ಹರಿಹರ: ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕಾರ್ಗಿಲ್ ಕಂಪನಿಯ ಆರ್ಥಿಕ ಸಹಕಾರದೊಂದಿಗೆ ನಿರ್ಮಿಸಿರುವ 1000 ಮೀಟರ್ ಉದ್ದದ ನೀರು ಪೂರೈಕೆ ಪೈಪ್‌ಲೈನ್ ಯೋಜನೆಯನ್ನು ಕಾರ್ಗಿಲ್ ಏಷಿಯಾ ಫೆಸಿಪಿಕ್ ಸಿಇಒ ಪೀಟರ್ ವ್ಯಾನ್ ಡ್ನೂರ್ಶೇನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೈಪ್‌ಲೈನ್ ಅಳವಡಿಕೆ ದೋಷದಿಂದ ಗ್ರಾಮದ ಎಲ್ಲಾ ಪ್ರದೇಶಗಳಿಗೆ ನೀರು ಏಕರೂಪ ಪೂರೈಕೆಯಾಗದೆ ಸಮಸ್ಯೆಯಾಗಿತ್ತು. ಗ್ರಾಮದ ಕೆಳಭಾಗದ ಕುಟುಂಬಗಳಿಗೆ ಯಥೇತ್ಛ ನೀರು ದೊರೆಯುತ್ತಿದ್ದರೆ, ಕೆಳಭಾಗದವರಿಗೆ ನೀರೆ ಸಿಗುತ್ತಿರಲಿಲ್ಲ. ಬೇಸಿಗೆಯಲ್ಲಂತೂ ಹನಿ ನೀರಿಗೆ ಪರದಾಡುವಂತಾಗಿತ್ತು.
ಈಗ ಗ್ರಾಮದ ಕೆಳಭಾಗದಲ್ಲಿರುವ ಬೋರ್‌ವೆಲ್‌ನಿಂದ ಮೇಲ್ಭಾಗದಲ್ಲಿರುವ 1 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಗೆ ಪೈಪ್‌ಲೈನ್ ಜೋಡಿಸಿ, 1200 ಕುಟುಂಬಗಳಿಗೆ ನಿರಂತರವಾಗಿ ನೀರು ದೊರೆಯುವಂತೆ ಮಾಡಲಾಗಿದೆ. ಮುಂಚಿನಂತೆ ಗ್ರಾಮದ ಕೇಂದ್ರ ಭಾಗದಲ್ಲಿರುವ ದೂರದ ನಲ್ಲಿಯ ಬದಲಾಗಿ ತಮ್ಮ ಮನೆಗಳ ಬಳಿಯೇ ನಲ್ಲಿಗಳಿಂದ ನೀರನ್ನು ಪಡೆಯುತ್ತಿದ್ದಾರೆ ಎಂದರು.
ಗ್ರಾಪಂ ಪ್ರಸ್ತಾಪಿಸಿದಂತೆ ಸಮುದಾಯ ಸಹಭಾಗಿತ್ವ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಹೊಂದಿರುವ ಸಾಥಿ ಯೋಜನೆಯಡಿ ಟೆಕ್ನೋಸರ್ವ ಸಂಸ್ಥೆ ಕಾರ್ಗಿಲ್ ಆರ್ಥಿಕ ಸಹಕಾರದೊಂದಿಗೆ ಯೋಜನೆ ಪೂರೈಸಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ವಾಗೀಶ್, ಕಾರ್ಗಿಲ್ ಇಂಡಿಯಾದ ಚೇರ್ಮನ್ ಸಿರಾಜ್ ಚೌಧರಿ, ಕಾರ್ಗಿಲ್ ಫುಡ್ಸ್ ಸ್ಟಾರ್ಚ್ ಮತ್ತು ಸ್ವೀಟ್ನರ್ಸ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅನ್‌ಬೊಸ್ಮನ್, ಕಾರ್ಗಿಲ್ ಬೆಳ್ಳೂಡಿಯ ಹಂಪಯ್ಯ, ಗ್ರಾಮಸ್ಥರಾದ ಹನುಮನಗೌಡ, ಸುಭಾಷಗೌಡ ಮತ್ತಿತರರಿದ್ದರು.