ಬೆಂಗಳೂರು: ನಗರದ ನಾಲ್ಕು ಕಣಿವೆಗಳ ಕೋಳಚೆ ನೀರು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ತುಂಬಿಸುವ ಯೋಜನೆಯ ಮೊದಲ ಹಂತಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ. ಹೆಬ್ಟಾಳ ನಾಗವಾರ ಕಣಿವೆಯ ಕೋಳಚೆ ನೀರು ಸಂಸ್ಕರಿಸಿ ಕರೆಗಳಿಗೆ ಹರಿಸುವ ಏತ ನೀರಾವರಿ ಯೋಜನೆಯನ್ನು ದೇವನಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣಬೈರೇಗೌಡ ಹಾಗೂ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ, ಹೆಬ್ಟಾಳ ಕಣಿವೆ ನೀರು ಸಂಸ್ಕರಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರದ 65 ಕೆರೆಗಳಿಗೆ ತುಂಬಿಸಲಾಗುವುದು. ಆದರೆ, ನೀರನ್ನು ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಮಾತ್ರ ಬಳಸಬಹುದಾಗಿದೆ ಎಂದು ಹೇಳಿದರು.
883.54 ಕೋಟಿ ರೂ. ಮೊತ್ತದ ಈ ಯೋಜನೆಯಿಂದ ಪ್ರತಿನಿತ್ಯ 210 ದಶಲಕ್ಷ ಲೀಟರ್ ನೀರು ಲಭ್ಯವಾಗಲಿದ್ದು, ಈ ನೀರನ್ನು ಐದು ಪಂಪ್‌ಹೌಸ್‌ಗಳ ಮುಖಾಂತರ ಪಂಪ್ ಮಾಡಿ ಕೆರೆಗಳಿಗೆ ಹರಿಸಲಾಗುವುದು. ಏರುಗುರುತ್ವ ಕೊಳವೆಗಳ ಮೂಲಕ ಎತ್ತರದ ಪ್ರದೇಶದಲ್ಲಿನ ಕೆರೆಗಳಿಗೆ ಮೊದಲು ತುಂಬಿಸಿ ನಂತರ ಸರಣಿಯಲ್ಲಿನ ಕೆರೆಗಳಿಗೆ ಸ್ವಾಭಾವಿಕ ನಾಲೆಯ ಮೂಲಕ ತುಂಬಿಸಲಾಗುವುದು.
ಹೆಬ್ಟಾಳ-ನಾಗವಾರ ಕಣಿವೆ ವ್ಯಾಪ್ತಿಯಲ್ಲಿ ಮೂರು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿದ್ದು, ಹೆಬ್ಟಾಳ ಎಸ್‌ಟಿಪಿಯಿಂದ 150 ದಶಲಕ್ಷ ಲೀಟರ್, ಹೆಣ್ಣೂರು ಎಸ್‌ಟಿಪಿಯಿಂದ 40 ದಶಲಕ್ಷ ಲೀಟರ್ ಹಾಗೂ ಹೊರಮಾವು ಎಸ್‌ಟಿಪಿಯಿಂದ 20 ದಶಲಕ್ಷ ಲೀಟರ್ ನೀರು ಸಂಗ್ರಹಿಸಿ ಒಟ್ಟಾರೆಯಾಗಿ ಲಭ್ಯವಾಗುವ 210 ದಶಲಕ್ಷ ಲೀಟರ್ ನೀರನ್ನು ಹೆಣ್ಣೂರು ಬಾಗಲೂರು ರಸ್ತೆಯ ಮಾರ್ಗವಾಗಿ ಏರು/ಗುರುತ್ವ ಕೊಳವೆಗಳ ಮೂಲಕ ಬಾಗಲೂರು ಕೆರೆಗೆ ಹರಿಸಲು ಯೋಜಿಸಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯ 12 ಕೆರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ 9 ಕೆರೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು ಸೇರಿ ಒಟ್ಟು 65 ಕೆರೆಗಳು ಈ ಯೋಜನೆಯಡಿ ಬರುತ್ತವೆ. ಈ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಆ ಭಾಗದ ವಾರ್ಷಿಕ ವಾಡಿಕೆ ಮಳೆಯಿಂದ ಲಭ್ಯವಾಗುವ ನೀರೂ ಸೇರಿದಲ್ಲಿ ಅನೇಕ ಕೆರೆಗಳು ತುಂಬಲಿವೆ. ರೈತಾಪಿ ವರ್ಗಕ್ಕೂ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.
ಮುಂದಿನ ಹಂತದಲ್ಲಿ ಈ ಯೋಜನೆಯಲ್ಲಿ ತುಂಬಿದ ಕೆರೆಗಳಿಂದ ಇತರೆ ಕೆರೆಗಳಿಗೆ ಸಣ್ಣಪ್ರಮಾಣದ ವೆಚ್ಚದಲ್ಲಿಯೇ ನೀರು ತುಂಬುವ ಆಶಯವನ್ನೂ ಹೊಂದಲಾಗಿದೆ. ಈ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರನ್ನೂ ಮರುಬಳಕೆ ಮಾಡಿಕೊಳ್ಳುವ ರಾಜ್ಯಗಳ ಪೈಕಿ ಅಗ್ರಮಾನ್ಯ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.
ರೆ ನಿರ್ವಹಣೆ ವರ್ಗಾಯಿಸುವ ಪ್ರಕ್ರಿಯೆ ಶೀಘ್ರ
ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಲ್ಲಿರುವ 110 ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಿಕೊಳ್ಳುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದು ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.
18 ತಿಂಗಳ ಗಡುವು
ಯೋಜನೆಯನ್ನು ಮೆಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಗಡುವು ನೀಡಿದೆ.
* 883.54 ಕೋಟಿ ರೂ. ಮೊದಲ ಹಂತದ ಯೋಜನೆಯ ವೆಚ್ಚ
* 65-ಯೋಜನೆಯಿಂದ ತುಂಬಲಿರುವ ಕೆರೆಗಳು