ಬೆಂಗಳೂರು: ಯುವಸಮೂಹಕ್ಕೆ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ “ಕೌಶಲ್ಯ ಭಾಗ್ಯ’ ಯೋಜನೆ ರೂಪಿಸಿದ್ದು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ 2 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಉದ್ದೇಶ.ಗ್ರಾಮೀಣ ಭಾಗದ ಯುವ ಜನರನ್ನೇ ಕೇಂದ್ರೀಕರಿಸಿ ಸರ್ಕಾರ ಹೊಸದಾಗಿ ಕೌಶಲ್ಯ ಭಾಗ್ಯ ಯೋಜನೆ ರೂಪಿಸಿದೆ.
ಈ ನಿಟ್ಟಿನಲ್ಲಿ ಪ್ರತಿಷ್ಠಿತ ಇನ್ಫೋಸಿಸ್, ಮಹೇಂದ್ರ ಅಂಡ್ ಮಹೇಂದ್ರ, ಅಶೋಕ್ ಲೈಲ್ಯಾಂಡ್, ಹೆಚ್‌ಸಿಎಲ್, ವಿಪ್ರೋ, ಡೆಲ್, ಐಬಿಎಂ. ಸೇರಿದಂತೆ ಹಲವು ಕಂಪನಿಗಳೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿದ್ದು, ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದೆ.
ಫ್ರಾನ್ಸ್, ಜಪಾನ್, ಇಟಲಿ, ಆಸ್ಟ್ರೇಲಿಯಾ, ದುಬೈ, ಕುವೈತ್ ಸೇರಿದಂತೆ ವಿದೇಶಿ ಕಂಪನಿಗಳ ಜತೆಯೂ ತರಬೇತಿ ಸಂಬಂಧ ಮಾತುಕತೆ ನಡೆಸಿದ್ದು, ಆ ಹೊಣೆಗಾರಿಕೆ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರಿಗೆ ನೀಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿನ ಯುವಕರು ಯಾರಿಗೂ ಕಡಿಮೆ ಇಲ್ಲ . ಆದರೆ ಅವರಿಗೆ ಆಂಗ್ಲ ಭಾಷಾ ಸಂವಹನೆ ಸಮಸ್ಯೆಯಾಗಿ ಕಾಡುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ವಾರದಲ್ಲಿ ಆರು ಗಂಟೆಗಳ ಕಾಲ ಇಂಗ್ಲೀಷ್ ಕಲಿಕಾ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ. ಅಲ್ಲದೆ ಪ್ರತಿಷ್ಠಿತ ಕಂಪನಿಗಳಲ್ಲಿ ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.