Advertisement
ಒಂದೆಡೆ ಹೊಸ ಪರವಾನಿಗೆ ಸಿಗುತ್ತಿಲ್ಲ. ಇನ್ನೊಂದೆಡೆ ನವೀಕರಣವೂ ಆಗುತ್ತಿಲ್ಲ. ಮಂಗಳೂರಲ್ಲದೇ, ಬಂಟ್ವಾಳ ಹಾಗೂ ಪುತ್ತೂರು ಆರ್‌ಟಿಓ ಕಚೇರಿಗಳಲ್ಲೂ ಇದೇ ಸಮಸ್ಯೆ ಚಾಲಕರನ್ನು ಕಾಡುತ್ತಿದೆ. ಆರ್‌ಟಿಓ ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಪೇಪರ್‌ಲೆಸ್ ಮಾಡಲೆಂದು “ವಾಹನ-4′ ಹಾಗೂ “ಸಾರಥಿ 4′ ಸಾಫ್ಟ್ವೇರ್ ಯೋಜನೆಯನ್ನು ದೇಶಾ ದ್ಯಂತ ಜಾರಿಗೊಳಿಸಲಾಗಿತ್ತು. ಆನ್‌ಲೈನ್ ಮೂಲಕವೇ ಸಾಕಷ್ಟು ಕೆಲಸವಾಗುವುದ ರಿಂದ ಸಾರ್ವಜನಿಕರ ಕೆಲಸಗಳು ತ್ವರಿತಗತಿಯಲ್ಲಿ ಆಗುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮಂಗಳೂರಲ್ಲಿ ಇದು ಸಾಧ್ಯವೇ ಆಗಿಲ್ಲ.
ಕೆಲ ವರ್ಷಗಳಿಂದ ಸಾರಥಿ-3 ಸಾಫ್ಟ್ವೇರ್ ಅನುಷ್ಠಾನದಲ್ಲಿತ್ತು. ಎಲ್‌ಎಲ್‌ಆರ್ ಮತ್ತು ಡಿಎಲ್ ಪಡೆಯಲು ಅಭ್ಯರ್ಥಿಗಳು ವಿವರಗಳನ್ನು ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಬೇಕಿತ್ತು.ಬಳಿಕ ಆರ್‌ಟಿಒ ಕಚೇರಿಗೆ ತೆರಳಿ ಆನ್‌ಲೈನ್‌ನಲ್ಲಿ ನೀಡಿದ್ದ ದಾಖಲೆಗಳ ಪ್ರತಿ ಸಲ್ಲಿಸಿ ಸಹಿ ಹಾಕಬೇಕಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಸಾರಥಿ-4 ಸಾಫ್ಟ್ವೇರ್ ಅನುಷ್ಠಾನಕ್ಕೆ ತರಲಾಗಿದ್ದು, ಅದರಂತೆ ಅರ್ಜಿ ಪಡೆಯಲಾಗುತ್ತದೆ. ಚಾಲನಾ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಆದರೂ ಪರವಾನಿಗೆ ವಿತರಿಸುತ್ತಿಲ್ಲ. ಈ ಬಗ್ಗೆ ಆರ್‌ಟಿಓ ಕಚೇರಿಯನ್ನು ವಿಚಾರಿಸಿದರೆ, ಕೆಲವು ತಾಂತ್ರಿಕ ಕಾರಣದಿಂದ ಪರವಾನಗಿ ಮುದ್ರಣ ವಾಗುತ್ತಿಲ್ಲ. ಸದ್ಯವೇ ಸರಿಯಾಗಲಿದೆ ಎನ್ನುತ್ತಾರೆ. ಹಳೆಯ ಲೈಸೆನ್ಸ್ ಕೊಡುವುದು ಮುಗಿದಿಲ್ಲ!
ಇಲಾಖೆಯು ಸಾರಥಿ-4ರ ಮೂಲಕ ಪರವಾನಗಿ ನೀಡಬೇಕಾದರೆ ಸಾರಥಿ-3ರ ಎಲ್ಲಾ ಕಡತಗಳು ವಿಲೇವಾರಿಯಾಗಬೇಕು. ಅಧಿಕಾರಿಗಳು ಹೇಳುವ ಪ್ರಕಾರ ಸದ್ಯ ಸಾರಥಿ-3 ಕಡತ ವಿಲೇವಾರಿ ನಡೆಯುತ್ತಿದ್ದು, ಇನ್ನೂ ಹತ್ತು ದಿನಗಳು ಬೇಕು. ಆ ಬಳಿಕವಷ್ಟೇ ಡಿಎಲ್ ವಿತರಣೆ ಮಾಡಲಿದೆಯಂತೆ.
