ಶಿವಮೊಗ್ಗ: ಮಳೆಗಾಲದಲ್ಲಿ ಕದ್ದುಮುಚ್ಚಿ ಬಿತ್ತಲಾಗುವ ಗಾಂಜಾವನ್ನು ನಿರ್ನಾಮ ಮಾಡುವ ಉದ್ದೇಶದಿಂದ ಜಿಲ್ಲಾ ಅಬಕಾರಿ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಮೊದಲ ಬಾರಿ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಗಾಂಜಾ ಬೆಳೆಯುವುದು ಹೆಚ್ಚುತ್ತಲೇ ಇದ್ದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ದಟ್ಟ ಅರಣ್ಯ, ನಿರ್ಜನ ಜಮೀನು ಹಾಗೂ ಇತರ ಬೆಳೆಯೊಂದಿಗೆ ಗಾಂಜಾ ಹೆಚ್ಚಾಗಿ ಬೆಳೆಯುವುದರಿಂದ ಪತ್ತೆ ಕಾರ್ಯಕ್ಕೆ ತೊಡಕಾಗುತಿತ್ತು. ಅಲ್ಲದೆ ಗಾಂಜಾ ಬೆಳೆದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡು ಗಿಡ ಕಟಾವು ಮಾಡಲಾಗುತ್ತಿತ್ತು. ಇದೂ ಕೂಡ ದೊಡ್ಡ ಸವಾಲಾಗಿತ್ತು. ಹಳ್ಳಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೂ ಕೂಡ ಪೂರ್ಣ
ಪ್ರಮಾಣದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು ಗಾಂಜಾವನ್ನು ಚಿಗುರಿನಲ್ಲೇ ಚಿವುಟಿ ಹಾಕಲು ಅಬಕಾರಿ ಇಲಾಖೆ ಈ ಹೊಸ ಯೋಜನೆ ರೂಪಿಸಿದೆ.
2017ರಲ್ಲಿ ಗಾಂಜಾ ಬೆಳೆಯ 16 ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೇ ಪ್ರತಿ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಿವಮೊಗ್ಗವನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಟ್ಟ ಇಲಾಖೆ ಆ.1ರ ಬೆಳಗ್ಗೆ ಮೊದಲ ಹಂತದಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಲಿದೆ.
ಶಂಕಿತ ಪ್ರದೇಶಗಳಲ್ಲಿ ಸರ್ಚ್: ಆಗಸ್ಟ್ 1ರಿಂದ ಜಿಲ್ಲೆಯ ಹಲವೆಡೆ ಏಕಕಾಲಕ್ಕೆ ಕಾರ್ಯಾಚರಣೆಗೆ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಒಂದು ಡ್ರೋಣ್ ಬಳಸಿ, ಇದರ ಯಶಸ್ಸಿನ ಆಧಾರದ ಮೇಲೆ ಮತ್ತಷ್ಟು ಡ್ರೋಣ್ ಬಳಸಲು ಯೋಜನೆ ರೂಪಿಸಲಾಗಿದೆ.
ಇದಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಶಂಕಿತ ಪ್ರದೇಶಗಳಲ್ಲಿ ಡ್ರೋಣ್ ಹಾರಲಿದೆ. ಇದಕ್ಕೆ ಬೇಕಾದ ಕ್ಯಾಮರಾಗಳು, ಕಂಪ್ಯೂಟರ್, ತಂತ್ರಜ್ಞರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯಲ್ಲಿ ದಾಖಲಾದ ಗಾಂಜಾ ಪ್ರಕರಣಗಳ ಮಾಹಿತಿ ಕಲೆ ಹಾಕಿದ ಇಲಾಖೆ ಅಧಿಕಾರಿಗಳು ಆ ಎಲ್ಲ ಗ್ರಾಮಗಳಲ್ಲಿ ಮಳೆ ಗಾಲಕ್ಕೂ ಮುನ್ನವೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರು. ಗಾಂಜಾದಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಿತ್ತು. ಅದರ ಮುಂದಿನ ಭಾಗವಾಗಿ ನೇರವಾಗಿ ಹೊಲಗಳಲ್ಲಿ ಗಾಂಜಾ ಬೆಳೆ ಪತ್ತೆ ಮಾಡಲು ನಿರ್ಧರಿಸಿದೆ.
ನಾಲ್ಕು ತಾಲೂಕುಗಳಲ್ಲಿ ಹೆಚ್ಚು: ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮೆಕ್ಕೆಜೋಳ ಮತ್ತು ಹತ್ತಿ ಹೊಲದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಬೆಳೆಯ ಲಾಗುತ್ತದೆ. ಕಳೆದ ವರ್ಷ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಬೆಳೆಯಲಾಗಿತ್ತು. ಹೀಗಾಗಿ ಈ ತಾಲೂಕುಗಳಲ್ಲೇ ಮೊದಲು ಕಾರ್ಯಾಚರಣೆ ನಡೆಯಲಿದೆ. ಆ.1ರಿಂದ ಶಂಕಿತ ಪ್ರದೇಶಗಳಲ್ಲಿ ಸರ್ವೇ ನಡೆಸಲಾಗುವುದು. ಪ್ರಥಮ ಬಾರಿಗೆ ಟೆಕ್ನಾಲಜಿ ಬಳಸಿಕೊಳ್ಳುತ್ತಿದ್ದೇವೆ. ಇದರಲ್ಲಿ ಯಶಸ್ಸು ಸಿಕ್ಕರೆ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು.
● ವೈ.ಆರ್. ಮೋಹನ್ ಉಪ ಆಯುಕ್ತ, ಅಬಕಾರಿ ಇಲಾಖೆ, ಶಿವಮೊಗ್ಗ
● ಶರತ್ ಭದ್ರಾವತಿ