ಮುಂಬಯಿ: ಮಹಾರಾಷ್ಟ್ರ ಮೋಟಾರ್ ವಾಹನ ಇಲಾಖೆ (ಎಂಎಂವಿಡಿ) ಶೀಘ್ರದಲ್ಲೇ ಹೊಸ ಸ್ಮಾರ್ಟ್ ಚಾಲನಾ ಪರವಾನಿಗೆಗಳನ್ನು ತ್ವರಿತ ಪ್ರತಿಕ್ರಿಯೆ (ಕ್ಯೂಆರ್) ಕೋಡ್‌ನೊಂದಿಗೆ ನೀಡಲಿದ್ದು, ಇದು ವಾಹನ ಚಾಲಕರ ಪರವಾನಿಗೆ ಅಸಲಿಯೇ ಎಂಬುವುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸುಲಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಶೇಷ ಕ್ರಮಕ್ಕೆ ಪ್ರಸ್ತುತ ಅಸ್ತಿತ್ವದಲ್ಲಿರುವ ಡ್ರೈವಿಂಗ್ ಪರವಾನಿಗೆಗಳು ಮಾನ್ಯವಾಗಿರುವುದಲ್ಲದೆ, ಚಾಲಕರು ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬಹುದು ಎಂದು ಎಂಎಂವಿಡಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೈಶಿಷ್ಟ್ಯಪೂರ್ಣ ಕ್ರಮದಿಂದ ಟ್ರಾಫಿಕ್ ಪೊಲೀಸ್ ಮತ್ತು ಕ್ಷೇತ್ರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿಗಳಿಗೆ ಪ್ರಕ್ರಿಯೆಯನ್ನು ಸರಾಗಗೊಳಿಸಲು ಉತ್ತಮ ಸಾಧನವಾಗಿದೆ. ಇದರ ಬಗ್ಗೆ ಪ್ಲೇ ಸ್ಟೋರ್ ಮುಖಾಂತರ ಯಾವುದೇ ಕ್ಯೂಅರ್‌ಕೋಡ್ ಸ್ಕ್ಯಾನರ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಪಡೆಯಬಹುದು ಎಂದು ಮಹಾರಾಷ್ಟ್ರದ ಸಾರಿಗೆ ಆಯುಕ್ತರಾದ ಶೇಖರ್ ಛನ್ನೆ ತಿಳಿಸಿದ್ದಾರೆ.
ಇದಕ್ಕಾಗಿ ಇಲಾಖೆಯು ನೂತನ ಸೇವಾ ಪೂರೈಕೆದಾರರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿದ್ದು, ಇದು ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಒಪ್ಪಂದದ ಪ್ರಧಾನ ದಿನಾಂಕದಿಂದ ಮೂರು ತಿಂಗಳೊಳಗೆ ಸೇವಾ ಪೂರೈಕೆದಾರರು ಹೊಸ ಪರವಾನಿಗೆಗಳನ್ನು ನೀಡಬೇಕಾಗುತ್ತದೆ.
ಈ ಮಧ್ಯೆ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಗಳಿಗಾಗಿ ಸಾಮಾನ್ಯ ಸ್ಮಾರ್ಟ್ ಕಾರ್ಡ್ ಸ್ವರೂಪಗಳನ್ನು ಕೇಂದ್ರ ಸರಕರಾವು ಅಂಗೀಕರಿಸಿದೆ. ಎಲ್ಲಾ ರಾಜ್ಯಗಳಾದ್ಯಂತ ಡಾಕ್ಯುಮೆಂಟ್‌ಗಳನ್ನು ಪ್ರಮಾಣೀಕರಿಸಲು ಮತ್ತು ಕೇಂದ್ರೀಕೃತ ಡಿಜಿಟಲ್ ರೆಪೊಸಿಟರಿಯನ್ನು ತಯಾರಿಸಲು ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯೂಆರ್ ಕೋಡ್ ಉಪಯೋಗ
ಈ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದ ನಂತರ, ಅಧಿಕೃತ ಚಾಲಕನ ಹೆಸರು, ವಸತಿ ವಿಳಾಸ, ಜನ್ಮ ದಿನಾಂಕ, ರಕ್ತ ಗುಂಪು, ಪರವಾನಗಿಯ ಮೌಲ್ಯಮಾಪಕ ಮತ್ತು ವಾಹನಗಳನ್ನು ಓಡಿಸಲು ಅಧಿಕಾರ ಹೊಂದಿದವರಿಗೆ ವೀಕ್ಷಿಸಲು ಸಾಧ್ಯವಾಗುತ್ತದೆ.