ಮಹಾನಗರ: ಕದ್ರಿ ಪಾರ್ಕ್‌ನಲ್ಲಿ ಈ ಹಿಂದೆ ಓಡಾಡುತ್ತಿದ್ದ ಪುಟಾಣಿ ರೈಲು ಚಾಲನೆಗೆ ಯೋಗ್ಯವಲ್ಲ ಎಂದು ರೈಲ್ವೇ ಇಲಾಖೆ ದೃಢೀಕರಿಸಿದ ಹಿನ್ನೆಲೆ ಯಲ್ಲಿ ಹೊಸ ಪುಟಾಣಿ ರೈಲು ಅನುಷ್ಠಾನ ಗೊಳಿಸಲು ಚಿಂತಿಸಲಾಗಿತ್ತು. ಇದೀಗ 1.9 ಕೋ.ರೂ.ಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಪುಟಾಣಿ ರೈಲು ಕಾಮಗಾರಿ ನಡೆಯಲಿದೆ ಎಂದು ಶಾಸಕ ಜೆ.ಆರ್.ಲೋಬೋ ತಿಳಿಸಿದರು.
ಅವರು ಶನಿವಾರ ನಗರದ ಕದ್ರಿ ಉದ್ಯಾನವನದಲ್ಲಿ ಪುಟಾಣಿ ರೈಲು ಹಳಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕದ್ರಿ ಪಾರ್ಕ್‌ನಲ್ಲಿ ಕಾರ್ಯಾಚರಿಸು ತ್ತಿದ್ದ ಪುಟಾಣಿ ರೈಲು ಯೋಗ್ಯವಲ್ಲ ಎಂಬ ಕಾರಣಕ್ಕೆ 2013ರಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಅನು ದಾನದ ಇಲ್ಲದೆ ಹೊಸ ರೈಲು ಓಡಾಡು ತ್ತಿರಲಿಲ್ಲ. ಇದೀಗ 63 ಲಕ್ಷ ರೂ.ವೆಚ್ಚದಲ್ಲಿ ಹೊಸ ಪುಟಾಣಿ ರೈಲಿನ ಎಂಜಿನ್ ಮತ್ತು 3 ಬೋಗಿಗಳು ಮೈಸೂರಿನ ರೈಲ್ವೇ ಕಾರ್ಯಾಗಾರದಲ್ಲಿ ನಿರ್ಮಾಣ ವಾಗುತ್ತಿದೆ. ರೈಲ್ವೇ ಹಳಿಯ ಗೇಜ್ ಪರಿವರ್ತನೆ ಕಾಮಗಾರಿ 46 ಲಕ್ಷ ರೂ.ವೆಚ್ಚದಲ್ಲಿ ನಡೆಯಲಿದೆ. ಈಗಾಗಲೇ 23.46 ಲಕ್ಷ ರೂ.ಬಿಡುಗಡೆ ಅನುದಾನ ಬಿಡುಗಡೆಯಾಗಿದೆ. ಮುಂದಿನ ನವೆಂಬರ್ ಅಂತ್ಯದೊಳಗೆ ರೈಲು ಓಡಾಟ ಆರಂಭವಾಗಲಿದೆ ಎಂದರು.
ಕಾರ್ಪೊರೇಟರ್ ರೂಪಾ ಡಿ. ಬಂಗೇರ ಮಾತನಾಡಿ, ಕದ್ರಿ ಪಾರ್ಕ್‌ಗೆ ಆಗಮಿಸುವ ಪುಟಾಣಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಪುಟಾಣಿ ರೈಲು ಪುನಾರಂಭಗೊಳ್ಳಬೇಕು ಎಂಬ ಬೇಡಿಕೆ ಹಲವು ಸಮಯಗಳಿಂದ ಕೇಳಿಬರುತ್ತಿದೆ. ಇದರ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಕಾರ್ಪೊರೇಟರ್ ಲ್ಯಾನ್ಸಿ ಲಾಟ್ ಪಿಂಟೊ, ದ.ಕ.ಜಿ.ಪಂ. ಸಿಇಒ ಡಾ| ಎಂ.ಆರ್.ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.