ಬೆಂಗಳೂರು: ಲಾರಿಯ ಮೇಲೆ ಹೊದಿಸಿದ್ದ ಟಾರ್ಪಲ್ ಬಿಚ್ಚುವ ವೇಳೆ ರಿವರ್ಸ್ ಬಂದ ಮತ್ತೂಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಯಾಣ ಮೂಲದ ಅಜರುದ್ದೀನ್(24) ಮೃತ ಲಾರಿ ಚಾಲಕ.
ಯಶವಂತಪುರ ಎಪಿಎಂಸಿ ಯಾರ್ಡ್ 5ನೇ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಹರಿಯಾಣದಿಂದ ಲಾರಿಯಲ್ಲಿ ಬೆಳ್ಳುಳ್ಳಿ ಲೋಡ್ ತಂದಿದ್ದ ಅಜರುದ್ದೀನ್, ಲಾರಿ ಹಿಂಭಾಗ ನಿಂತುಕೊಂಡು ಟಾರ್ಪಲ್ ಬಿಚ್ಚುತ್ತಿದ್ದ. ಇದೇ ವೇಳೆ ಮತ್ತೂಂದು ಲಾರಿ ರಿವರ್ಸ್ ಬಂದಿದ್ದು, ಅಜರುದ್ದೀನ್‌ಗೆ ಡಿಕ್ಕಿ ಹೊಡೆದಿದೆ. ಆಗ ಎರಡು ಲಾರಿಗಳ ಮಧ್ಯೆ ಸಿಲುಕಿ ಅಜರುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಚಾಲಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಮತ್ತೂಂದು ಲಾರಿಯ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.