Advertisement

ಪಚ್ಚನಾಡಿ ಘನತ್ಯಾಜ್ಯ ತೆರವು ಕಾಮಗಾರಿಗೆ ಚಾಲನೆ: ಹೈಕೋರ್ಟ್‌ಗೆ ಪಾಲಿಕೆ ಪ್ರಮಾಣಪತ್ರ ಸಲ್ಲಿಕೆ

06:41 PM Apr 12, 2022 | Team Udayavani |

ಬೆಂಗಳೂರು: ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ತೆರವುಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾಯಮೂರ್ತಿ ಆಲೋಕ್‌ ಆರಾಧೆ ಹಾಗೂ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಪಾಲಿಕೆ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದರು.

ಪ್ರಮಾಣಪತ್ರದಲ್ಲಿ ಏನಿದೆ:
ಗುತ್ತಿಗೆದಾರರಿಗೆ ಮಾ.8ರಂದು ನೀಡಿದ ಒಪ್ಪಿಗೆ ಪತ್ರ ಆಧರಿಸಿ ಗುತ್ತಿಗೆದಾರರು ಮಾ.11ರಂದು ಬ್ಯಾಂಕ್‌ ಖಾತರಿ ಒದಗಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಪ್ರಾಥಮಿಕ ಹಂತದ ಕೆಲಸ ಆರಂಭಿಸಿದ್ದಾರೆ. ಬಹಳ ವರ್ಷಗಳಿಂದ ಸಂಗ್ರಹವಾಗಿರುವ ಘನತ್ಯಾಜ್ಯದ ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರಕ್ಕೆ ಮೂಲಸೌಕರ್ಯಗಳನ್ನು ಸೃಷ್ಟಿಸಿಕೊಳ್ಳುವುದು ಈ ಪ್ರಾಥಮಿಕ ಹಂತದ ಕಾಮಗಾರಿ ಒಳಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಿವಿಲ್‌ ನಿರ್ಮಾಣ ಕಾಮಗಾರಿ, ಯಂತ್ರೋಪಕರಣಗಳ ಪೂರೈಕೆ, ಎಂಐಎಸ್‌/ಐಟಿ, ವೇ ಬ್ರಿಜ್‌, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ. ತರಬೇತಿ ಹಾಗೂ ಸಾಮರ್ಥಯ ವೃದ್ಧಿ, ಘಟಕ, ಯಂತ್ರೋಪಕರಣಗಳು, ಸಲಕರಣೆಗಳ ವಾರ್ಷಿಕ ನಿರ್ವಹಣೆ ಒಪ್ಪಂದ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ ಎಂದು ಪಾಲಿಕೆ ತಿಳಿಸಿದೆ.

ಯಂತ್ರೋಪಕರಣಗಳನ್ನು ಇಡಲು, ಸೊರಿಕೆ ಸಂಸ್ಕರಣ ಘಟಕ ಸ್ಥಾಪನೆ ಹಾಗೂ ಸಂಬಂಧಿಸಿದ ಇತರೆ ಸಿವಿಲ್‌ ಕಾಮಗಾರಿಗಳಿಗೆ ಸೂಕ್ತವಾಗುವಂತೆ ಭೂಭರ್ತಿ ಜಾಗದ ಒಟ್ಟು 77 ಎಕರೆ ಪ್ರದೇಶವನ್ನು ಗುತ್ತಿಗೆದಾರರು ಸರ್ವೇ ಮಾಡುತ್ತಿದ್ದಾರೆ ಎಂದು ಪ್ರಮಾಣಪತ್ರ ಸಲ್ಲಿಸಿರುವ ಪಾಲಿಕೆ ಆಯುಕ್ತರು, ಕಾಮಗಾರಿ ಪ್ರಗತಿಯ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next