ಬೆಂಗಳೂರು: ಬೆಂಗಳೂರಿನ ಮೆಟ್ರೋ ಹಳಿಗಳ ಮೇಲೆ ಚಾಲಕರಹಿತ ರೈಲು ಸಂಚರಿಸುವ ದಿನಗಳು ಸನ್ನಿಹಿತವಾಗಿವೆ. ಬೆಂಗಳೂರು ಮೆಟ್ರೋ ನಿಗಮದ ಪರಿಷ್ಕೃತ ಗುರಿಯಂತೆ ಏರ್ಪೋರ್ಟ್ ಲೈನ್ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರದ ವರೆಗಿನ ಮೆಟ್ರೋ ಕಾಮಗಾರಿ 2025 ರೊಳಗೆ ಪೂರ್ಣಗೊಂಡರೆ ಇನ್ನೆರಡು ವರ್ಷದಲ್ಲಿ ಸಿಲಿಕಾನ್ ಸಿಟಿಗೆ ಮಾನವರಹಿತ ಮೆಟ್ರೋ ರೈಲಿನ ಪರಿಚಯವಾಗಲಿದೆ.
ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ನೀಲಿ ಮಾರ್ಗ) ಮತ್ತು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ (ಗುಲಾಬಿ ಮಾರ್ಗ)ದಲ್ಲಿ ಚಾಲಕರಹಿತ ಮೆಟ್ರೋ ಓಡಿಸುವ ತೀರ್ಮಾನವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಈಗಾಗಲೇ ತೆಗೆದುಕೊಂಡಿದೆ. ಒಪ್ಪಂದದಂತೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಚಾಲಕ ರಹಿತ ರೈಲುಗಳ ನಿರ್ಮಾಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿತು.
ಕೋಚ್ ಪೂರೈಕೆಗೆ ಸಂಬಂಸಿದಂತೆ ಬಿಇಎಂಎಲ್, ಅಲ್ಸ್ಟೋಮ್ ಟ್ರಾನ್ಸ್ಪೊàರ್ಟ್ ಇಂಡಿಯಾ, ಟಿಟಾಗರ್ ವ್ಯಾಗನ್ಸ್ ಮತ್ತು ಸಿಎಎಫ್ ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ 2023ರಲ್ಲಿ 53 ಮೆಟ್ರೋ ಸೆಟ್ (318 ಕೋಚ್) ಪೂರೈಸುವ ಟೆಂಡರ್ನ್ನು 3,177 ಕೋಟಿ ರೂ. ಗಳಿಗೆ ಬಿಇಎಂಎಲ್ ತನ್ನದಾಗಿಸಿಕೊಂಡಿತ್ತು. ಈ ಟೆಂಡರ್ ಒಪ್ಪಂದದ ಪ್ರಕಾರ ಕೋಚ್ಗಳನ್ನು ತಯಾರಿಸಿ ಪೂರೈಸುವುದಲ್ಲದೆ, ಪರೀಕ್ಷೆ ಮತ್ತು ಮುಂದಿನ 15 ವರ್ಷಗಳವರೆಗೆ ನಿರ್ವಹಣೆಯನ್ನು ಕೂಡ ಬೆಮೆಲ್ ಮಾಡಬೇಕಿದೆ.
ಸುಧಾರಿತ ಕೋಚ್ಗಳು: ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವು 21.76 ಕಿ.ಮೀ. ಉದ್ದವಿದೆ. ಅದೇ ರೀತಿ ಕೇಂದ್ರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19 ಕಿಮೀ ಉದ್ದದ ನೀಲಿ ಮಾರ್ಗದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದೆ.
318 ಬೋಗಿಗಳ ಪೈಕಿ, ಆರು ಬೋಗಿಗಳ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಆರು ಬೋಗಿಗಳ 16 ರೈಲು ಕೇಂದ್ರ ರೇಷ್ಮೆ ಮಂಡಳಿಯಿಂದ- ಕೆಆರ್ ಪುರದವರೆಗೆ ಹಾಗೂ ಆರು ಬೋಗಿಗಳ 21 ರೈಲುಗಳನ್ನು ಕೆಆರ್ ಪುರ- ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಮಾಡಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಲಗೇಜ್ ರ್ಯಾಕ್, ಸುಧಾರಿತ ಅಗ್ನಿ ಸುರಕ್ಷತೆ, ಅಡಚಣೆ, ಹಳಿ ತಪ್ಪುವಿಕೆ ಪತ್ತೆ ವ್ಯವಸ್ಥೆ, ಪ್ಯಾಸೆಂಜರ್ ಅಲಾರಮ್ ಡಿವೈಸ್, ಸಿಬಿಟಿಸಿ ಆಧಾರಿತ ಸಿಗ್ನಲಿಂಗ್ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಈ ಮೆಟ್ರೋ ಕೋಚ್ಗಳು ಹೊಂದಿರಲಿದೆ. ಮೆಟ್ರೋ ಕೋಚ್ಗಳನ್ನು ಹೈ- ಟೆನ್ಸಿಲ್ ಆಸ್ಟೆನಿಟಿಕ್ ಸ್ಟೇನ್ಲಸ್ ಸ್ಟೀಲ್ ಬಳಸಿ ನಿರ್ಮಿ ಸಲಾಗುತ್ತಿದೆ. ಪ್ರತಿ ಮೆಟ್ರೋ ಬೋಗಿಯಲ್ಲೂ ಪರಿಣಾಮಕಾರಿ ಹವಾನಿಯಂತ್ರಣವನ್ನು ಒದಗಿಸಲು ಎರಡು ರೂಫ್-ಮೌಂಟೆಡ್ ಸಲೂನ್ ಏರ್ ಕಂಡಿಷನರ್ಗಳನ್ನು ಅಳವಡಿಸಲಾಗುತ್ತದೆ. ಐಪಿ-ಆಧಾರಿತ ಪ್ಯಾಸೆಂಜರ್ ಅನೌನ್ಸ್ಮೆಂಟ್ (ಪಿಎ) ಮತ್ತು ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆ (ಪಿಐಎಸ್) ಸಹ ಒಳಗೊಂಡಿರುತ್ತವೆ.ಬಿಇಎಂಎಲ್ನಲ್ಲಿ ಕೋಚ್ ಉತ್ಪಾದನಾ ಚಟುವಟಿಕೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಎಂಆರ್ಸಿಎಲ್ ಮತ್ತು ಬೆಮೆಲ್ ಅಧಿಕಾರಿಗಳು, ತಂತ್ರಜ್ಞರು ಭಾಗವಹಿಸಿದ್ದರು.
ದೇಶದಲ್ಲೇ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋವನ್ನು ನಾವು ನಿರ್ಮಿಸುತ್ತಿದ್ದೇವೆ. ಬಿಎಂಆರ್ಸಿಎಲ್ಗೆ ಅತ್ಯಾಧುನಿಕ ಬೋಗಿ ನಿರ್ಮಾಣ ಮಾಡಲು ಬದ್ದರಾಗಿದ್ದೇವೆ.
-ಶಂತನು ರಾಯ್, ಬಿಇಎಂಎಲ್ ಎಂಡಿ