Advertisement

“ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌’ಸ್ಥಾಪನೆ: ಡಾ|ಅಶ್ವತ್ಥನಾರಾಯಣ

10:55 PM Nov 19, 2021 | Team Udayavani |

ಬೆಂಗಳೂರು: ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌’ಗೆ ಶುಕ್ರವಾರ ತೆರೆಬಿದ್ದಿದೆ. ಇದರ ಬೆನ್ನಲ್ಲೇ ಐಟಿ-ಬಿಟಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಲು ಉದ್ದೇಶಿಸಿರುವ ಸರಕಾರ, ಈ ನಿಟ್ಟಿನಲ್ಲಿ “ಸ್ಟಾರ್ಟ್‌ಅಪ್‌ ಸಿಲಿಕಾನ್‌ ವ್ಯಾಲಿ ಬ್ರಿಡ್ಜ್’ ರಚಿಸಲು ನಿರ್ಧರಿಸಿದೆ.

Advertisement

ಹೆಸರೇ ಸೂಚಿಸುವಂತೆ ಇದು ವಿದೇಶಿ ಸ್ಟಾರ್ಟ್‌ಅಪ್‌ಗ್ಳು ಮತ್ತು ನಮ್ಮಲ್ಲಿನ ತಂತ್ರಜ್ಞಾನ ಪ್ರತಿಭೆಗಳ ನಡುವೆ ಸಂಪರ್ಕ ಕೊಂಡಿ ಆಗಿ ಕಾರ್ಯನಿರ್ವಹಿಸಲಿದೆ. ಅಂದರೆ ಅಮೆರಿಕದಲ್ಲಿರುವ ಸ್ಟಾರ್ಟ್‌ಅಪ್‌ಗಳಿಗೆ ಇಲ್ಲಿನ ಪ್ರತಿಭಾನ್ವಿತ ತಂತ್ರಜ್ಞರು ಇಲ್ಲಿಂದಲೇ ಕೆಲಸ ಮಾಡುವುದರ ಜತೆಗೆ ಆ ಕಂಪೆನಿಗಳಲ್ಲಿ ಷೇರು ಸಹ ಪಡೆಯುವ ವ್ಯವಸ್ಥೆ ರೂಪಿಸಲು ಎಲ್ಲ ಪ್ರಯತ್ನಗಳು ನಡೆದಿವೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ|ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲ್ಲದೆ, ಬೆಂಗಳೂರಿನಾಚೆಗೂ ಸ್ಟಾರ್ಟ್‌ಅಪ್‌ ಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ “ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌’ ಸ್ಥಾಪಿಸಲಾಗುವುದು ಎಂದ ಅವರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಅದಕ್ಕೆ ಬೇಕಿರುವ ಅಗತ್ಯ ಪ್ರೋತ್ಸಾಹ, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಆದ್ಯತೆಯೂ ಇದೇ ಆಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕಂಪನಿಗಳು ಬೆಂಗಳೂರಿನಾಚೆಗೂ ಉದ್ಯಮ ಸ್ಥಾಪನೆಗೆ ಒಲವು ತೋರಿವೆ ಎಂದರು.

ಇದನ್ನೂ ಓದಿ:ಆಸ್ಟ್ರಿಯಾದಲ್ಲಿ ಮತ್ತೆ ಜಾರಿಯಾಗಲಿದೆ ಕೋವಿಡ್ ಲಾಕ್‌ಡೌನ್‌

48 ದೇಶಗಳು ಭಾಗಿ
ಈ ಬಾರಿ ನಾವು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ 30 ದೇಶಗಳು ಭಾಗಿಯಾಗಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಐರೋಪ್ಯ ಒಕ್ಕೂಟ, ಕಾಮನ್ ವೆಲ್ತ್ಒಕ್ಕೂಟದ ದೇಶಗಳು ಸೇರಿ ಒಟ್ಟು 48 ರಾಷ್ಟ್ರಗಳು ಭಾಗಿಯಾಗಿದ್ದು, ಉದ್ಯಮ ಸ್ಥಾಪನೆ ಹಾಗೂ ವಿಸ್ತರಣೆಗೆ ಉತ್ತಮ ವೇದಿಕೆಯಾಗಿ ಬಿಟಿಎಸ್‌’ ಕೆಲಸ ಮಾಡಿದೆ ಎಂದು ಸಚಿವರು ತಿಳಿಸಿದರು.

Advertisement

ಮುಂದಿನ ವರ್ಷ ರಜತೋತ್ಸವ
25ನೇ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್‌ ರಜತೋತ್ಸವ)ವನ್ನು ದೊಡ್ಡ ಮಟ್ಟದಲ್ಲಿ ವಿಭಿನ್ನವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಡಾ| ಅಶ್ವತ್ಥ ನಾರಾಯಣ ತಿಳಿಸಿದರು. 2022ರ ನವೆಂಬರ್‌ 16ರಿಂದ 18ರವರೆಗೆ ಈ ಮೇಳ ನಡೆಯಲಿದೆ. 25ನೇ ವರ್ಷಾಚರಣೆ ನಿಮಿತ್ತ ಕಾರ್ಯಕ್ರಮವು ಹಲವು ವಿಶೇಷತೆಗಳನ್ನು ಹೊಂದಿರಲಿದೆ ಎಂದರು.

ಮಂಗಳೂರಿನಲ್ಲಿ ಫಿನ್‌ಟೆಕ್‌ ಬ್ಯಾಂಕ್‌
ಸ್ಮಾರ್ಟ್‌ಫೋನ್‌ ಮೂಲಕ ಪಾವತಿ ಸೇವೆ ಸಹಿತ ಹಣಕಾಸಿಗೆ ಸಂಬಂಧಿಸಿ ಹಲವು ಸೇವೆಗಳನ್ನು ಒದಗಿಸುತ್ತಿರುವ ಹಣಕಾಸು ತಂತ್ರಜ್ಞಾನ ಉದ್ಯಮದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಾಧನೆ ಮಾಡಿದೆ. ಫಿನ್‌ಟೆಕ್‌ ಕಂಪೆನಿಗಳು, ಅದರಲ್ಲೂ ಸ್ಟಾರ್ಟ್‌ಅಪ್‌ಗಳು ಹೆಚ್ಚು ಬೆಳೆಯುತ್ತಿದ್ದು, ಫಿನ್‌ಟೆಕ್‌ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರಿನಲ್ಲಿ ಫಿನ್‌ಟೆಕ್‌ ಉತ್ಕೃಷ್ಟತಾ ಕೇಂದ್ರ ತೆರೆದು ಅಲ್ಲಿ, ಫಿನ್‌ಟೆಕ್‌ ಬ್ಯಾಂಕ್‌ ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next