Advertisement
ಹದಿಹರೆಯದಲ್ಲಿಯೇ ಬೈಕ್‌ಗಳ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡ ಅನೀಶ್ ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್‌ನಲ್ಲಿ ಪದವಿ ಪಡೆದ ನಂತರ ಬೆಂಗಳೂರಿನ ಎಕ್ಸೆಂಚರ್ ಐಟಿ ಕಂಪನಿಯಲ್ಲಿ ಅಸೋಸಿಯೇಟ್ ಸಾಫ್ಟ್ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೂ ಬೈಕ್‌ನಲ್ಲಿ ಹಲವು ಸಾಹಸಗಳನ್ನು ಪ್ರದರ್ಶಿಸುತ್ತಿದ್ದ ಅನೀಶ್ ಶೆಟ್ಟಿ, ಮುಂದೆ ರೇಸರ್ ಆಗಿ ಟ್ರ್ಯಾಕ್‌ಗೆ ಇಳಿದರು. ಸದ್ಯ ಭಾರತದ ಭರವಸೆಯ ರೇಸರ್ ಎನಿಸಿದ್ದಾರೆ. ಬೈಕ್ ಹಾಗೂ ಕಾರ್ ರೇಸ್‌ಗಳಲ್ಲಿ ಹಲವಾರು ಪ್ರಶಸ್ತಿ ಪಡೆದಿರುವ ಅನೀಶ್ ಅಂತಾರಾಷ್ಟ್ರೀಯ ಮಟ್ಟದ ರೇಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅಭಿಲಾಷೆ ಹೊಂದಿದ್ದಾರೆ. ಹೊಂಡಾ ಟೆನ್-10 ರೇಸಿಂಗ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೊಂಡಾ ಟೆನ್-10 ರೇಸಿಂಗ್ ತಂಡವು 5ರಿಂದ 10ನೇ ತರಗತಿ ಮಕ್ಕಳಲ್ಲಿ ರೇಸಿಂಗ್ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡುತ್ತಿದೆ.
Related Articles
ಚೆನ್ನೈನ ಮದ್ರಾಸ್ ಮೋಟರ್ ರೇಸ್ ಟ್ರ್ಯಾಕ್‌ನಲ್ಲಿ ನಡೆದ ಹೊಂಡಾ ಒನ್ ಮೇಕ್ ಚಾಂಪಿಯನ್‌ಶಿಪ್-2016ರಲ್ಲಿ ಗ್ರೂಪ್ ಡಿ.ಕೆಟಗರಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2017ರಲ್ಲಿ ಅಟೋ ಟ್ರ್ಯಾಕ್ ಮೋಟರ್ ನ್ಪೋರ್ಟ್‌ನಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2017ರಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 2016ರಲ್ಲಿ ಜರುಗಿದ ಇಂಡಿಯನ್ ನ್ಯಾಷನಲ್ ಮೋಟರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ಅಪ್ ಸಾಧನೆ ಮಾಡಿದ್ದಾರೆ. 2016ರಲ್ಲಿ ನಡೆದ ಹೊಂಡಾ ಒನ್ ಮೇಕ್ ಚಾಂಪಿಯನ್‌ಶಿಪ್‌ನಲ್ಲಿ ವಿನ್ನರ್ ಆಗಿದ್ದಾರೆ. 2016 ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಮಿತ್ಸುಬಿಷಿ ಥ್ರಿಲ್ಲೊ ಕಪ್ ಪಾಜೆರೊ ನ್ಪೋರ್ಟ್ ರೇಸ್‌ನಲ್ಲಿ ವಿಜೇತರಾಗಿದ್ದಾರೆ.
Advertisement
2016ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಫಾರ್ಮುಲಾ ಜೂನಿಯರ್ ರೇಸಿಂಗ್ ಸೀರೀಸ್, ಸಂಕೇಶ್ವರದಲ್ಲಿ ಜರುಗಿದ ಎಂಎಸ್‌ಎಂ ಅಟೋಕ್ರಾಸ್, ಹಾಗೂ ಫಾರ್ಮುಲಾ ಜೂನಿಯರ್ ರೇಸಿಂಗ್ ಸೀರೀಸ್. ಬೆಳಗಾವಿಯಲ್ಲಿ ನಡೆದ ಕೆಟಿಎಂ ರೆಡಿ ಟು ರೇಸ್ ಆರೇಂಜ್ ಡೇದಲ್ಲಿ ವಿಜಯಿಯಾಗಿದ್ದಾರೆ.
ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ. ಭಾರತದಲ್ಲಿಯೂ ರೇಸಿಂಗ್ ವ್ಯಾಮೋಹ ಹೆಚ್ಚುತ್ತಿದೆ. ಯುವಕರು ರೇಸಿಂಗ್‌ನಲ್ಲಿ ಸಾಧನೆ ಮಾಡಲು ಉತ್ಸುಕರಾಗಿದ್ದಾರೆ. ಅಂಥವರಿಗೆ ಸೂಕ್ತ ತರಬೇತಿ, ಪ್ರೋತ್ಸಾಹದ ಅವಶ್ಯಕತೆಯಿದೆ.
ಪಾಶ್ಚಾತ್ಯ ದೇಶಗಳಲ್ಲಿ 7 ರಿಂದ 8ನೇ ವರ್ಷದಲ್ಲಿಯೇ ಆಸಕ್ತಿ ಹೊಂದಿದವರಿಗೆ ರೇಸಿಂಗ್ ಕಲಿಕೆ ಆರಂಭಗೊಳ್ಳುತ್ತದೆ. ರೇಸರ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದಿದ್ದರೆ 28 ರಿಂದ 29 ವಯೋಮಿತಿಯೊಳಗೆ ಮಾಡಬೇಕಾಗುತ್ತದೆ. ಅನೀಶ್‌ಗೆ ಈಗ 23ರ ಹರೆಯ. ಅವರು ಇನ್ನೂ 4 ರಿಂದ 5 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬ ಹಂಬಲ ಅವರದು. ಅನೀಶ್, ವಿದೇಶದ ನೆಲದಲ್ಲೂ ಭಾರತದ ಪತಾಕೆ ಹಾರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಪ್ರಾಯೋಜಕರ ನೆರವು ಸಿಕ್ಕರೆ ಬೈಕ್ ರೇಸಿಂಗ್ ಪಂದ್ಯಗಳಲ್ಲಿ ಅನೀಶ್ ವಿದೇಶದಲ್ಲಿಯೂ ಭಾರತದ ಧ್ವಜ ಹಾರಿಸಬಲ್ಲರು.
ಗುರುವನ್ನೇ ಹಿಂದಿಕ್ಕಿದ ಶಿಷ್ಯ! 2017 ಸೆಪ್ಟೆಂಬರ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನೀಶ್ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಹಿಂದಿಕ್ಕಿದ್ದು ತಮ್ಮ ಗುರು ನರೇಶ್ ಬಾಬು ಅವರನ್ನು. ರೇಸಿಂಗ್ ಬಗ್ಗೆ ಮಾರ್ಗದರ್ಶನ ನೀಡಿದ ಗುರು ನರೇಶ್ ದ್ವಿತೀಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ. ಪ್ರಾಯೋಜಕರ ಸಹಕಾರ ಬೇಕಾಗಿದೆ:
ನನಗೆ ವಿದೇಶಗಳಲ್ಲಿ ನಡೆಯುವ ರೇಸಿಂಗ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆ. ನಮ್ಮ ದೇಶಕ್ಕೆ ಪ್ರಶಸ್ತಿ ತಂದುಕೊಡುವುದು ನನ್ನ ಉದ್ದೇಶ. ಪ್ರಾಯೋಜಕರ ಸಹಕಾರ ಇಲ್ಲದಿದ್ದರೆ ಅಂತಾರಾಷ್ಟ್ರೀಯ ರೇಸಿಂಗ್‌ಗಳಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ. ತರಬೇತಿ, ವಿಮಾನ ಖರ್ಚು, ವಸತಿ ವೆಚ್ಚ ದುಬಾರಿ. ಈ ದಿಸೆಯಲ್ಲಿ ಬ್ರ್ಯಾಂಡ್ ಪ್ರಮೋಶನ್‌ಗೆ ಮಾಡೆಲ್ ಆಗಲು ಕೂಡ ನಾನು ಸಿದ್ಧ ಎಂದು ಅನೀಶ್ ಶೆಟ್ಟಿ ಹೇಳುತ್ತಾರೆ. ವಿಶ್ವನಾಥ ಕೋಟಿ