Related Articles
ಚಾಲನಾ ಪರವಾನಗಿ ನವೀಕರಣ ಸಮಯದಲ್ಲಿ ಸಾರಿಗೆ ಇಲಾಖೆಯಲ್ಲಿ ವಾಹನದ ವಾರಸುದಾರರಿಗೆ ಚಲನ್ ಕಟ್ಟಿದ ರಸೀದಿ ನೀಡುತ್ತಾರೆ. ಇದರಲ್ಲಿ ಡಿಎಲ್ ನಂಬರ್, ದಿನಾಂಕ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ. ಒಂದು ವೇಳೆ ವಾಹನ ಚಾಲನೆ ಸಮಯದಲ್ಲಿ ಆರ್‌ಟಿಒ ಅಧಿಕಾರಿಗಳು ತಪಾಸಣೆ ನಡೆಸಿದರೆ ಈ ರಸೀದಿಯನ್ನು ತೋರಿಸಬಹುದು. ಆದರೆ, ಮಂಗಳೂರಿನಿಂದ ದೂರದ ಊರಿಗೆ ತೆರಳುವ ಕೆಲ ಖಾಸಗಿ ಬಸ್‌ಗಳ ಚಾಲಕರಿಗೆ ಮಾಲಕರು ಡಿಎಲ್ ಕಡ್ಡಾಯ ಮಾಡಿದ್ದಾರೆ. ಇದೇ ಕಾರಣದಿಂದ ಅನೇಕ ಚಾಲಕರು ಕೆಲಸಕ್ಕೆ ತೆರಳುತ್ತಿಲ್ಲ. ಈ ಬಗ್ಗೆ “ಉದಯವಾಣಿ’ ಜತೆಗೆ ಪ್ರತಿಕ್ರಿಯಿಸಿದ ಖಾಸಗಿ ಬಸ್ಸಿನ ಚಾಲಕ ಮೋಹನ್,ನಾನು ಮುಂಬಯಿ-ಬೆಂಗಳೂರು-ಮಂಗಳೂರು ಖಾಸಗಿ ಬಸ್‌ನಲ್ಲಿ ಚಾಲಕನಾಗಿದ್ದೆ. ಈಗ ಪರವಾನಗಿ ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ತೆರಳಲಾಗುತ್ತಿಲ್ಲ. ಆರ್‌ಟಿಒ ಸಂಸ್ಥೆಗೆ ಹೋದರೆ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದಾರೆ ಎನ್ನುತ್ತಾರೆ.
Advertisement
2,500ರಷ್ಟು ಮಂದಿಗೆ ಪರವಾನಗಿ ಸಿಕ್ಕಿಲ್ಲಸಾರಥಿ 4 ಅನುಷ್ಠಾನಗೊಳ್ಳುವ ಮೊದಲು ಪ್ರತೀದಿನ ಕಡಿಮೆ ಅಂದರೂ ಸುಮಾರು 50ರಷ್ಟು ಅರ್ಜಿಗಳು ಚಾಲನಾ ಪರವಾನಿಗೆಗೆ ಬರುತ್ತಿದ್ದವು. ಅಂದರೆ ತಿಂಗಳಿನಲ್ಲಿ 5 ರಜೆ ಹೊರತುಪಡಿಸಿ 25 ದಿನದಲ್ಲಿ ಸುಮಾರು 1250ರಷ್ಟು ಅರ್ಜಿಗಳನ್ನು ಸ್ವೀಕರಿಸ ಲಾಗುತ್ತಿತ್ತು. ಅಂದರೆ ಎರಡು ತಿಂಗಳಿನಲ್ಲಿ 2500 ರಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಇವರ್ಯಾರಿಗೂ ಇನ್ನೂ ಪರವಾನಗಿ ಸಿಕ್ಕಿಲ್ಲ. ಜತೆಗೆ ನವೀಕರಣದ ಲೈಸೆನ್ಸ್‌ನ ಪ್ರಕಾರ ಸುಮಾರು 600ರಷ್ಟು ಅರ್ಜಿಗಳು ವಿಲೇವಾರಿ ಆಗಬೇಕಿದೆ. “10 ದಿನದೊಳಗೆ ಪರಿಹಾರ’
ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸಾರಥಿ-3 ವಿಲೇವಾರಿ ಕೆಲಸ ನಡೆಯುತ್ತಿದೆ. ಆದ್ದರಿಂದ ಸಾರಥಿ-4 ಚಾಲನಾ ಪರವಾನಗಿ ಮುದ್ರಣವಾಗುತ್ತಿಲ್ಲ. ಇದೇ ಕಾರಣದಿಂದ ಸುಮಾರು 3000ದಷ್ಟು ಡಿಎಲ್/ನವೀಕರಣ ಬಾಕಿ ಇದೆ. ಮುಂದಿನ 10 ದಿನಗಳೊಳಗೆ ಸರಿಪಡಿಸಲಾಗುತ್ತದೆ. ಮುಂದೆ ಈ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ.
-ಸಿ.ಡಿ. ನಾಯಕ್,
ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಗಳೂರು