ. ಡ್ರೋಣ್ ಕಾರ್ಯಾಚರಣೆ ನಡೆಸಿದ ಮೊದಲ ದಿನವೇ ಸೊರಬ ತಾಲೂಕಿನಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಪತ್ತೆಯಾಗಿದೆ.
ಜೋಳ, ಶುಂಠಿ ಹಾಗೂ ಅಡಕೆ ಬೆಳೆ ಮಧ್ಯದಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು ಡ್ರೋಣ್ ಕ್ಯಾಮರಾದ ಮೂಲಕ ಪತ್ತೆ ಹಚ್ಚಿ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗುರುವಾರ ಬೆಳಗ್ಗೆ ತಾಲೂಕಿನ ಮಾಳೇಕೊಪ್ಪ, ಕೊಡಕಣಿ ಹಾಗೂ ಸಾರೇಕೊಪ್ಪ ಗ್ರಾಮದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ತಕ್ಷಣ ಜಿಲ್ಲಾ ಅಬಕಾರಿ ಉಪ ಆಯುಕ್ತ ವೈ. ಆರ್. ಲೋಕೇಶ್ ಅವರ ತಂಡ ದಾಳಿ ನಡೆಸಿ ಅಡಕೆ, ಶುಂಠಿ ಬೆಳೆ ಮಧ್ಯೆ ಬೆಳೆಯಾಗಿದ್ದ ಸುಮಾರು 5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಗಾಂಜಾ ಬೆಳೆದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಬಕಾರಿ ಉಪ ಆಯುಕ್ತರು, ದೇಶಕ್ಕೆ ಪಿಡುಗಾಗಿ ಕಾಡುತ್ತಿರುವ ಗಾಂಜಾವನ್ನು ನಿರ್ನಾಮ ಮಾಡಲು ಹಾಗೂ ಇದನ್ನು ಬೆಳೆಯದಂತೆ ರೈತರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಪಣ ತೊಟ್ಟಿದ್ದು, ತಾಲೂಕಿನಲ್ಲಿ ಮೊದಲ ಹಂತವಾಗಿ ಮಾಳೆಕೊಪ್ಪ, ಸಾರೇಕೊಪ್ಪ ಹಾಗೂ ಕೊಡಕಣಿ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ ಎಂದರು.
ಅಬಕಾರಿ ಪಿಎಸ್‌ಐ ದಯಾನಂದ ಮಾತನಾಡಿ, ಸಾರೇಕೊಪ್ಪ ಗ್ರಾಮದ ನಾಗಪ್ಪ ಅವರಿಗೆ ಸೇರಿದ ಅಡಕೆ ಹಾಗೂ ಶುಂಠಿ ಬೆಳೆಯಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡು ಜಮೀನಿನ ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಸಾಗರ ಉಪ ಅ ಧೀಕ್ಷಕಿ ಲೀಲಾವತಿ, ಸೊರಬ ಉಪ ನಿರೀಕ್ಷಕ ದಯಾನಂದ ಸಿಬ್ಬಂದಿಗಳಾದ ಗಂಗಾಧರಪ್ಪ, ರಘುಪತಿ, ಯಲ್ಲಪ್ಪ, ತೋಪಣ್ಣ, ಭಾನುಪ್ರಕಾಶ್, ಬಾಲಚಂದ್ರ ಪಾಲ್ಗೊಂಡಿದ್ದರು.