Advertisement

ಭೂಗರ್ಭದಲ್ಲೂ ಕಾರ್ಯಾಚರಣೆ ಮಾಡುವ ಡ್ರೋನ್‌

11:55 AM Dec 02, 2018 | Team Udayavani |

ಬೆಂಗಳೂರು: ಭೂಮಿಯ ಮೇಲಿರುವ ವಸ್ತುಗಳನ್ನು ಸೆರೆಹಿಡಿದು ತರುವುದು ಮಾತ್ರವಲ್ಲ; ಭೂಗರ್ಭದಲ್ಲಿರುವ ವಸ್ತುಗಳನ್ನೂ ಪತ್ತೆಹಚ್ಚುವ ಡ್ರೋನ್‌ ಬಂದಿದೆ. ಟೆರ್ರಾ ಡ್ರೋನ್‌ ಇಂಡಿಯಾ ಕಂಪೆನಿಯು ಇಂತಹದ್ದೊಂದು ಭೂಮಿಯಿಂದ ಸುಮಾರು ಒಂದು ಕಿ.ಮೀ. ಆಳದಲ್ಲಿರುವ ವಸ್ತುಗಳನ್ನು ಪತ್ತೆಹಚ್ಚುವ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಿದೆ. ಹೀಗೆ ಸುರಂಗವನ್ನು ಜಾಲಾಡುವ ವಿಶ್ವದ ಮೊದಲ ಡ್ರೋನ್‌ ಇದಾಗಿದೆ ಎಂದು ಆ ಕಂಪೆನಿ ಹೇಳಿಕೊಂಡಿದೆ. 

Advertisement

ಸಾಮಾನ್ಯವಾಗಿ ಇದನ್ನು ರಕ್ಷಣಾ ಇಲಾಖೆ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಳಸಬಹುದು. ಶತ್ರುಗಳು ಭೂಮಿಯ ಒಳಗಡೆ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದರೆ, ಇದರಿಂದ ಸುಲಭವಾಗಿ ಕಂಡುಹಿಡಿಯಬಹುದು. ಅದೇ ರೀತಿ, ಭೂಮಿಯಿಂದ ಎಷ್ಟು ಆಳದಲ್ಲಿ ಅದಿರು ಇದೆ ಎಂಬುದನ್ನು ಇದು ಮಾಹಿತಿ ನೀಡುತ್ತದೆ. ಪರಿಣಾಮ ಸಮಯ ಮತ್ತು ಹಣ ವ್ಯಯ ಆಗುವುದನ್ನು ತಪ್ಪಿಸಬಹುದು. 

ಅಷ್ಟೇ ಅಲ್ಲ, ಯಾವುದಾದರೂ ರೈಲ್ವೆ ಟನಲ್‌ ನಿರ್ಮಾಣ ಯೋಜನೆ ಸಂದರ್ಭದಲ್ಲೂ ಇದು ಅನುಕೂಲ ಆಗಲಿದೆ. ಆ ಮಾರ್ಗದಲ್ಲಿ ಹಾದುಹೋಗಿರುವ ಪೈಪ್‌ಲೈನ್‌, ಕೇಬಲ್‌ ಮತ್ತಿತರ ಯುಟಿಲಿಟಿಗಳ ಸಂಪೂರ್ಣ ಚಿತ್ರಣವನ್ನು ಇದು ನೀಡುತ್ತದೆ. ಅದನ್ನು ಆಧರಿಸಿ ಯೋಜನೆ ರೂಪುರೇಷೆ ನಿರ್ಧರಿಸಬಹುದು ಎಂದು ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಕಾರ್ಯನಿರ್ವಾಹಕ ಸಂಕಿತ್‌ ಬಾಗರ್‌ ಮಾಹಿತಿ ನೀಡಿದರು. 

ಈಗಿರುವ ವ್ಯವಸ್ಥೆಯಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತಿದೆ. ಆದರೆ, ಡ್ರೋನ್‌ನಲ್ಲಿ ಅಳವಡಿಸಿರುವ ಲೈಡಾರ್‌ನ ಲೇಸರ್‌ ಕಿರಣಗಳು ಭೂಗರ್ಭ ಹೊಕ್ಕು ಅಲ್ಲಿನ ವಸ್ತುಗಳನ್ನು ಪತ್ತೆಹಚ್ಚುತ್ತವೆ. ಇದಕ್ಕೆ ನಾಲ್ಕು ಚಕ್ರಗಳಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಚಲಿಸುತ್ತದೆ, ನೀರಿನಲ್ಲೂ ಹರಿದಾಡುತ್ತದೆ. ಆಗಸದಲ್ಲಿ ಹಾರಾಟವನ್ನೂ ನಡೆಸುತ್ತದೆ.

ಸುಮಾರು 300 ಗ್ರಾಂ ಇದರ ತೂಕ. 600 ಮೀಟರ್‌ನಿಂದ ಒಂದು ಕಿ.ಮೀ. ಆಳದವರೆಗಿನ ಮಾಹಿತಿ ನೀಡುತ್ತದೆ. ಯೂರೋಪ್‌, ಅಮೆರಿಕ ಸೇರಿದಂತೆ ಹತ್ತಾರು ದೇಶಗಳಲ್ಲಿ ಇದು ಈಗಾಗಲೇ ಬಳಕೆಯಲ್ಲಿದೆ. ಭಾರತವನ್ನು ಇನ್ನೂ ಪ್ರವೇಶಿಸಿಲ್ಲ. ಈ ಸಂಬಂಧ ನಾಗರಿಕ ವಿಮಾನಯಾನದ ಮಹಾನಿರ್ದೇಶನಾಲಯದ ಅನುಮತಿ ಎದುರುನೋಡುತ್ತಿದ್ದೇವೆ ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next