Advertisement

ಅಪರಾಧ ಪತ್ತೆಗೆ ಡ್ರೋಣ್‌! 24 ಗಂಟೆ ನಿರಂತರ ಸೇವೆ ಸಲ್ಲಿಸುವ ತೆಥೆರೆಡ್

01:52 AM Feb 21, 2019 | |

ಬೆಂಗಳೂರು: ದೇಶದ ಗಡಿ ಪ್ರದೇಶದ ನಿಗಾ, ಕಾಡು ಪ್ರಾಣಿಗಳ ಟ್ರ್ಯಾಕಿಂಗ್‌, ನಗರದಲ್ಲಿ ನಡೆಯುವ ಕುಕೃತ್ಯಗಳ ಕಣ್ಗಾವಲಿಗೆ ಡ್ರೋಣ್‌ ಮಾದರಿಯ ತೆಥೆರೆಡ್‌-ಅನ್‌ ಮ್ಯಾನ್‌ ಏರ್‌ ವೆಹಿಕಲ್‌, ಕಾರ್ಯಾಚರಣೆಗೆ ಸಿದ್ಧವಾಗಿದೆ.

Advertisement

ಡ್ರೋಣ್‌ ನಿರ್ದಿಷ್ಟ ಕಾಲಮಿತಿಯವರೆಗೆ ಮಾತ್ರ ಸೇವೆ ಸಲ್ಲಿಸಬಹುದು ಹಾಗೂ ನೆಟ್‌ವರ್ಕ್‌ ಇಲ್ಲದಿದ್ದರೆ, ವಿದ್ಯುತ್‌ಶಕ್ತಿ ಖಾಲಿಯಾದರೆ ಸೇವೆ ಸಲ್ಲಿಸುವುದಿಲ್ಲ. ಆದರೆ, ತೆಥೆರೆಡ್‌ ಹಾಗಲ್ಲ, ದಿನದ 24 ಗಂಟೆಯೂ ನಿರಂತರ ಸೇವೆ ಸಲ್ಲಿಸುವ ಕಾರ್ಯಕ್ಷಮತೆ ಹೊಂದಿದೆ.

ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಹೆಚ್ಚು ಉಪಯೋಗಕಾರಿಯಾದ ಹೊಸ ಮಾದರಿಯ ಯಂತ್ರ ಇದಾಗಿದೆ. ಇದನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ತಯಾರಿಸಿ, ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

ತೆಥೆರೆಡ್‌ನ‌ಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಕಾರ್ಯ ನಿರ್ವಹಿಸಬಲ್ಲ ಎರಡು ಅತ್ಯುನ್ನತ ತಂತ್ರಜ್ಞಾನದ ಕ್ಯಾಮರಾ ಇದೆ. ಅದು 360 ಡಿಗ್ರಿ ವ್ಯಾಪ್ತಿಯನ್ನು ಸುತ್ತುವರಿಯುವ ಸಾಮರ್ಥ್ಯ ಹೊಂದಿದೆ. ವಿಡಿಯೋ ರೆಕಾರ್ಡಿಂಗ್‌, ಇನ್‌ಬಿಲ್ಟ್ ಸ್ಟಬಿಲೈಜೇಷನ್‌, ಟಾರ್ಗೆಟ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಕೂಡ ಇದೆ.

ಡ್ರೋಣ್‌ ಮಾದರಿಯ ಯಂತ್ರ ಇದ್ದಾಗಿದ್ದು, ಡ್ರೋಣ್‌ ಗೆ ವೈರ್‌ ಇರುವುದಿಲ್ಲ. ಇದಕ್ಕೆ 100 ಮೀಟರ್‌ ವೈರ್‌ ಇರುತ್ತದೆ. ನೂರು ಮೀಟರ್‌ಗಿಂತ ಜಾಸ್ತಿ ಹಾರುವುದೂ ಇಲ್ಲ. ಆದರೆ, ಅತ್ಯಂತ ಸುರಕ್ಷಿತ, ಒಪ್ಟಿಕಲ್‌ ಫೈಬರ್‌ ಕಮ್ಯೂನಿಕೇಷನ್‌ ಲಿಂಕ್‌ ಕೂಡ ಹೊಂದಿದೆ. ವಿವಿಧ ಮಾದರಿಯಲ್ಲಿ ಮ್ಯಾಪಿಂಗ್‌ ಕೂಡ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಬಿಇಎಲ್‌ನ ಹಿರಿಯ ಅಧಿಕಾರಿ ಗುಯನಂತ್‌ ಮಾಟೆ ವಿವರಿಸಿದರು.

