Advertisement

ಬೀದಿಗಿಳಿಯಲಿದ್ದಾರೆ ಚಾಲಕರು…ಪ್ರತಿಭಟಿಸಲು

12:02 PM Feb 26, 2017 | Team Udayavani |

ಬೆಂಗಳೂರು: ಓಲಾ-ಉಬರ್‌ ಟ್ಯಾಕ್ಸಿ ಚಾಲಕರ ಹೋರಾಟ ಮತ್ತೂಂದು ಮಜಲು ತಲುಪಿದೆ. ಮೂರ್‍ನಾಲ್ಕು ದಿನಗಳಿಂದ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದ ಟ್ಯಾಕ್ಸಿ ಚಾಲಕರು, ಮಂಗಳವಾರದಿಂದ ಸಾರ್ವಜನಿಕವಾಗಿಯೇ ಪ್ರತಿಭಟಿಸಲು ನಿರ್ಧರಿಸಿದ್ದಾರೆ. 

Advertisement

ಮೂರ್‍ನಾಲ್ಕು ದಿನಗಳಿಂದ ಸೇವೆಗೆ ಹೋಗದೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಹಾಗೂ ಓಲಾ-ಉಬರ್‌ ಕಂಪೆನಿಗಳು ಚಾಲಕರಿಗೆ ಸ್ಪಂದಿಸಿಲ್ಲ. ಮತ್ತೂಂದೆಡೆ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರದವರೆಗೆ ಕಾದುನೋಡಲು ತೀರ್ಮಾನಿಸಿರುವ ಚಾಲಕರು, ಮಂಗಳವಾರದಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಓಲಾ-ಉಬರ್‌ ಟ್ಯಾಕ್ಸಿ ಮಾಲಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ಈ ವಿಚಾರ ತಿಳಿಸಿದ್ದಾರೆ. 

“ಇತ್ತ ಬೇಡಿಕೆಗಳನ್ನೂ ಈಡೇರಿಸುತ್ತಿಲ್ಲ. ಅತ್ತ ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ. ಸರ್ಕಾರವೂ ಮಧ್ಯಪ್ರವೇಶಿಸುತ್ತಿಲ್ಲ. ಈ ಮಧ್ಯೆ ಮೌನ ಪ್ರತಿಭಟನೆ ನಡೆಸುತ್ತಿರುವ ಚಾಲಕರ ವಿರುದ್ಧವೇ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿ, ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಕಂಪೆನಿಗಳು ಮಾಡುತ್ತಿವೆ. ಆದ್ದರಿಂದ ಸೋಮವಾರ ಸಂಘದ ಸಭೆ ಕರೆದು ಹೋರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಪಾಷಾ ಹೇಳಿದರು. 

ಅದೇ ರೀತಿ, ಓಲಾ-ಉಬರ್‌ ಕಂಪೆನಿಗಳು ಕೂಡ ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಸೋಮವಾರದವರೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೆಜ್ಜೆ ಇಡಲು ನಿರ್ಧರಿಸಿವೆ. ಅಲ್ಲಿಯವರೆಗೆ ಲಭ್ಯವಿರುವ ವಾಹನಗಳಲ್ಲೇ ಸೇವೆ ಮುಂದುವರಿಸುವುದಾಗಿ ಕಂಪೆನಿಗಳ ವಕ್ತಾರರು ತಿಳಿಸಿದ್ದಾರೆ. 

ಸೇವೆ ನಿಲ್ಲಿಸಿ ಪ್ರತಿಭಟಿಸುತ್ತಿರುವ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ. “ಸದ್ಯ ತಿಂಗಳಿಗೆ 40 ಸಾವಿರ ರೂ. ಆದಾಯ ಬರುತ್ತಿದೆ. ಕಾರು ಖರೀದಿಯ  ಸಾಲದ ಕಂತು ತೀರಿಸಲು ಹೆಚ್ಚು ಹಣ ಖರ್ಚಾಗುತ್ತಿದೆ. ಆದರೆ, ಪ್ರತಿಭಟನೆಯಿಂದ ಈ ಆದಾಯಕ್ಕೆ ಕತ್ತರಿ ಬಿದ್ದಿದ್ದು, ಕುಟುಂಬ ನಿರ್ವಹಣೆ ಹೇಗೆಂಬ ಚಿಂತೆ ಶುರುವಾಗಿದೆ’ ಎಂದು ಇಂದಿರಾನಗರದ ಉಬರ್‌ ಕಂಪೆನಿಯೊಂದಿಗೆ ಜೋಡಣೆ ಕಾರು ನೋಂದಾಯಿಸಿಕೊಂಡ ಚಾಲಕ ಮಹೇಶ್‌ ಅಲವತ್ತುಕೊಂಡರು. 

Advertisement

ಟ್ಯಾಕ್ಸಿಗಳು ಸಿಗದೆ ಸಾರ್ವಜನಿಕರ ಪರದಾಟ
ಈ ಮಧ್ಯೆ ನಗರದಲ್ಲಿ ಓಲಾ-ಉಬರ್‌ ಟ್ಯಾಕ್ಸಿಗಳ ಸಂಚಾರ ತುಂಬಾ ವಿರಳವಾಗಿತ್ತು. ಆ್ಯಪ್‌ನಲ್ಲಿ ಯಾವುದೇ ದಿಕ್ಕಿನಿಂದ ಯಾವುದೇ ಮೂಲೆಗೆ ಗುರುತು ಮಾಡಿದರೂ, ಒಂದೇ ಕಾರು ಲಭ್ಯವಿರುತ್ತದೆ. ಆ ಸೇವೆಗೂ ಗ್ರಾಹಕರು 10ರಿಂದ 20 ನಿಮಿಷ ಕಾಯಬೇಕಾಗಿದೆ. ಇದರಿಂದ ಜನ ಪರ್ಯಾಯವಾಗಿ ಆಟೋಗಳ ಮೊರೆಹೋಗುತ್ತಿದ್ದಾರೆ. ಹೀಗಾಗಿ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next