ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ “ದ್ರೋಣ’ ಚಿತ್ರದ ಮೂಲಕ ಈ ವರ್ಷದ ಸಿನಿ ಇನ್ನಿಂಗ್ಸ್ ಶುರು ಮಾಡಲು ರೆಡಿಯಾಗಿದ್ದಾರೆ. ಹೌದು, ಈ ವರ್ಷ ಶಿವಣ್ಣ ಅಭಿನಯದ ಮೊದಲ ಚಿತ್ರ “ದ್ರೋಣ’ ಮಾರ್ಚ್ 6ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಟ್ರೇಲರ್ ಮತ್ತು ಹಾಡುಗಳ ಮೂಲಕ “ದ್ರೋಣ’ನ ಝಲಕ್ ಅನ್ನು ಸಿನಿಪ್ರಿಯರ ಮುಂದೆ ತಂದಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ದ್ರೋಣ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ನಟ ಪುನೀತ್ ರಾಜಕುಮಾರ್, “ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಚೆನ್ನಾಗಿ ಮೂಡಿ ಬಂದಿದ್ದು, ಸ್ಕ್ರೀನ್ ಮೇಲೆ ನೋಡಿದಾಗ, ಇದೊಂದು ಶಿಕ್ಷಣದ ಕುರಿತಾದ ಕಥಾಹಂದರವಿರುವ ಸಿನಿಮಾ ಅಂಥ ಗೊತ್ತಾಗುತ್ತದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ಶಿವರಾಜಕುಮಾರ್, “ಎಲ್ಲರಿಗೂ ಶಿಕ್ಷಣ ಸಿಗಬೇಕು ಅಂಥ ಈ ಸಿನಿಮಾ ಹೇಳುತ್ತದೆ. ಇಲ್ಲಿ ಒಂದಷ್ಟು ಗಂಭೀರ ವಿಷಯಗಳನ್ನು ಹೇಳಲಾಗಿದೆ. ಇದರ ಶೂಟಿಂಗ್ ಸಮಯದಲ್ಲಿ ನನ್ನ ಶಾಲಾ-ಕಾಲೇಜು ದಿನಗಳು ಕೂಡ ನೆನಪಿಗೆ ಬಂದವು. ಇಡೀ ತಂಡ ತುಂಬಾ ಎನರ್ಜಿಟಿಕ್ ಆಗಿ ಈ ಸಿನಿಮಾವನ್ನು ಮಾಡಿದೆ. ಮೊದಲ ಬಾರಿಗೆ ಇದರಲ್ಲಿ ಶಿಕ್ಷಕನ ಪಾತ್ರ ಮಾಡಿದ್ದು, ಖುಷಿ ನೀಡಿದೆ. ಎಲ್ಲರಿಗೂ ಸಿನಿಮಾ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
“ದ್ರೋಣ’ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತೆಲುಗು, ತಮಿಳು ಹಾಗೂ ಮಲೆಯಾಳಂನ ಹಲವು ಚಿತ್ರಗಳಲ್ಲಿ ನಟಿಸಿರುವ ಇನಿಯಾ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಯುವ ಜೋಡಿಗಳಾದ ಸ್ವಾತಿ ಶರ್ಮಾ, ವಿಜಯ್ ಕಿರಣ್, ರಾಮಸ್ವಾಮಿ, ಬಾಬು ಹಿರಣ್ಣಯ್ಯ, ರಂಗಾಯಣ ರಘು, ರವಿಕಿಶನ್, ಸಾಧುಕೋಕಿಲ, ನಾರಾಯಣ ಸ್ವಾಮಿ, ಲಾವಣ್ಯ, ಶಕ್ತಿ, ಲಿಖೀತ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಮೋದ್ ಚಕ್ರವರ್ತಿ, “ಇದೊಂದು ಕೌಟುಂಬಿಕ ಕಥಾ ಹಂದರದ ಕಥೆ ಆಗಿದ್ದರೂ, ಇಲ್ಲಿ ಸೆಂಟಿಮೆಂಟ್-ಹಾಸ್ಯ ಎರಡೂ ಸಮನಾಗಿದೆ. ಶಿವಣ್ಣ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅವರು ಶಿಕ್ಷಕನಾಗಿದ್ದರೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣುತ್ತಾರೆ. ಇದರಲ್ಲಿ ಇಂದಿನ ಶಿಕ್ಷಣದ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರಿ ಶಾಲೆಗಳು ಯಾವ ಕಾರಣಕ್ಕೆ ಮುಚ್ಚುತ್ತಿವೆ, ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಎದುರಿಸುವ ಸಮಸ್ಯೆಗಳೇನು ಎನ್ನುವ ಅಂಶಗಳು ಚಿತ್ರದಲ್ಲಿದೆ’ ಎಂದು ಚಿತ್ರದ ಬಗ್ಗೆ ಒಂದಷ್ಟು ವಿವರಗಳನ್ನು ತೆರೆದಿಟ್ಟರು.
ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಫೂÉಟ್ ನುಡಿಸಿರುವ ರಾಮ್ ಕ್ರಿಶ್ ಈ ಚಿತ್ರದ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಾಗೇಂದ್ರ ಪ್ರಸಾದ್, ಅರಸು ಅಂತಾರೆ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣವಿದೆ. ಬಸವರಾಜ ಅರಸು ಸಂಕಲನವಿದೆ. “ಡಾಲ್ಫಿನ್ ಮಿಡಿಯಾ’ ಸಂಸ್ಥೆಯ ಮೂಲಕ ಮಹದೇವ್. ಬಿ, ಸಂಗಮೇಶ್. ಬಿ ಮತ್ತು ಶೇಶು ಚಕ್ರವರ್ತಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸದ್ಯ ಟ್ರೇಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ಮುಂದೆ ಸಣ್ಣ ದರ್ಶನ ಕೊಟ್ಟಿರುವ “ದ್ರೋಣ’, ಶಿವಣ್ಣ ಅಭಿಮಾನಿಗಳಿಗೆ ದೊಡ್ಡ ಪರದೆ ಮೇಲೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದ್ದಾನೆ ಅನ್ನೋದು ಮಾರ್ಚ್ ಮೊದಲ ವಾರ ಗೊತ್ತಾಗಲಿದೆ.