Advertisement

ಯಂತ್ರದ ಉಪಯೋಗ: ದೇಶದ ಭದ್ರತೆಯ ದೃಷ್ಟಿಯಿಂದ ಗಡಿ ಕಾವಲಿಗಾಗಿ, ಜಾತ್ರೆ, ಬೃಹತ್‌ ಸಭೆ, ಸಮಾರಂಭ, ಉತ್ಸವ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಲಕ್ಷಾಂತರ ಜನ ಒಂದೆಡೆ ಸೇರಿದಾಗ ಸುಲಭದಲ್ಲಿ ಕ್ರೌಡ್‌ ಅನಾಲಿಸಿಸ್‌ ಇದರಿಂದ ಮಾಡಬಹುದಾಗಿದೆ. ಸಿಟಿಗಳಲ್ಲಿ ಟ್ರಾμಕ್‌ ಮಾಹಿತಿಯನ್ನು ಅತಿ ವೇಗ ಮತ್ತು ಸುಲಭವಾಗಿ ಪಡೆಯಬಹುದಾಗಿದೆ. ನಗರ ಪ್ರದೇಶದಲ್ಲಿ ಅಪರಾಧ ಕೃತ್ಯಗಳ ಮೇಲೆ ನಿಗಾ ವಹಿಸಲು ಉಪಕಾರಿಯಾಗಲಿದೆ.

ಇದರ ಇನ್ನೊಂದು ವಿಶೇಷವೆಂದರೆ, ಕಾಡುಪ್ರಾಣಿಗಳ ಟ್ರ್ಯಾಕಿಂಗ್‌ನ್ನು ಸುಲಭವಾಗಿ ಮಾಡಬಹುದಾಗಿದೆ. 3ರಿಂದ 6 ಕಿಲೋಮಿಟರ್‌ವರೆಗೂ ಸುಲಭವಾಗಿ ಕಣ್ಗಾವಲು ಇಡುವ ಸಾಮರ್ಥ್ಯ ಹೊಂದಿರುವುದರಿಂದ, ಈ ವ್ಯಾಪ್ತಿಯೊಳಗೆ ಏನೇ ನಡೆದರೂ ಸುಲಭವಾಗಿ ಪತ್ತೆ ಹಚ್ಚಬಹುದು ಮತ್ತು ಅದಕ್ಕೆ ಸಂಬಂಧಿಸಿದ ಗುಣಮಟ್ಟದ ವಿಡಿಯೋ ಹಾಗೂ ಫೋಟೋ ಕೂಡ ದೊರೆಯಲಿದೆ.

ಡ್ರೋಣ್‌ನಂತೆ ಇದರಿಂದ ಯಾವುದೇ ದುಷ್ಪರಿಣಾಮ ಇಲ್ಲ. ಅತಿ ಸುಲಭವಾಗಿ ನಿಯಂತ್ರಣ ಮಾಡಬಹುದಾಗಿದೆ. ಹಾಗೆಯೇ ಎಲ್ಲಿ ಬೇಕಾದರೂ ಇದನ್ನು ಬಳಕೆ ಮಾಡಬಹುದು. ಇದರಲ್ಲಿ ಜಿಪಿಆರ್‌ಎಸ್‌, ಅಲ್ಟ್ರಾಸಿಸ್ಟಮ್‌ ವ್ಯವಸ್ಥೆ, ಲೊಕೇಷನ್‌ ಸೆಲೆಕ್ಟರ್‌ ಹೀಗೆ ಹಲವು ಹೊಸ ತಂತ್ರಜ್ಞಾನವೂ ಇದೆ.

ನಿರ್ದಿಷ್ಟ ಉದ್ದೇಶ ಅಥವಾ ಅಂಶವನ್ನು ಮಾನಿಟರ್‌ ನಲ್ಲಿ ನಮೂದಿಸಿ ಕಣ್ಗಾವಲಿಗೆ ಇಡಬಹುದಾಗಿದೆ. ಮನೆ, ಕಟ್ಟಡ ಅಥವಾ ಯಾವುದೇ ಪ್ರದೇಶದಲ್ಲಿ ಮುಕ್ತವಾಗಿ ಇದನ್ನು ಹಾರಿ ಬಿಡಬಹುದಾಗಿದೆ. 100 ಮೀಟರ್‌ ವೈರ್‌ ಸಂಪರ್ಕ ಇರುವುದರಿಂದ ಅದಕ್ಕಿಂತ ಹೆಚ್ಚು ಎತ್ತರ ಇದು ಹಾರುವುದಿಲ್ಲ. ಇದರಿಂದ ಅಪಾಯವೂ ಇಲ್ಲ. ತೆಥೆರೆಡ್‌ ಯಂತ್ರದ ಮೇಲ್ಭಾಗದಲ್ಲಿ ಬ್ಯಾಟರಿ ಇರುವುದರಿಂದ ಸದಾ ಕಾರ್ಯ ನಿರ್ವಹಿಸುತ್ತಿರುತ್ತದೆ. ಮಾನಿಟರ್‌ ಮೂಲಕ ಪವರ್‌ ಸಂಪರ್ಕವನ್ನು ನೀಡಲಾಗುತ್ತದೆ.

ರಾಜು ಖಾರ್ವಿ ಕೊಡೇರಿ 

Advertisement

Udayavani is now on Telegram. Click here to join our channel and stay updated with the latest news.

Next