ಮಹಾನಗರ: ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ನಿಮಿತ್ತ ಕ್ಷೇತ್ರದಲ್ಲಿ ನಡೆಸಿದ ಅಷ್ಟಮಂಗಳ ಪ್ರಶ್ನೆ ಯಲ್ಲಿ ಮಾರಿಯಮ್ಮ ಮಹಿಷ ಮರ್ದಿನಿ ತಾಯಿಯು ನೃತ್ಯ ಸೇವೆಯನ್ನು ಇಚ್ಛೆ ವ್ಯಕ್ತಪಡಿಸಿದ್ದ ಕಾರಣ ಕ್ಷೇತ್ರಕ್ಕೆ ಸಂಬಂ ಧಪಟ್ಟ ಗ್ರಾಮಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು ಎಂದು ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಹೇಳಿದರು.
ಕ್ಷೇತ್ರದಲ್ಲಿ ಯಕ್ಷಗಾನ ಕಲಾವಿದ ರಮೇಶ್ ಕುಲಶೇಖರ ಸಂಚಾಲಕತ್ವದಲ್ಲಿ ಬೋಳರ ಸರಸ್ವತಿ ಯಕ್ಷಗಾನ ಮಂಡಳಿಯ ವತಿಯಿಂದ ಚಿಕ್ಕಮೇಳ ಯಕ್ಷಗಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಶುರಾಮ ಸೃಷ್ಟಿಯ ದ.ಕ. ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಅನೇಕ ದೇವಿ ಕ್ಷೇತ್ರಗಳಿವೆ. ಎಲ್ಲ ಕ್ಷೇತ್ರಗಳಲ್ಲಿ ಯಕ್ಷಗಾನ ಮೇಳಗಳ ಮೂಲಕ ನೃತ್ಯ ಸೇವೆ ನಡೆಯುತ್ತಿದೆ.
ಯಕ್ಷಗಾನ ದೇವಿಗೆ ಅತ್ಯಂತ ಪ್ರೀತಿಯ ಸೇವೆಯಾಗಿದ್ದು, ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಆಕೆಯ ಇಚ್ಛೆಯಂತೆ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪ್ರಧಾನ ಅರ್ಚಕ ನಾರಾಯಣ ಭಟ್ ಕಲಾವಿದರಿಗೆ ಗೆಜ್ಜೆ ನೀಡುವ ವಿಧಿ ವಿಧಾನಗಳನ್ನು ಪೂರೈಸಿ ಕ್ಷೇತ್ರದ ಭಕ್ತರ ಇಷ್ಟಾರ್ಥವನ್ನು ಈಡೇರಿಸಲು ಪ್ರಾರ್ಥಿ ಸಿದರು. ವ್ಯವಸ್ಥಾಪಕ ಸಮಿತಿಯ ವೇಣು ಗೋಪಾಲ್ ಕೆ. ಪುತ್ರನ್, ದಿನೇಶ್‌ಪಿ.ಎಸ್., ಸೀತಾರಾಮ ಎ., ಅಖೀಲ ಭಾರತ ತುಳು ಒಕ್ಕೂಟದ ಖಜಾಂಚಿ ಮೂಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಸಂಜೆ 6ರಿಂದ ರಾತ್ರಿ 10ರ ತನಕ ಪ್ರದರ್ಶನ
ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ್ ಮಾತ ನಾಡಿ, ಸಂಜೆ 6ರಿಂದ ರಾತ್ರಿ 10ರ ತನಕ ನಡೆಯುವ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಜುಲೈ 7ರಿಂದ 14ರ ವರೆಗೆ ಜೀರ್ಣೋದ್ಧಾರದ ನಿಮಿತ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಬಿತ್ತರಿಸುವ ಕಾರ್ಯವನ್ನೂ ಕೂಡ ಮೇಳದ ವ್ಯವಸ್ಥಾಪಕರಿಗೆ ನೀಡಲಾಗಿದೆ ಎಂದರು.