Advertisement
“ನಿತ್ಯ ರಕ್ತ ಸ್ಪಂದನೆ’ ಕಾರ್ಯಕ್ರಮದಡಿ ವರ್ಷಾಂತ್ಯದೊಳಗೆ 5 ಸಾವಿರ ರಕ್ತದಾನಿಗಳನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮಾಡಲಾಗುವುದು ಎಂದು ಸಮಾಜ ಸೇವಕ, ನಿತ್ಯ ರಕ್ತ ಸ್ಪಂದನೆ ಸಂಯೋಜಕ ನಿತ್ಯಾನಂದ ವಳಕಾಡು ಅವರು ಹೇಳಿದರು.
ರಕ್ತದಾನ ಮಾಡಿದರೂ, ರಕ್ತ ಕೊಡುವವರಿಂದ ಸರಕಾರಿ ಆಸ್ಪತ್ರೆಯಲ್ಲಿ 1,550 ರೂ. ಹಣ ಪಡೆಯಲಾಗುತ್ತಿದೆ. ಹಿಂದೆ 700 ರೂ. ಇದ್ದಿತ್ತು. ಯಾವುದೇ ಕಾರಣಕ್ಕೂ ಈ ಹಣ ಪಡೆಯುವುದನ್ನು ನಿಲ್ಲಿಸಬೇಕು. ಅಗತ್ಯವಾಗಿ ಪಡೆಯಲೇ ಬೇಕಿದ್ದರೆ ಹಿಂದಿನ ದರವನ್ನೇ ನಿಗದಿಪಡಿಸಬೇಕು. ಸರಕಾರ ಎಲ್ಲ ಭಾಗ್ಯಗಳನ್ನೂ ಕೊಡುತ್ತಿರುವಂತೆ ಹಣ ಪಡೆಯುವುದನ್ನು ನಿಲ್ಲಿಸಿ ರಕ್ತ ಭಾಗ್ಯ ಕೊಡಬೇಕು. ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಿದಾತ ಮತ್ತೆ
ಆತನಿಗೇ ರಕ್ತ ಬೇಕಿದ್ದರೆ ಸಿಗುವುದಿಲ್ಲ. ಮತ್ತೆ ಆತನೂ ಹಣ ಕೊಟ್ಟು ರಕ್ತ ಪಡೆಯಬೇಕು. ಕೆಲ ಸಂದರ್ಭಗಳಲ್ಲಿ ಹಣ ಕೊಟ್ಟರೂ ಅವರ ಗುಂಪಿನ ರಕ್ತ ಸಿಗುವುದಿಲ್ಲ. ಈ ಕಾರಣದಿಂದ ರಕ್ತದಾನಿಗಳ ರಕ್ತದ ಗುಂಪಿನ ವರ್ಗೀಕರಣ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಅಗತ್ಯತೆ ಇರುವವರಿಗೆ ನಮ್ಮ ನಿತ್ಯ ರಕ್ತ ಸ್ಪಂದನ ಗುಂಪಿನ ಸದಸ್ಯರಿಂದಲೇ ರಕ್ತದಾನ ಮಾಡಿಸಲಾಗುವುದು ಎಂದು ವಳಕಾಡು ತಿಳಿಸಿದರು.
Related Articles
ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್ ಅವರು ಸಂಘಟನೆಗೆ ಚಾಲನೆಯನ್ನು ನೀಡಿ ಮಾತನಾಡಿ ರಕ್ತದಾನಿಗಳು ರಕ್ತ ಕೊಟ್ಟರೂ, ರಕ್ತ ಪಡೆದವರಿಂದ ಹಣ ಪಡೆಯುವುದು ಅದು ಅತ್ಯುನ್ನತ ಮಟ್ಟದ ರಕ್ತ ಪರೀಕ್ಷೆ ನಡೆಸಲು. ರಕ್ತದಲ್ಲಿ ದೋಷವಿದ್ದರೆ ಅದನ್ನು ಯಾರಿಗೂ ಕೊಡಲು ಬರುವುದಿಲ್ಲ. ಹಾಗಾಗಿ ರಕ್ತ ಪಡೆದ ಅನಂತರ ಅದನ್ನು ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಸರಕಾರದ ಸುತ್ತೋಲೆಂತೆಯೇ ಹಣ ಪಡೆಯಲಾಗುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ ಅವರು, ರಕ್ತದಾನ ಶಿಬಿರಗಳನ್ನು ನಡೆಸಿ ಆಸ್ಪತ್ರೆಯಲ್ಲಿ ಹೆಚ್ಚುವರಿ ರಕ್ತವನ್ನು ಸಂಗ್ರಸಿಡುವುದಕ್ಕಿಂತಲೂ ಅಗತ್ಯವಾಗಿರುವ ರಕ್ತವನ್ನು ದಾನಿಗಳಿಂದ ತತ್‌ಕ್ಷಣ ಪಡೆದು ರೋಗಿಗಳಿಗೆ ನೀಡುವುದು ಸರಿಯಾದ ಕ್ರಮ ಎಂದರು.
Advertisement
ಮಹಾಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ರತ್ನಾ ಎಸ್. ಬಂಗೇರ, ಅಮೃತ್ ಲ್ಯಾಬೊರೇಟರಿಯ ಎ. ರಾಘವೇಂದ್ರ ಕಿಣಿ, ಜೋಸ್ ಅಲುಕ್ಕಾಸ್ ಮಳಿಗೆಯ ಮ್ಯಾನೇಜರ್ ಫ್ರೆಡ್ ಆ್ಯಂಟೋನಿ ಉಪಸ್ಥಿತರಿದ್ದರು. ತೃಷಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಜೋಸ್ ಅಲುಕ್ಕಾಸ್ ಸಂಸ್ಥೆಯ 34 ಮಂದಿ ಸಿಬಂದಿ ಸ್ಪಯಂಪ್ರೇರಿತ ರಕ್ತದಾನಕ್ಕೆ ಹೆಸರು ನೋಂದಾಯಿಸಿದರು. ಈ ಪಟ್ಟಿಯನ್ನು ನಿತ್ಯಾನಂದ ವಳಕಾಡು ಅವರು ಸರ್ಜನ್ ಡಾ| ಮಧುಸೂದನ ನಾಯಕ್ ಅವರಿಗೆ ಹಸ್ತಾಂತರಿಸಿದರು.