Advertisement

ಶಿವಾಜಿ ಜಯಂತಿ ಮೆರವಣಿಗೆಗೆ ಡ್ರೋಣ್‌ ಕಣ್ಣು

05:41 PM Apr 23, 2022 | Team Udayavani |

ಬೆಳಗಾವಿ: ಕರ್ನಾಟಕದಲ್ಲಿಯೇ ಅತಿ ವಿಜೃಂಭಣೆಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆ ಮೇ 4ರಂದು ನಗರದಲ್ಲಿ ನಡೆಯಲಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಡ್ರೋಣ್‌ ಕಣ್ಗಾವಲು ಇಡಲಿದೆ.

Advertisement

ಮೆರವಣಿಗೆ ಸಾಗುವ ಮಾರ್ಗವನ್ನು ಶುಕ್ರವಾರ ಪರಿಶೀಲನೆ ನಡೆಸಿದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು, ಮಾರ್ಗದುದ್ದಕ್ಕೂ ಎಲ್ಲಿಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ನೀಲ ನಕ್ಷೆ ತಯಾರಿಸಿಕೊಂಡರು.

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಉತ್ಸವದ ಮಹಾಮಂಡಳ ಪದಾಧಿಕಾರಿಗಳಿಂದ ಅವರು ಮಾಹಿತಿ ಪಡೆದುಕೊಂಡರು. ಎರಡು ವರ್ಷಗಳ ಕಾಲ ಕೋವಿಡ್‌ ಸಂಕಷ್ಟದಿಂದ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆ ನಡೆದಿರಲಿಲ್ಲ.

ಕೋವಿಡ್‌ ಸೋಂಕು ಇಳಿಮುಖ ಆಗಿದ್ದರಿಂದ ಈ ಬಾರಿ ಅತ್ಯಂತ ಸಂಭ್ರಮ-ಸಡಗರದಿಂದ ಮೆರವಣಿಗೆ ನಡೆಸಲು ಮಹಾಮಂಡಳ ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರೌಂಡ್ಸ್‌ ಹಾಕಿದ ಡಿಸಿಪಿ ಗಡಾದಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ವಹಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ರಂಜಾನ್‌, ಶಿವ ಜಯಂತಿ ಹಾಗೂ ಬಸವ ಜಯಂತಿ ಒಂದೇ ಅವಧಿಯಲ್ಲಿ ಬಂದಿದ್ದರಿಂದ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಮೆರವಣಿಗೆಗೆ ಇನ್ನೂ 10-12 ದಿನ ಇದ್ದರೂ ಈಗಲೇ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ಮೇಲೆ ನಿಗಾ ಇಟ್ಟಿದ್ದಾರೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಮೆರವಣಿಗೆಯ ಎರಡು ದಿನ ಮುನ್ನವೇ ಪೊಲೀಸರು ಹದ್ದಿನಗಣ್ಣು ಇಡಲಿದ್ದಾರೆ. ಮೇ 2, 3 ಹಾಗೂ 4ರಂದು ನಗರದಲ್ಲಿ ಡ್ರೋಣ್‌ ಸುತ್ತಾಡಲಿದೆ.

Advertisement

ಡ್ರೋಣ್‌ ಕ್ಯಾಮೆರಾ ಮೂಲಕ ಎಲ್ಲವೂ ಸೆರೆಯಾಗಲಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ಈ ಡ್ರೋಣ್‌ ಎಲ್ಲ ಕಡೆಗೆ ಕಣ್ಣಿಟ್ಟು ಎಲ್ಲ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ನಗರದಲ್ಲಿ ಸುತ್ತು ಹಾಕಿದ ಡಿಸಿಪಿ ಗಡಾದಿ ಅವರು ಕಾಕತಿ ವೇಸ್‌, ಶನಿವಾರ ಖೂಟ, ಗಣಪತಿ ಗಲ್ಲಿ, ಕಂಬಳಿ ಖೂಟ, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರೋಡ್‌ ಮೂಲಕ ಧರ್ಮವೀರ ಸಂಭಾಜಿ ವೃತ್ತದವರೆಗೆ ಸ್ಥಳ ಪರಿಶೀಲನೆ ನಡೆಸಿದರು. ರೂಪಕಗಳು ಸಾಗುವ ಮಾರ್ಗದಲ್ಲಿ ಬರುವ ಬೋಳು, ಸಂದಿಗಳನ್ನು ಪರಿಶೀಲನೆ ನಡೆಸಿದರು.

ಯಾವ ಮಾರ್ಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪೊಲೀಸರ ನಿಯೋಜನೆ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ನೋಡಿಕೊಂಡರು. ನಗರ ಸೇರಿದಂತೆ ರಾಜ್ಯದ ಹಲವು ಕಡೆಗೆ ಹಿಜಾಬ್‌, ಹಲಾಲ್‌-ಝಟ್ಕಾ, ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರ ವ್ಯಾಪಾರ ಬಹಿಷ್ಕಾರ, ಹುಬ್ಬಳ್ಳಿ ಗಲಭೆ ಸೇರಿದಂತೆ ಗಲಭೆಗಳು ಭುಗಿಲೇಳುತ್ತಿರುವುದರಿಂದ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಶಿವಾಜಿ ಮಹಾರಾಜ ಜಯಂತಿ, ರಂಜಾನ್‌ ಹಬ್ಬದ ವೇಳೆ ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಭಾಷೆ, ಧರ್ಮದ ಹೆಸರಿನಲ್ಲಿ ಪ್ರಚೋದನೆ ನೀಡುವ ಪೋಸ್ಟ್‌, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಎಲ್ಲರೂ ಶಾಂತಿಯಿಂದ ರಂಜಾನ್‌, ಶಿವ-ಬಸವ ಜಯಂತಿ ಆಚರಿಸಬೇಕು. ಯಾರಾದರೂ ಬಾಲ ಬಿಚ್ಚಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಗಡಾದಿ ಎಚ್ಚರಿಕೆ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆ ವೇಳೆ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಮಾರ್ಗದಲ್ಲಿ ಮೇ 2, 3 ಹಾಗೂ 4ರಂದು ಡ್ರೋಣ್‌ ಮೂಲಕ ಹದ್ದಿನಗಣ್ಣು ಇಡಲಾಗುವುದು. –ರವೀಂದ್ರ ಗಡಾದಿ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ

 

Advertisement

Udayavani is now on Telegram. Click here to join our channel and stay updated with the latest news.

Next